₹33 ಸಾವಿರ ಕೋಟಿ ಸಾಲ: ಆರ್ಥಿಕ ಹೊಣೆಗಾರಿಕೆ ಕಾಯ್ದೆ ತಿದ್ದುಪಡಿಗೆ ಸಂಪುಟ ತೀರ್ಮಾನ

ಬೆಂಗಳೂರು: ಲಾಕ್‌ಡೌನ್ ಬಳಿಕ ಆದಾಯ ಸಂಗ್ರಹವಾಗದೇ, ಕೇಂದ್ರ ಸರ್ಕಾರ ಜಿಎಸ್‌ಟಿ ಪರಿಹಾರ ಕೊಡದೇ ಇರುವುದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗಾಗಿ ₹33 ಸಾವಿರ ಕೋಟಿ ಹೆಚ್ಚುವರಿ ಸಾಲ ಮಾಡಲು ನಿರ್ಧರಿಸಿದೆ.
ಇದಕ್ಕಾಗಿ ‘ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಕಾಯ್ದೆ’ಗೆ ತಿದ್ದುಪಡಿ ತರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ.
‘ಕೋವಿಡ್–19 ಸಾಂಕ್ರಾಮಿಕದ ಕಾರಣ ಆರ್ಥಿಕ ಬಿಕ್ಕಟ್ಟಿನಲ್ಲಿರುವ ರಾಜ್ಯ ಸರ್ಕಾರಗಳು ತಮ್ಮ ಜಿಎಸ್‌ಡಿಪಿಯ ಶೇ 5 ರಷ್ಟು ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಹಿಂದೆ ಸಾಲ ಪಡೆಯುವ ಪ್ರಮಾಣ ಜಿಎಸ್‌ಡಿಪಿಯ ಶೇ 3 ಇತ್ತು. ಹೊಸದಾಗಿ ಶೇ 2 ರಷ್ಟು ಹೆಚ್ಚಿಸಲಾಗಿದೆ. ಇದರ ಪ್ರಯೋಜನ ಪಡೆಯಲು ರಾಜ್ಯ ಸರ್ಕಾರ ಕಾಯ್ದೆಗೆ ತಿದ್ದುಪಡಿ ಮಾಡಲಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
‘ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿರುವುದರಿಂದ ಒಂದು ಸಲಕ್ಕೆ ಮಾತ್ರ ಹೆಚ್ಚುವರಿ ಸಾಲ ಪಡೆಯಲು ನಿರ್ಧರಿಸಿದೆ. ಸಾಲ ಪಡೆಯುವ ಪ್ರಮಾಣ ಶೇ 5 ಕ್ಕೆ ಹೆಚ್ಚಿಸಿರುವುದರಿಂದ ರಾಜ್ಯವು ₹36,000 ಕೋಟಿ ಸಾಲ ಪಡೆಯುವ ಅವಕಾಶ ಇದೆ. ₹33,000 ಕೋಟಿ ಸಾಲ ಪಡೆಯಲು ನಿರ್ಧರಿಸಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಅನುಕೂಲವಾಗುತ್ತದೆ. ಆರ್ಥಿಕ ಸ್ಥಿತಿಯನ್ನು ಹಳಿಗೆ ತರಲುಸಹಾಯಕವಾಗುತ್ತದೆ’ ಎಂದರು.
‘ಭಾರತ ಮಾತ್ರವಲ್ಲ ಇಡಿ ವಿಶ್ವವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ರಾಜ್ಯದಲ್ಲಿ ವರಮಾನ ಕುಸಿದಿದ್ದರಿಂದಾಗಿ ಅಭಿವೃದ್ಧಿಯೂ ಕುಂಠಿತವಾಗಿದೆ. ಹೆಚ್ಚುವರಿ ಸಾಲ ಮಾಡುವುದರಿಂದ ಹೊರೆ ಆಗುತ್ತದೆ. ಆದರೆ, ಬೇರೆ ದಾರಿ ಇಲ್ಲದೆ ಸಾಲ ಮಾಡಬೇಕಾಗಿದೆ’ ಎಂದು ಮಾಧುಸ್ವಾಮಿ ಹೇಳಿದರು.
ಇಲ್ಲಿಯವರೆಗೆ ತೆಗೆದುಕೊಳ್ಳುತ್ತಿದ್ದ ಸಾಲವನ್ನು ವಿವಿಧ ಅಭಿವೃದ್ಧಿಯೋಜನೆಗಳ ಮೇಲೆ ಬಂಡವಾಳ ಹೂಡಿಕೆಗೆ (ಕ್ಯಾಪಿಟಲ್ ಇನ್‌ವೆಸ್ಟ್
ಮೆಂಟ್) ಬಳಕೆ ಮಾಡಲಾಗುತ್ತಿತ್ತು. ಶಾಶ್ವತ ಆಸ್ತಿ ಸೃಷ್ಟಿ, ನೀರಾವರಿ ಯೋಜನೆ ಅಥವಾ ಉದ್ಯೋಗ ಸೃಷ್ಟಿಯ ಯೋಜನೆಗಳಿಗೆ ಬಂಡವಾಳ ಹೂಡಿಕೆ ಮಾಡಲಾಗುತ್ತಿತ್ತು. ಈ ಬಾರಿ ವೆಚ್ಚಗಳಿಗೂ ಬಳಕೆ ಮಾಡಲಾಗುತ್ತದೆ ಎಂದರು.
ಜಿಎಸ್‌ಟಿ ಪರಿಹಾರ ನೀಡಲೇಬೇಕು: ‘ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಾಜ್ಯಗಳು ಸಾಲ ಪಡೆಯುವಂತೆ ನೀಡಿರುವ ಸಲಹೆಗೂ ರಾಜ್ಯ ಸರ್ಕಾರ ಪಡೆಯುತ್ತಿರುವ ಸಾಲಕ್ಕೂ ಸಂಬಂಧವಿಲ್ಲ. ಜಿಎಸ್‌ಟಿ ಪರಿಹಾರ ₹11 ಸಾವಿರ ಕೋಟಿ ಕೊಡಬೇಕು ಎಂಬ ರಾಜ್ಯದ ಬೇಡಿಕೆಯಲ್ಲಿ ಯಾವುದೇ ಬದಲಾವಣೆಯೂ ಇಲ್ಲ, ರಾಜಿ ಮಾಡಿಕೊಂಡಿಲ್ಲ’ ಎಂದರು.
ಕೆಪಿಎಸ್‌ಸಿ: ಸಂಪುಟ ಉಪ ಸಮಿತಿ ರಚನೆ
2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ
ಗಳಲ್ಲಿ ಭಾಗಿಯಾಗಿರುವ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಬೇಕೇ, ಬೇಡವೇ ಎಂಬುದನ್ನು ತೀರ್ಮಾನಿಸಲು ಸಂಪುಟ ಉಪಸಮಿತಿ ರಚಿಸಲಾಗಿದೆ.
‘ಈ ಪ್ರಕರಣದ ಕುರಿತು ಉಪಸಮಿತಿಯು ಕೆಎಟಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳನ್ನು ಪರಾಮರ್ಶಿಸಲಿದೆ. ಸಮಿತಿಯಲ್ಲಿ ನಾನು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಇರುತ್ತೇವೆ’ ಎಂದು ಮಾಧುಸ್ವಾಮಿ ಹೇಳಿದರು.
‘ಪ್ರಾಸಿಕ್ಯೂಷನ್‌ಗೆ ರಾಷ್ಟ್ರಪತಿ ಅನುಮತಿ ನೀಡಬೇಕು. ಹಿಂದಿನ ಸರ್ಕಾರ ಆಕಸ್ಮಿಕವಾಗಿ ರಾಜ್ಯಪಾಲರಿಂದ ಅನುಮತಿ ಕೇಳಿತ್ತು. ಕಾನೂನು ಪ್ರಕಾರ ಅದು ಸರಿಯಲ್ಲ. ಹೀಗಾಗಿ, ಅವರ ಪ್ರಾಸಿಕ್ಯೂಷನ್ ಆಗಿಲ್ಲ. ಈ ಮಧ್ಯೆ ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಸದಸ್ಯರು, ಈ ಪ್ರಕರಣದಲ್ಲಿ ಗುರುತರವಾದ ಆಪಾದನೆಗಳು ಯಾವುದೂ ಇಲ್ಲ. ಆಯ್ಕೆಯಾದ ಅಭ್ಯರ್ಥಿಗಳಿಗೆ ತೊಂದರೆ ಮಾಡಬೇಡಿ ಎಂದು ಬೇಡಿಕೆ ಇಟ್ಟಿದ್ದರು’ ಎಂದರು.
₹4.01 ಲಕ್ಷ ಕೋಟಿಗೆ ಏರಿಕೆ
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ವರ್ಷ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ, ಈ ಸಾಲಿನಲ್ಲಿ ಮಾಡಲಿರುವ ಸಾಲವೂ ಸೇರಿದಂತೆ 2021ರ ಮಾರ್ಚ್ ಅಂತ್ಯಕ್ಕೆ ರಾಜ್ಯ ಸರ್ಕಾರದ ಸಾಲ
₹3.68 ಲಕ್ಷ ಕೋಟಿ ಮುಟ್ಟಲಿದೆ ಎಂದು ಅಂದಾಜಿಸಿದ್ದರು.
ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾವಿಸಲಾದ ಯೋಜನೆಗಳು ಹಾಗೂ ಖರ್ಚಿಗಾಗಿ ₹52 ಸಾವಿರ ಕೋಟಿ ಸಾಲ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಈ ಸಾಲವೂ ಸೇರಿಕೊಂಡಂತೆ ಈಗ ಹೆಚ್ಚುವರಿ ಸಾಲದ ಮೊತ್ತ ₹33 ಸಾವಿರ ಕೋಟಿ ಆಗುವುದರಿಂದಾಗಿ ಸರ್ಕಾರ ಮಾಡಲಿರುವ ಒಟ್ಟಾರೆ ಸಾಲದ ಮೊತ್ತ ₹4.01 ಲಕ್ಷ ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.