ಮಂಗಳವಾರ, ಡಿಸೆಂಬರ್ 1, 2020
18 °C

ಕಾಲೇಜುಗಳು ಪುನರಾರಂಭ: ವಿದ್ಯಾರ್ಥಿಗಳಿಗಾಗಿ ಕಾದು ನಿಂತ ಉಪನ್ಯಾಸಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂಟು ತಿಂಗಳ ಬಿಡುವಿನ ಬಳಿಕ ರಾಜ್ಯದಾದ್ಯಂತ ಪದವಿ ಮತ್ತು ಸ್ನಾತಕೋತ್ತರ ಪದವಿ
ಕಾಲೇಜುಗಳು ಮಂಗಳವಾರದಿಂದ ಪುನರಾರಂಭಗೊಂಡವು. ಉಪನ್ಯಾಸಕರೇ ವಿದ್ಯಾರ್ಥಿಗಳ ಬರುವಿಕೆಗಾಗಿ ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಅಂತಿಮ ವರ್ಷದ ವಿದ್ಯಾರ್ಥಿಗಳಿಗಷ್ಟೇ ಪ್ರವೇಶಾವಕಾಶ ಇದ್ದುದರಿಂದ ಮತ್ತು ಕೋವಿಡ್ ನೆಗೆಟಿವ್ ವರದಿ ತೋರಿಸುವುದು ಕಡ್ಡಾಯವಾಗಿದ್ದರಿಂದ ವಿದ್ಯಾರ್ಥಿಗಳ ಹಾಜರಿ ಶೇ 30ಕ್ಕಿಂತಲೂ ಕಡಿಮೆ ಇತ್ತು. ಸುರಕ್ಷತಾ ಕ್ರಮಗಳು ತೃಪ್ತಿದಾಯಕವಾಗಿದ್ದರೆ ಮಾತ್ರ ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಕೆಲವು ಪೋಷಕರು ನಿರ್ಧರಿಸಿದ್ದರಿಂದಲೂ ಹೆಚ್ಚು ವಿದ್ಯಾರ್ಥಿಗಳು ಕಾಣಲಿಲ್ಲ.

ಸಿಗದ ವರದಿ: ಕೋವಿಡ್ ಪರೀಕ್ಷೆ ಮಾಡಿಸಿದ್ದರೂ, ಹಬ್ಬ ಮತ್ತು ಸಾಲು ರಜೆ ಇದ್ದುದರಿಂದ ಹಲವರಿಗೆ ವರದಿ ಸಿಗದೆ ತೊಂದರೆಯಾಯಿತು. ಒಬ್ಬ ವಿದ್ಯಾರ್ಥಿಗೆ ಸೋಂಕು ತಗುಲಿದ್ದರೂ ಉಳಿದವರಿಗೆ ಹರಡಬಹುದು ಎಂಬ ಆತಂಕದಿಂದ, ಕೋವಿಡ್‌ ವರದಿ ತೋರಿಸದ ವಿದ್ಯಾರ್ಥಿಗಳಿಗೆ ಸಿಬ್ಬಂದಿ ಪ್ರವೇಶಾವಕಾಶ ನೀಡಲಿಲ್ಲ.

ವರದಿಗಾಗಿ ಆಯಾ ಜಿಲ್ಲಾ ಆಸ್ಪತ್ರೆಗಳ ಮುಂದೆ ವಿದ್ಯಾರ್ಥಿಗಳು ಕಾಯುತ್ತಿದ್ದರು. ಮೊಬೈಲ್‌ಗೆ ಸಂದೇಶ ಬಾರದಿದ್ದುದರಿಂದಲೂ ಹಲವರಿಗೆ ಕಾಲೇಜಿಗೆ ಬರಲಾಗಲಿಲ್ಲ. ಕೋವಿಡ್‌ ಪರೀಕ್ಷೆ ಬೇಡ, ಥರ್ಮಲ್‌ ಸ್ಕ್ಯಾನ್   ಮಾತ್ರ ಮಾಡಿ ಪ್ರವೇಶಕ್ಕೆ ಅವಕಾಶ ಕೊಡಿ ಎಂದು ಹಲವರು ಕೋರಿದರು. ಪೋಷಕರ ಅನುಮತಿ ಪತ್ರವಿಲ್ಲದ ವಿದ್ಯಾರ್ಥಿಗಳಿಗೂ ಪ್ರವೇಶ ನಿರಾಕರಿಸಲಾಯಿತು.

ಶುಲ್ಕ ಕಟ್ಟದವರೂ ಬಂದಿಲ್ಲ: ‘ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶುಲ್ಕದ ಹೊರೆ ಹೆಚ್ಚು ಇರುವುದಿಲ್ಲ. ಆದರೆ, ಖಾಸಗಿ ಕಾಲೇಜುಗಳ ಅನೇಕ ವಿದ್ಯಾರ್ಥಿಗಳು ಹಿಂದಿನ ವರ್ಷದ ಶುಲ್ಕದಲ್ಲಿ ಬಾಕಿ ಉಳಿಸಿಕೊಂಡಿದ್ದಾರೆ. ಈಗ ಕಾಲೇಜಿಗೆ ಬಂದರೆ ಶುಲ್ಕ ಕೇಳುತ್ತಾರೆ. ಪೂರ್ಣ ಪ್ರಮಾಣದಲ್ಲಿ ತರಗತಿಗಳು ಪ್ರಾರಂಭವಾದ ಮೇಲೆ ಹೋಗೋಣ ಎಂದು ಕೆಲವರು ಭಾವಿಸಿರಬಹುದು’ ಎಂದೂ ನಗರದ ಆಕ್ಸಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಆರ್. ಸುಪ್ರೀತ್ ಹೇಳಿದರು.

ಗುಲಾಬಿ, ಚಾಕೋಲೆಟ್ ನೀಡಿ ಸ್ವಾಗತ: ಬಾಗಲಕೋಟೆಯ ನವನಗರದ ಸೆಕ್ಟರ್ ನಂ 43ರಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಂಗಳವಾರ ವಿದ್ಯಾರ್ಥಿ ಗಳನ್ನು ಶಿಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕಾಲೇಜು ಪ್ರವೇಶ ದ್ವಾರದಲ್ಲಿಯೇ ಅವರ ಕೈಗೆ ಸ್ಯಾನಿಟೈಸರ್ ಹಚ್ಚಿ, ಗುಲಾಬಿ ಹೂವು ಹಾಗೂ ಚಾಕೋಲೆಟ್ ನೀಡಿದರು. ಮಾಸ್ಕ್ ಕೂಡ ವಿತರಿಸಿದರು.

ಬಸ್‌ ಪಾಸ್ ಸಿಗದೆ ತೊಂದರೆ: ಉತ್ತರ ಕರ್ನಾಟಕದ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ವಿರಳವಾಗಿತ್ತು. ಗ್ರಾಮೀಣ ಭಾಗದಿಂದ ಸಾರಿಗೆ ಬಸ್ ಇರದಿರುವುದು ಹಾಗೂ ರಿಯಾಯಿತಿ ದರ ಬಸ್ ಪಾಸ್ ಸಿಗದಿರುವುದರಿಂದಲೂ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು.

ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಲಿದೆ: ಡಿಸಿಎಂ

ಬೆಂಗಳೂರಿನ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಿದರು.

‘ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹಂತ–ಹಂತವಾಗಿ ಹಾಜರಾತಿ ಹೆಚ್ಚಾಗಲಿದೆ. ಯುಜಿಸಿ ಮಾರ್ಗಸೂಚಿಯಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿದರು. 

‘ಭೌತಿಕ ತರಗತಿಗೆ ಹಾಜರಾಗಲೇಬೇಕು ಎಂದು ಒತ್ತಾಯಿಸುವುದಿಲ್ಲ. ಆನ್‌ಲೈನ್‌ ತರಗತಿಗಳು ನಡೆಯಲಿವೆ. ಕಾಲೇಜಿಗೆ ಹಾಜರಾಗುವವರು ಕೋವಿಡ್‌ ನೆಗೆಟಿವ್ ವರದಿ ನೀಡಲೇಬೇಕು. ವಿದ್ಯಾರ್ಥಿಗಳಿಗೆ ಉಚಿತವಾಗಿ ಕೋವಿಡ್ ಪರೀಕ್ಷೆ ಮಾಡಿಸಲು ಎಲ್ಲ ವ್ಯವಸ್ಥೆ ಮಾಡಲಾಗಿದೆ’ ಎಂದು ತಿಳಿಸಿದರು.

ಶೀಘ್ರವೇ ಸಿಇಟಿ ಕೌನ್ಸಿಲಿಂಗ್: ‘ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಕೌನ್ಸೆಲಿಂಗ್  ಕೋವಿಡ್‌ ಕಾರಣದಿಂದ ವಿಳಂಬವಾಗಿದೆ. ಶೀಘ್ರವೇ ನಡೆಸಲಾಗುವುದು’ ಎಂದು ಅಶ್ವತ್ಥನಾರಾಯಣ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.