ಗುರುವಾರ , ಮೇ 19, 2022
21 °C

ಅಮಿತ್ ಶಾ ಜೊತೆ ಬಿಜೆಪಿ ನಾಯಕರ ಬೆಳ್ಳಿ ತಟ್ಟೆ ಊಟ: ಕಾಂಗ್ರೆಸ್ ಖಂಡನೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಭೋಜನ ಕೂಟ ಆಯೋಜಿಸಿದ್ದರು.

ಈ ವೇಳೆ ಸಿಎಂ, ಶಾ ಹಾಗೂ ಬಿಜೆಪಿ ನಾಯಕರು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದ್ದರು. ಇದರ ಬಗ್ಗೆ ಕಿಡಿಕಾರಿ ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.

‘ಪ್ರತಿ ಸರ್ಕಾರಿ ನೇಮಕಾತಿಯಲ್ಲಿ, ಪ್ರತಿ ಸರ್ಕಾರಿ ವರ್ಗಾವಣೆಯಲ್ಲಿ, ಪ್ರತಿ ಸರ್ಕಾರಿ ಗುತ್ತಿಗೆಯಲ್ಲಿ ಶೇ 40 ಕಮಿಷನ್ ಪಡೆದು, ರಾಜ್ಯವನ್ನು ಲೂಟಿ ಮಾಡಿ, ರಾಜ್ಯದ ಸಂಪನ್ಮೂಲಗಳನ್ನು ಗುಡುಸಿ ಗುಂಡಾಂತರ ಮಾಡಿದ ಆದಾಯದಲ್ಲಿ ಬೆಳ್ಳಿ ತಟ್ಟೆಯಲ್ಲಿ ಭೋಜನ ಸವಿಯುವವರಿಗೆ, ಭಾರತ ಹಸಿವು ಸೂಚಂಕ್ಯದಲ್ಲಿ 117ನೇ ಸ್ಥಾನಕ್ಕೆ ಕುಸಿದಿರೋದು ಕಾಣೋದು ಹೇಗೆ?’ ಎಂದು ಪ್ರಶ್ನಿಸಿದೆ.

‘ಶಾ ಅವರೇ ನಿಮ್ಮ ಕರ್ನಾಟಕದ ಭೇಟಿಯ ಅಜೆಂಡಾ ಏನು? ಪಿಎಸ್‌ಐ ಪರೀಕ್ಷೆ ಅಕ್ರಮವನ್ನು ಕೇಂದ್ರ ತನಿಖಾ ಸಂಸ್ಥೆಗೆ ವಹಿಸುವುದೇ? ಬಿಟ್ ಕಾಯಿನ್ ಹಗರಣದ ತನಿಖೆಯನ್ನ ಚುರುಕುಗೊಳಿಸುವುದಕ್ಕಾ? ಕುಸಿದು ಕುಳಿತಿರುವ ರಾಜ್ಯದ ಕಾನೂನು ಸುವ್ಯವಸ್ಥೆಯನ್ನ ಸರಿಪಡಿಸುವುದಕ್ಕಾ? ಅಸಮರ್ಥ ಗೃಹಮಂತ್ರಿಯನ್ನು ಬದಲಿಸುವುದಕ್ಕಾ? ಅಥವಾ ಸಿಎಂ ಬದಲಾವಣೆಗಾ?’ ಎಂದು ಕಾಂಗ್ರೆಸ್ ಅಮಿತ್ ಶಾ ಅವರನ್ನು ಪ್ರಶ್ನಿಸಿದೆ.

 

ಅಮಿತ್‌ ಶಾ ಅವರು,ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಭಾಗವಹಿಸಿದ್ದರು. ಆದರೆ, ಆ ಬಳಿಕ ನಡೆಯಬೇಕಿದ್ದ ಪಕ್ಷದ ಪದಾಧಿಕಾರಿಗಳ ಸಭೆಯನ್ನು ರದ್ದುಗೊಳಿಸಿ ಶಾ ಅವರು ಜಿಂದಾಲ್‌ಗೆ ತೆರಳಿದ್ದರು.

ಬಸವ ಜಯಂತಿ ಮತ್ತು ಅಕ್ಷಯ ತೃತೀಯ ಪ್ರಯುಕ್ತ ಹೋಳಿಗೆ ಊಟ ಏರ್ಪಡಿಸಲಾಗಿತ್ತು. ಶಾ ಅವರ ಜತೆ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಬಿ.ಎಸ್‌.ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಅವರು ಒಟ್ಟಿಗೆ ಕುಳಿತು ಮಾತನಾಡುತ್ತಾ ಬೆಳ್ಳಿ ತಟ್ಟೆಯಲ್ಲಿ ಭೋಜನ ಸೇವಿಸಿದರು.

ಭೋಜನ ಕೂಟಕ್ಕೆ ಎಲ್ಲ ಶಾಸಕರು ಮತ್ತು ಸಂಸದರಿಗೂ ಆಹ್ವಾನ ನೀಡಿದ್ದರೂ ಬೆಂಗಳೂರಿನಲ್ಲಿ ಇದ್ದವರು ಮಾತ್ರ ಹಾಜರಿದ್ದರು. ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಬಿ.ಸಿ.ನಾಗೇಶ್‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದರಾದ ಜಿ.ಎಂ.ಸಿದ್ದೇಶ್‌, ಜಿ.ಎಸ್‌.ಬಸವರಾಜ್‌, ಡಿ.ವಿ.ಸದಾನಂದಗೌಡ, ಶಾಸಕರಾದ ಅಶ್ವತ್ಥನಾರಾಯಣ, ರಾಜಕುಮಾರ್‌ ಪಾಟೀಲ ತೆಲ್ಕೂರ್‌, ಸುರೇಶ್‌ ಕುಮಾರ್‌, ರವಿಸುಬ್ರಹ್ಮಣ್ಯ, ಎಂ.ಪಿ.ರೇಣುಕಾಚಾರ್ಯ, ಕುಮಾರ್ ಬಂಗಾರಪ್ಪ, ಎಸ್‌.ಆರ್‌.ವಿಶ್ವನಾಥ್, ವಿಧಾನಪರಿಷತ್‌ ಸದಸ್ಯರ ಎನ್‌.ರವಿಕುಮಾರ್‌, ಸಿ.ಪಿ.ಯೋಗೇಶ್ವರ್, ರೂಪಾಲಿ ನಾಯ್ಕ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮುಂತಾದವರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು