ಶುಕ್ರವಾರ, ಮೇ 20, 2022
26 °C

ಆರು ತಿಂಗಳು ಪೂರೈಸಿದ ಬೊಮ್ಮಾಯಿಗೆ ಕಾಂಗ್ರೆಸ್‌ನಿಂದ 6 ಪ್ರಶ್ನೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆರು ತಿಂಗಳಾಗಿರುವ ಹಿನ್ನೆಲೆಯಲ್ಲಿ ನಿರುದ್ಯೋಗ, ಆರ್ಥಿಕತೆ, ಆಂತರಿಕ ಭಿನ್ನಮತ ಸೇರಿದಂತೆ ಹಲವು ವಿಚಾರಗಳಿಗೆ ಸಂಬಂಧಿಸಿ ಕಾಂಗ್ರೆಸ್ ಆರು ಪ್ರಶ್ನೆಗಳನ್ನು ಕೇಳಿದೆ.

ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ನೋಟ್ ಬ್ಯಾನ್ ಹಾಗೂ ಗಬ್ಬರ್ ಸಿಂಗ್ ಟ್ಯಾಕ್ಸ್‌ಗಳಿಂದಾಗಿ ಶುರುವಾದ ನಿರುದ್ಯೋಗ ಸಮಸ್ಯೆ ಲಾಕ್‌ಡೌನ್‌ ನಂತರ ಉತ್ತುಂಗಕ್ಕೇರಿದೆ. ಸಿಎಂ ಆಗಿ ಅರ್ಧ ವರ್ಷ ಅಧಿಕಾರ ಪೂರೈಸಿದ ಬೊಮ್ಮಾಯಿ ಅವರೇ, ಉದ್ಯೋಗ ಸೃಷ್ಟಿಗೆ ತಾವು ಕೈಗೊಂಡ ಕ್ರಮಗಳೇನು? ರೂಪಿಸಿದ ಯೋಜನೆಗಳೇನು? ಎಷ್ಟು ಉದ್ಯೋಗ ಸೃಷ್ಟಿಯಾಗಿದೆ’ ಎಂದು ‘#ತಿಂಗಳುಆರು_Onlyದೆಹಲಿಟೂರು’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಪ್ರಶ್ನಿಸಿದೆ.

‘ಮುಖ್ಯಮಂತ್ರಿಯಾಗಿ ಹಣಕಾಸು ಖಾತೆಯನ್ನು ನಿಭಾಯಿಸುತ್ತಿರುವ ಬೊಮ್ಮಾಯಿ ಅವರೇ, ತಮ್ಮ ಅಧಿಕಾರದ 6 ತಿಂಗಳಲ್ಲಿ ಹಾಗೂ ನಿಮ್ಮ ಡಬಲ್ ಎಂಜಿನ್ ಸರ್ಕಾರದಲ್ಲಿ ಕೇಂದ್ರದಿಂದ ಯಾವ್ಯಾವ ಯೋಜನೆಗೆ ಎಷ್ಟು ಅನುದಾನ ತಂದಿದ್ದೀರಿ? ಜಿಎಸ್‌ಟಿ ಬಾಕಿ, ನೆರೆ ಪರಿಹಾರ ಸೇರಿದಂತೆ ಎಷ್ಟು ನೆರವನ್ನು ತಂದಿದ್ದೀರಿ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.

‘ಬಿಬಿಎಂಪಿಯಲ್ಲಿ ಭ್ರಷ್ಟಾಚಾರ, ಬಿಡಿಎಯಲ್ಲಿ ಭ್ರಷ್ಟಾಚಾರ, ನೇಮಕಾತಿಯಲ್ಲಿ ಭ್ರಷ್ಟಾಚಾರ, ನೀರಾವರಿ ಇಲಾಖೆಯಲ್ಲಿ ಭ್ರಷ್ಟಾಚಾರ, ಗುತ್ತಿಗೆಯಲ್ಲಿ ಶೇ 40 ಕಮಿಷನ್ ಭ್ರಷ್ಟಾಚಾರ. ಈ ಸರ್ಕಾರದಲ್ಲಿ ಎಲ್ಲೆಲ್ಲೂ ಭ್ರಷ್ಟಾಚಾರವೇ. ಬೊಮ್ಮಾಯಿ ಅವರೇ, ಈ 6 ತಿಂಗಳಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕೈಗೊಂಡ ಕ್ರಮಗಳೇನು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಸಿಗದ ನೆರೆ ಪರಿಹಾರ, ದೊರಕದ ಕೊರೊನಾ ಪರಿಹಾರ, ಕುಂಟುವ ಅಡಳಿತಯಂತ್ರ, ಇಲ್ಲದ ವಸತಿ ಯೋಜನೆಗಳು. ಜನರ ಸಮಸ್ಯೆ ಹಲವಾರಿದ್ದರೂ ಒಂದೇ ಒಂದು ಜನತಾ ದರ್ಶನ ಕಾರ್ಯಕ್ರಮ ಮಾಡಿಲ್ಲವೇಕೆ? ಉಪಯೋಗವಿಲ್ಲದ ದೆಹಲಿ ದರ್ಶನಕ್ಕೆ ಹೋಗುವ ತಮಗೆ ಜನತಾದರ್ಶನಕ್ಕೆ ಸಮಯವಿರಲಿಲ್ಲವೇ?’ ಎಂದು ಉಲ್ಲೇಖಿಸಿದೆ.

‘ಹಣಕಾಸು ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿರುವ ಬೊಮ್ಮಾಯಿ ಅವರು, ರಾಜ್ಯದ ಹಣಕಾಸು ಸ್ಥಿತಿಯನ್ನು ವೃದ್ಧಿಸುವಲ್ಲಿ ಕೈಗೊಂಡ ಕ್ರಮಗಳೇನು? ಆರ್ಥಿಕ ಶಿಸ್ತು ಕಾಪಾಡಲು ರೂಪಿಸಿದ ಯೋಜನೆಗಳೇನು? ತೆರಿಗೆ ಪಾಲು, ಅನುದಾನ, ಪರಿಹಾರ ಮುಂತಾದವುಗಳನ್ನು ಕೇಂದ್ರದಿಂದ ತರುವಲ್ಲಿ ಮಾಡಿದ ಪ್ರಯತ್ನಗಳೇನು’ ಎಂದು ‘ಕೈ’ ಪಕ್ಷ ಪ್ರಶ್ನಿಸಿದೆ.

‘ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರಕ್ಕೆ 6 ತಿಂಗಳಾಗಿದೆ, ನಿಮ್ಮ ಸಚಿವರ ಕೆಲಸಗಳ ಬಗ್ಗೆ ನಿಮಗೆ ತೃಪ್ತಿ ಇದೆಯೇ?ಅಸಮಾಧಾನದಿಂದ ಒಲ್ಲದ ಖಾತೆ ನಿಭಾಯಿಸುತ್ತಿರುವವರು, ಉಸ್ತುವಾರಿಗಾಗಿ ಕಿತ್ತಾಡುವವರು, ತಮ್ಮದೇ ಶಾಸಕರೊಂದಿಗೆ ಮುನಿಸಿಟ್ಟುಕೊಂಡ ಸಚಿವರುಗಳು ನಿಮ್ಮಲ್ಲಿದ್ದಾರೆ, ಅವರ ಕೆಲಸಗಳ ಬಗ್ಗೆ ಸಮಾಧಾನವಿದೆಯೇ’ ಎಂದು ಕಾಂಗ್ರೆಸ್ ಕೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು