ಶನಿವಾರ, ಡಿಸೆಂಬರ್ 5, 2020
19 °C
ಕೊನೆ ಕ್ಷಣದ ತಂತ್ರಗಾರಿಕೆ: ಯಶಸ್ಸು ಯಾರಿಗೆ?

ಉಪಚುನಾವಣೆ: ಇಂದು ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕಾವೆಬ್ಬಿಸಿರುವ ಶಿರಾ ಮತ್ತು ಆರ್‌.ಆರ್.ನಗರ ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆ
ಯಲಿದ್ದು, ಎರಡೂ ಕ್ಷೇತ್ರಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಸೋಮವಾರ ಅಂತಿಮ ಹಂತದ ಕಸರತ್ತು ನಡೆಸಿದವು.

ಜಿದ್ದಾಜಿದ್ದಿನ ಚುನಾವಣೆಯ ಕಾರಣಕ್ಕೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ವ್ಯಾಪಕ  ಪೊಲೀಸ್‌ ಬಂದೋಬಸ್ತ್‌ ಮಾಡಿದೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಪರಸ್ಪರ ದೋಷಾರೋಪಣೆಯ ಜತೆಗೆ ಅಕ್ರಮಗಳನ್ನು ನಡೆಸಿರುವುದಾಗಿ ಚುನಾವಣಾ ಆಯೋಗಕ್ಕೆ ದೂರುಗಳನ್ನು ಸಲ್ಲಿಸಿವೆ.

ಈ ಚುನಾವಣೆಯು ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಗೆಲುವಿಗಾಗಿ ಬೆವರು ಹರಿಸುತ್ತಿವೆ. ಬಿಜೆಪಿ ಎರಡೂ ಕ್ಷೇತ್ರಗಳನ್ನು ಗೆದ್ದು ತನ್ನ ಬಲ ವೃದ್ಧಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎರಡೂ ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ ತಮ್ಮ ಶಕ್ತಿ ಸಾಬೀತು ಮಾಡುವ ತವಕದಲ್ಲಿದ್ದಾರೆ. ಶಿರಾ ಕ್ಷೇತ್ರ ಉಳಿಸಿಕೊಳ್ಳುವ ಬಗ್ಗೆ ಜೆಡಿಎಸ್‌ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

ರಾಜಕೀಯ ಪಕ್ಷಗಳ ಕಾರ್ಯ
ಕರ್ತರು ಸೋಮವಾರ ರಾತ್ರಿಯವರೆಗೆ ಮತದಾರರ ಮನೆಗಳಿಗೆ ಭೇಟಿ ನೀಡಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು. ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಹಣ ಹಂಚಿರುವ ಬಗ್ಗೆ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಿವೆ.

ಆರ್‌.ಆರ್‌.ನಗರವನ್ನು ಶತಾಯಗತಾಯ ಗೆಲ್ಲಬೇಕು ಎಂದು ಪಣ ತೊಟ್ಟಿರುವ ಡಿ.ಕೆ.ಸಹೋದರರು ಕ್ಷೇತ್ರದಿಂದ ಹೊರಗಿದ್ದೇ ಕಾರ್ಯತಂತ್ರಗಳನ್ನು ಹೆಣೆಯುವುದರಲ್ಲಿ ನಿರತರಾಗಿದ್ದರೆ, ಮುನಿರತ್ನ ತಮ್ಮ ವೈಯ್ಯಾಲಿಕಾವಲ್‌ ಮನೆಯಿಂದೇ ಆಪ್ತರ ಮೂಲಕ ಕಾರ್ಯನಿರ್ವಹಿಸಿದರು.

ಶಿರಾದ ಉಸ್ತುವಾರಿ ವಹಿಸಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಶಿರಾ ಕ್ಷೇತ್ರದ ಹೊರಗೆ ಬೀಡು ಬಿಟ್ಟಿದ್ದು, ಅಂತಿಮ ಹಂತದ ಕಾರ್ಯತಂತ್ರಗಳನ್ನು ರೂಪಿಸುವುದರಲ್ಲಿ ಮಗ್ನರಾಗಿದ್ದರು. ಮತದಾನ ಮುಗಿದ ಬಳಿಕವಷ್ಟೇ ಬೆಂಗಳೂರಿಗೆ ವಾಪಾಸಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಣದಲ್ಲಿರುವ ಪ್ರಮುಖರು: ಆರ್‌.ಆರ್‌.ನಗರದಲ್ಲಿ ಮುನಿರತ್ನ (ಬಿಜೆಪಿ), ಕುಸುಮಾ(ಕಾಂಗ್ರೆಸ್‌), ವಿ.ಕೃಷ್ಣಮೂರ್ತಿ(ಜೆಡಿಎಸ್‌), ಅರವಿಂದ (ಕೆಆರ್‌ಎಸ್‌). ಶಿರಾದಲ್ಲಿ ಡಾ.ರಾಜೇಶ್‌ಗೌಡ (ಬಿಜೆಪಿ), ಟಿ.ಬಿ.ಜಯಚಂದ್ರ (ಕಾಂ‌ಗ್ರೆಸ್‌), ಅಮ್ಮಾಜಮ್ಮ(ಜೆಡಿಎಸ್‌). ಅಲ್ಲದೆ ಇತರ ಸಣ್ಣ ಪಕ್ಷಗಳ ಅಭ್ಯರ್ಥಿಗಳು ಮತ್ತು ಪಕ್ಷೇತರರು ಸೇರಿ ಒಟ್ಟು 31 ಮಂದಿ ಕಣದಲ್ಲಿದ್ದಾರೆ.

ನಗದು, ಮದ್ಯ ವಶ: ಈ ಎರಡೂ ಕ್ಷೇತ್ರಗಳಲ್ಲಿ ಈವರೆಗೆ ₹ 97 ಲಕ್ಷದಷ್ಟು ನಗದು ಮತ್ತು ಮದ್ಯವನ್ನು ಚುನಾವಣಾ ಆಯೋಗ ವಶಪಡಿಸಿಕೊಂಡಿದೆ. ವಿವಿಧ ದೂರುಗಳಿಗೆ ಸಂಬಂಧಿಸಿದಂತೆ 141 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಪತ್ರಿಕೆ, ಟಿ.ವಿ ಮತ್ತು ಸಾಮಾಜಿಕ  ಮಾಧ್ಯಮಗಳಿಗೆ ಸಂಬಂಧಿಸಿದಂತೆ ಒಟ್ಟು 48 ದೂರುಗಳು ದಾಖಲಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು