ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಶಾಸಕರ ನಿರುತ್ಸಾಹ - ಕಲಾಪಕ್ಕೆ ಶಾಸಕ ಈಶ್ವರಪ್ಪ ಗೈರು

Last Updated 19 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಕಲಾಪದ ಮೊದಲದಿನವೇ ಶಾಸಕರ ನಿರಾಸಕ್ತಿ ಕಂಡು ಬಂದಿತು. ಕಲಾಪಕ್ಕೆ ಹಾಜರಾದ ಶಾಸಕರ ಸಂಖ್ಯೆ ಅತಿ ಕಡಿಮೆ. ಪುನಃ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವ ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಬೆಳಗಾವಿ ಜಿಲ್ಲೆಯವರೇ ಆದ ರಮೇಶ ಜಾರಕಿಹೊಳಿ ಅವರು ವಿಧಾನಸೌಧದತ್ತ ಸುಳಿಯಲೇ ಇಲ್ಲ.

ಸಂತಾಪ ಸೂಚನೆ ಮುಗಿಯುವವರೆಗೂ ಕೋರಂಗೆ ಅಗತ್ಯವಿರುವಷ್ಟು ಶಾಸಕರು ಮಾತ್ರ ಹಾಜರಿದ್ದರು. ಬಹುಪಾಲು ಆಸನಗಳು ಖಾಲಿ ಉಳಿದಿದ್ದವು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಅಧಿವೇಶನದಲ್ಲಿ ಭಾಗವಹಿಸುವು
ದಿಲ್ಲ ಎಂದು ಹೇಳಿದ್ದರಿಂದ ಜೆಡಿಎಸ್ ಶಾಸಕರ ಸಂಖ್ಯೆಯೂ ವಿರಳವಾಗಿತ್ತು.

ಈಶ್ವರಪ್ಪ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ತುರ್ತು ಮತ್ತು ಅನಿವಾರ್ಯ ಕಾರಣಗಳಿಂದ ಅಧಿವೇಶನದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಸೌಜನ್ಯದ ಪ್ರತಿಭಟನೆ -ಈಶ್ವರಪ್ಪ: ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ‘ಸಚಿವ ಸಂಪುಟಕ್ಕೆ ನನ್ನನ್ನು ತೆಗೆದುಕೊಳ್ಳದ್ದಕ್ಕೆ ಅಭಿಮಾನಿಗಳಿಗೆ ನೋವಾಗಿದೆ‌. ಇದು ನನಗೂ ನೋವುಂಟು ಮಾಡಿದೆ. ಆದ್ದರಿಂದ ಬೆಳಗಾವಿ ವಿಧಾನಮಂಡಲ ಅಧಿವೇಶನದಿಂದ ದೂರ ಉಳಿಯು ತ್ತೇನೆ’ ಎಂದು ಹೇಳಿದರು.

‘ಜನರು, ನಿಮ್ಮನ್ನೇಕೆ ಸಂಪುಟಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಅಪಮಾನ ಆಗ್ತಿದೆ. ಇದನ್ನು ಅರ್ಥ ಮಾಡಿಸಲು ಸೌಜನ್ಯದ ಪ್ರತಿಭಟನೆ ಮಾಡುತ್ತಿದ್ದೇನೆ’ ಎಂದು ಅಸಮಾಧಾನ ಹೊರಹಾಕಿದರು.

‘ಬೆಳಗಾವಿಗೆ ಹೋಗ್ತೀನಿ. ಅಧಿ ವೇಶನಕ್ಕೆ ಹೋಗಲ್ಲ. ಸಭಾಧ್ಯಕ್ಷ ರಿಂದ ಅನುಮತಿ ಪಡೆಯಲು ಹೋಗುತ್ತಿದ್ದೇನೆ ಎಂದರು. ‘ಇವತ್ತು, ನಾಳೆ ನಿಮ್ಮನ್ನ ಸಚಿವರನ್ನ ಮಾಡ್ತೀವಿ ಎಂದು ಸಿಎಂ ಬೊಮ್ಮಾಯಿ ಹೇಳುತ್ತಲೇ ಇದ್ದಾರೆ. ಯಾವ ಕಾರಣಕ್ಕೆ ತೆಗೆದುಕೊಳ್ಳುತ್ತಿಲ್ಲ ಗೊತ್ತಿಲ್ಲ’ ಎಂದರು.

ರಮೇಶ್‌ ಜಾರಕಿಹೊಳಿ ಅವರೂ ತಮ್ಮನ್ನು ಸಚಿವರನ್ನಾಗಿ ಮಾಡದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಅವರು ಈ ಬಾರಿ ಕಲಾಪಕ್ಕೆ ಹಾಜರಾಗುವ ಸಾಧ್ಯತೆ ಕಡಿಮೆ ಎಂದು ಮೂಲಗಳು ಹೇಳಿವೆ.

‘ದಮ್‌ ಬಿರಿಯಾನಿ ತಿನ್ನಿಸ್ತಾ ಇದ್ರು’

ರಾಜ್ಯಸಭೆಯ ಮಾಜಿ ಸದಸ್ಯ ಅಬ್ದುಲ್ ಸಮದ್‌ ಸಿದ್ದಿಕಿ ಅವರ ಮನೆ ಹೋದಾಗ ಅದೇನೊ ದಮ್‌... ಬಿರಿಯಾನಿ ಅಂತೆ, ಅದನ್ನ ತಿನ್ನಿಸ್ತಾ ಇದ್ರು ಎಂದು ಸಿದ್ದರಾಮಯ್ಯ ಅವರು ಉಪನಾಯಕ ಯು.ಟಿ.ಖಾದರ್‌ ಅವರನ್ನು ನೋಡಿದರು. ‘ನಮ್ಮ ಕಡೆ ಅದೆಲ್ಲ ಇಲ್ಲಾ ಮಾರಾಯರೇ, ಅದನ್ನು ದಮ್‌ ಬಿರಿಯಾನಿ‘ ಎನ್ನುತ್ತಾರೆ ಎಂದು ಖಾದರ್‌ ರಾಗ ಎಳೆದರು. ಸಮದ್‌ ಅವರಿಗೆ ಸಂತಾಪ ಸೂಚಿಸುವಾಗ ಸ್ವಾರಸ್ಯಕರ ಮಾತಿನ ತುಣುಕು ಕೇಳಿ ಬಂದಿತು.

‘ಸಾವನ್ನು ಕಣ್ಣಾರೆ ಕಂಡಿದ್ದು ಇದೇ ಮೊದಲು’

ಟಿಕೆಟ್‌ ಹಂಚಿಕೆ ಕುರಿತು ಕಾಂಗ್ರೆಸ್‌ ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿತ್ತು. ಅಲ್ಲಿ ಟಿಕೆಟ್‌ ಆಕಾಂಕ್ಷಿ ಶ್ರೀಶೈಲಬಿದರೂರು ಅವರು ಇದ್ದರು. ಇದಕ್ಕಿದ್ದಂತೆ ಅವರಿಗೆ ಹೃದಯಾಘಾತವಾಯಿತು. ಅವರ ನೋವಿನ ಬಳಲಿಕೆ ನಮಗೆಲ್ಲ ಆಘಾತ ಉಂಟು ಮಾಡಿತು. ಸಾವನ್ನು ಕಣ್ಣಾರೆ ಕಂಡಿದ್ದು ಇದೇ ಮೊದಲು ಎಂದು ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ ಹೇಳಿದರು.

‘ಶ್ರೀಶೈಲ ಅವರು ಗದಗ ಅಥವಾ ರೋಣದಿಂದ ಟಿಕೆಟ್‌ ಕೊಡಿಸಿ ಎಂದು ನನ್ನನ್ನು ಕೇಳಿದ್ದರು. ಅನಾರೋಗ್ಯದ ನಡುವೆಯೂ ಬೆಂಗಳೂರಿಗೆ ಬಂದಿದ್ದರು. ಗದಗ ಆಗಲ್ಲ, ಅಲ್ಲಿ ಎಚ್‌.ಕೆ.ಪಾಟೀಲ ಇದ್ದಾರೆ ರೋಣ ನೋಡೋಣ ಎಂದಿದ್ದೆ. ಮೀಟಿಂಗ್‌ಗೂ ಬಂದಿದ್ದರು. ಅಲ್ಲೇ ಹೃದಯಾಘಾತ ಆಯಿತು. ಅದೇನೋ ಹೇಳುತ್ತಾರಲ್ಲ... ರಾಜಕಾರಣವನ್ನು ನಾವು ಬಿಟ್ಟರೂ ರಾಜಕಾರಣ ನಮ್ಮನ್ನು ಬಿಡುವುದಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT