ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

124 ಕ್ಷೇತ್ರಕ್ಕೆ ‘ಕೈ’ ಅಭ್ಯರ್ಥಿಗಳ ಘೋಷಣೆ: ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ

ವಿಧಾನಸಭೆ ಚುನಾವಣೆ 2023
Last Updated 25 ಮಾರ್ಚ್ 2023, 17:57 IST
ಅಕ್ಷರ ಗಾತ್ರ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ ಶನಿವಾರ ಪ್ರಕಟಿಸಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಘೋಷಿಸುವ ಮೂಲಕ ‘ಕ್ಷೇತ್ರ ಗೊಂದಲ’ಕ್ಕೆ ತೆರೆ ಎಳೆದಿದೆ.

93 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಜೆಡಿಎಸ್‌ ಕೆಲವು ತಿಂಗಳ ಹಿಂದೆಯೇ ಘೋಷಿಸಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಟಿಕೆಟ್‌ ಹಂಚಿಕೆ ಕುರಿತು
ಪ್ರಕ್ರಿಯೆಯನ್ನೇ ಆರಂಭಿಸಿಲ್ಲ. ಇದರ ನಡುವೆ, ಚುನಾವಣಾ ವೇಳಾಪಟ್ಟಿ ಘೋಷಣೆಗೆ ಮುನ್ನವೇ ‘ಕೈ’ ಪಾಳಯವು ಹೆಚ್ಚಿನ ತಂಟೆ ತಕರಾರು ಇಲ್ಲದೆ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿದೆ.

ಪ್ರಸ್ತುತ ಬಾದಾಮಿ ಕ್ಷೇತ್ರದ ಶಾಸಕರಾಗಿರುವ ಸಿದ್ದರಾಮಯ್ಯ, ‘ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಈ ಹಿಂದೆ ಘೋಷಿಸಿದ್ದರು. ಕೋಲಾರದಲ್ಲಿ ಸ್ಪರ್ಧೆ ಮಾಡಲು ಸಕಲ ತಯಾರಿ ಮಾಡಿಕೊಂಡಿದ್ದರು. ಕಳೆದ ಶನಿವಾರ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯ ಬಳಿಕ ಸಿದ್ದರಾಮಯ್ಯ ಜತೆಗೆ ಪ್ರತ್ಯೇಕ ಸಭೆ ನಡೆಸಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಸ್ಪರ್ಧೆ ವಿಷಯದಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ. ಕೋಲಾರದಲ್ಲಿ ಕಣಕ್ಕೆ ಇಳಿಯಬೇಡಿ’ ಎಂದು ಸಲಹೆ ನೀಡಿದ್ದರು. ಕೋಲಾರದಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂಬುದಾಗಿ ಆಪ್ತರ ಬಳಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು.

ಕುಟುಂಬ ಸದಸ್ಯರ ಜತೆಗೆ ಸಮಾ ಲೋಚನೆ ನಡೆಸಿದ್ದ ಸಿದ್ದರಾಮಯ್ಯ, ವರುಣಾದಿಂದ ಸ್ಪರ್ಧೆ ಮಾಡುವುದಾಗಿ ಹೈಕಮಾಂಡ್‌ಗೆ ತಿಳಿಸಿದ್ದರು. ಮೊದಲ ಪಟ್ಟಿಯಲ್ಲಿ ಬಾದಾಮಿ, ಕೋಲಾರ ಕ್ಷೇತ್ರಕ್ಕೆ ಹುರಿಯಾಳುಗಳ ಹೆಸರನ್ನು ಘೋಷಿಸಿಲ್ಲ. ಕೋಲಾರದಿಂದಲೂ ಸ್ಪರ್ಧೆ ಮಾಡಲು ಉತ್ಸುಕನಾಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೊದಲ ಪಟ್ಟಿಯಲ್ಲಿ ಆರು ಹಾಲಿ ಶಾಸಕರ ಹೆಸರು ಇಲ್ಲ. ಕಾಂಗ್ರೆಸ್‌ ಸಹ ಸದಸ್ಯ ಶರತ್‌ ಬಚ್ಚೇಗೌಡ ಹೊಸಕೋಟೆಯಿಂದ ಹಾಗೂ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾದ ಎಚ್‌.ನಾಗೇಶ್ ಮಹದೇವಪುರದಿಂದ ಸ್ಪರ್ಧಿಸಲಿದ್ದಾರೆ. ಆಕಾಂಕ್ಷಿಗಳ ವಿರೋಧದ ನಡುವೆಯೂ ರಾಜಾಜಿನಗರದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಪುಟ್ಟಣ್ಣ ಅವರಿಗೆ ಮಣೆ ಹಾಕಲಾಗಿದೆ. ಅವರು ಇತ್ತೀಚೆಗೆ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ಪಾಳಯಕ್ಕೆ ಸೇರ್ಪಡೆಯಾಗಿದ್ದರು.

ದೇವನಹಳ್ಳಿಯಲ್ಲಿ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಅವಕಾಶ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಎರಡು ವರ್ಷಗಳಿಂದ ಸಿದ್ಧತೆ ಮಾಡಿಕೊಂಡಿದ್ದ ಎ.ಸಿ.ಶ್ರೀನಿವಾಸ್‌ ಹೆಸರನ್ನು ಟಿಕೆಟ್‌ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಒಂದು ವೇಳೆ, ಮುನಿಯಪ್ಪ ಅವರಿಗೆ ಟಿಕೆಟ್‌ ನೀಡಿದರೆ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ದೇವನಹಳ್ಳಿಯ ಹಲವು ಮುಖಂಡರು ಮೂರು ದಿನಗಳ ಹಿಂದೆ ಎಚ್ಚರಿಸಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಪಕ್ಷದ ನಾಯಕರ ಒಳೇಟಿನಿಂದ ಸೋತ ಮುನಿಯಪ್ಪ ಅವರ ರಾಜ್ಯ ರಾಜಕಾರಣ ಪ್ರವೇಶಕ್ಕೆ ಹೈಕಮಾಂಡ್‌ ವೇದಿಕೆ ಕಲ್ಪಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ ಹಾಗೂ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಹೆಸರನ್ನು ಕೆಪಿಸಿಸಿ ನಂಜನಗೂಡು ಕ್ಷೇತ್ರಕ್ಕೆ ಶಿಫಾರಸು ಮಾಡಿತ್ತು. ಧ್ರುವನಾರಾಯಣ ಕೆಲವು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪುತ್ರ ದರ್ಶನ್ ಅವರಿಗೆ ಟಿಕೆಟ್‌ ನೀಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ದರ್ಶನ್ ಅವರಿಗೆ ಮಹದೇವಪ್ಪ ಸಹ ಬೆಂಬಲ ಘೋಷಿಸಿದ್ದರು. ದರ್ಶನ್ ಅವರಿಗೆ ಟಿಕೆಟ್ ಲಭಿಸಿದೆ. ಮಹದೇವಪ್ಪ ಅವರನ್ನು ಟಿ.ನರಸೀಪುರದಲ್ಲಿ ಕಣಕ್ಕೆ ಇಳಿಸಲಾಗಿದೆ. ಇಲ್ಲಿ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಅರ್ಜಿ ಹಾಕಿದ್ದರು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಪ್ತ, ವಿಧಾನ ಪರಿಷತ್‌ ಸದಸ್ಯ ಯು.ಬಿ.ವೆಂಕಟೇಶ್ ಅವರಿಗೆ ಬಸವನಗುಡಿ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಇತ್ತೀಚೆಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದ ಕಿರಣ್‌ ಕುಮಾರ್‌ (ಚಿಕ್ಕನಾಯಕನಹಳ್ಳಿ), ಯು.ಬಿ.ಬಣಕಾರ್‌ (ಹಿರೇಕೆರೂರು) ಅವರಿಗೆ ಸಹ ಟಿಕೆಟ್‌ ಲಭಿಸಿದೆ.

6 ಶಾಸಕರ ಹೆಸರು ಮೊದಲ ಪಟ್ಟಿಯಲ್ಲಿಲ್ಲ

‘ಕೈ’ ಪಾಳಯದ ಹಾಲಿ ಶಾಸಕರು ಇರುವ ಆರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಮೊದಲ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ.

ಪುಲಕೇಶಿನಗರ (ಅಖಂಡ ಶ್ರೀನಿವಾಸ
ಮೂರ್ತಿ), ಶಿಡ್ಲಘಟ್ಟ (ವಿ.ಮುನಿಯಪ್ಪ), ಹರಿಹರ (ಎಂ.ರಾಮಪ್ಪ), ಕುಂದಗೋಳ (ಕುಸುಮಾವತಿ ಶಿವಳ್ಳಿ), ಲಿಂಗಸುಗೂರು (ಡಿ.ಎಸ್‌.ಹೂಲಗೇರಿ), ಅಫಜಲಪುರ (ಎಂ.ವೈ.ಪಾಟೀಲ) ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲ್ಲ.

ಶಿಡ್ಲಘಟ್ಟದಿಂದ ಈ ಸಲ ಕಣಕ್ಕೆ ಇಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅಲ್ಲಿನ ಶಾಸಕ ವಿ.ಮುನಿಯಪ್ಪ, ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸ್ಪರ್ಧೆ ಮಾಡುವರು ಎಂದು ಈಗಾಗಲೇ ಘೋಷಿಸಿದ್ದಾರೆ. ಶಿಡ್ಲಘಟ್ಟಕ್ಕೆ ಗೋವಿಂದ ಗೌಡ ಹೆಸರನ್ನು ಪಕ್ಷದ ಟಿಕೆಟ್‌ ಪರಿಶೀಲನಾ ಸಮಿತಿ ಶಿಫಾರಸು ಮಾಡಿದೆ.

ಈ ನಡುವೆ, ಕೋಲಾರ ಕ್ಷೇತ್ರದಿಂದ ಸಿದ್ದರಾಮಯ್ಯ ಕಣಕ್ಕೆ ಇಳಿಯದಿದ್ದರೆ ಗೋವಿಂದಗೌಡ ಅವರನ್ನು ಆ ಕ್ಷೇತ್ರದಲ್ಲಿ ಟಿಕೆಟ್‌ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಉತ್ಸುಕರಾಗಿದ್ದಾರೆ. ಹಾಗಾಗಿ, ಮೊದಲ ಪಟ್ಟಿಯಲ್ಲಿ ಶಿಡ್ಲಘಟ್ಟದ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ ಎಂದು ಮೂಲಗಳು ಹೇಳಿವೆ.

ತಮ್ಮ ಪುತ್ರನಿಗೆ ಟಿಕೆಟ್‌ ನೀಡುವಂತೆ ಎಂ.ವೈ.ಪಾಟೀಲ ಅವರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಪುಲಕೇಶಿನಗರ, ಹರಿಹರ, ಲಿಂಗಸುಗೂರು ಹಾಗೂ ಕುಂದಗೋಳದಲ್ಲಿ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿದರೆ ಗೆಲುವು ಕಷ್ಟ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳಿವೆ. ಈ ಕ್ಷೇತ್ರಗಳಲ್ಲಿ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ ಮುಂದಿನ ಹೆಜ್ಜೆ ಇಡಲು ಪಕ್ಷ ತೀರ್ಮಾನಿಸಿದೆ.

ತನ್ನ ಬದಲು ಪುತ್ರನಿಗೆ ಟಿಕೆಟ್‌ ನೀಡುವಂತೆ ಪಾವಗಡದ ಶಾಸಕ ವೆಂಕಟರಮಣಪ್ಪ ಕೋರಿಕೊಂಡಿ ದ್ದರು. ಅವರ ಪುತ್ರ ವೆಂಕಟೇಶ್‌ ಉಮೇದುವಾರಿಕೆಗೆ ಹೈಕಮಾಂಡ್‌ ಹಸಿರು ನಿಶಾನೆ ತೋರಿದೆ. ವರುಣಾದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಂದೆಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಟಿಕೆಟ್‌ ಬೇಡವೆಂದು ಹೇಳಿದ್ದ ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರನ್ನು ಸಮಾಧಾನಪಡಿಸಿ ಕಣಕ್ಕೆ ಇಳಿಸಲಾಗಿದೆ.

ಎಂಟು ಕ್ಷೇತ್ರಗಳಲ್ಲಿ ತಂದೆ–ಮಕ್ಕಳಿಗೆ ಟಿಕೆಟ್‌

ಎಂಟು ಕ್ಷೇತ್ರಗಳಲ್ಲಿ ತಂದೆ–ಮಕ್ಕಳಿಗೆ ಟಿಕೆಟ್‌ ನೀಡುವ ಮೂಲಕ ಕಾಂಗ್ರೆಸ್‌ ‘ಕುಟುಂಬ ರಾಜಕಾರಣ’ದ ಪರಂಪರೆಯನ್ನು ಮುಂದುವರಿಸಿದೆ.

ಬಿಟಿಎಂ ಲೇಔಟ್‌ನಲ್ಲಿ ರಾಮಲಿಂಗಾ ರೆಡ್ಡಿ ಹಾಗೂ ಜಯನಗರದಲ್ಲಿ ಸೌಮ್ಯಾ ರೆಡ್ಡಿ, ದೇವನಹಳ್ಳಿಯಲ್ಲಿ ಕೆ.ಎಚ್‌.ಮುನಿಯಪ್ಪ ಹಾಗೂ ಕೆಜಿಎಫ್‌ನಲ್ಲಿ ರೂಪಕಲಾ, ವಿಜಯನಗರದಲ್ಲಿ ಎಂ.ಕೃಷ್ಣಪ್ಪ ಹಾಗೂ ಗೋವಿಂದರಾಜನಗರದಲ್ಲಿ ಪ್ರಿಯಾಕೃಷ್ಣ, ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರದಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ ಅವರಿಗೆ ಮಣೆ ಹಾಕಲಾಗಿದೆ.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ‍್ರಸಾದ್‌ ಸಹೋದರ ಬಿ.ಕೆ.ಶಿವರಾಮ್ ಪುತ್ರ ರಕ್ಷಿತ್‌ ಶಿವರಾಮ್ ಅವರನ್ನು ಬೆಳ್ತಂಗಡಿಯಿಂದ ಕಣಕ್ಕೆ ಇಳಿಸಲಾಗಿದೆ.

‘ಬಲಗೈ’ ಪ್ರಾಬಲ್ಯ

ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 36 ಮೀಸಲು ಕ್ಷೇತ್ರಗಳಿವೆ. ಮೊದಲ ಪಟ್ಟಿಯಲ್ಲಿ 22 ಕ್ಷೇತ್ರಗಳಿಗೆ ಹುರಿಯಾಳುಗಳನ್ನು ಘೋಷಿಸಲಾಗಿದೆ. ಈ ಪೈಕಿ, ಬಲಗೈ ಒಳ ಪಂಗಡದ 12, ಎಡಗೈ ಒಳ ಪಂಗಡದ ನಾಲ್ವರು, ಲಂಬಾಣಿ ಸಮುದಾಯದ ನಾಲ್ವರು ಹಾಗೂ ಬೋವಿ ಸಮುದಾಯದ ಇಬ್ಬರಿಗೆ ಅವಕಾಶ ನೀಡಲಾಗಿದೆ.

‘ಎಡಗೈ ಒಳ ಪಂಗಡದ ಮುಖಂಡರಿಗೆ 14 ಕ್ಷೇತ್ರಗಳಲ್ಲಿ ಅವಕಾಶ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೆವು. ಈಗ ನಾಲ್ಕು ಕ್ಷೇತ್ರಗಳಲ್ಲಿ ಅವಕಾಶ ನೀಡಿದ್ದಾರೆ. ಎರಡನೇ ಹಾಗೂ ಮೂರನೇ ಪಟ್ಟಿಯಲ್ಲಿ ಇನ್ನಷ್ಟು ಮಂದಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ. ಕಳೆದ ಬಾರಿಗಿಂತ ಹೆಚ್ಚಿನ ಮಂದಿಗೆ ಟಿಕೆಟ್‌ ಸಿಗಲಿದೆ’ ಎಂದು ಸಮುದಾಯದ ಮುಖಂಡರಾದ ಎಲ್‌.ಹನುಮಂತಯ್ಯ ಹಾಗೂ ಎಚ್‌.ಆಂಜನೇಯ ಹೇಳಿದರು.

ಮಹದೇವಪುರ ಟಿಕೆಟ್‌ ಗೊಂದಲ

ಮಹದೇವಪುರ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಷಯದಲ್ಲಿ ಶನಿವಾರ ಬೆಳಿಗ್ಗೆ ಗೊಂದಲ ಸೃಷ್ಟಿಯಾಯಿತು.

ಈ ಕ್ಷೇತ್ರದ ಟಿಕೆಟ್‌ ಬಯಸಿ ನಲ್ಲೂರಹಳ್ಳಿ ನಾಗೇಶ್‌ (ಟಿ.ನಾಗೇಶ್‌), ಆನಂದ ಕುಮಾರ್ ಸೇರಿದಂತೆ 12 ಮಂದಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್‌.ನಾಗೇಶ್ ಎರಡು ತಿಂಗಳ ಹಿಂದೆ ‘ಕೈ’ ಪಾಳಯಕ್ಕೆ ಸೇರಿದ್ದರು. ಮಹದೇವಪುರದಲ್ಲಿ ಅವರಿಗೆ ಟಿಕೆಟ್‌ ನೀಡಲಾಗುವುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು. ಪಕ್ಷದ ಟಿಕೆಟ್‌ ಪರಿಶೀಲನಾ ಸಮಿತಿ ಸಹ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಶನಿವಾರ ಬೆಳಿಗ್ಗೆ ಪ್ರಕಟವಾದ ಪಟ್ಟಿಯಲ್ಲಿ ಟಿ.ನಾಗೇಶ್‌ ಹೆಸರಿತ್ತು. ಇದರಿಂದ ಖುಷಿಗೊಂಡ ಟಿ.ನಾಗೇಶ್‌ ಉಳಿದ ಆಕಾಂಕ್ಷಿಗಳಿಗೆ ಕರೆ ಮಾಡಿ, ‘ಮಲ್ಲಿಕಾರ್ಜುನ ಖರ್ಗೆ ಆಶೀರ್ವಾದ ಮಾಡಿದ್ದಾರೆ. ನನಗೆ ಬೆಂಬಲ ನೀಡಬೇಕು’ ಎಂದು ಕೇಳಿಕೊಂಡರು. ಈ ಬೆಳವಣಿಗೆಗಳಿಂದ ಆತಂಕಗೊಂಡ ಎಚ್‌.ನಾಗೇಶ್ ಅವರು ಡಿ.ಕೆ.ಶಿವಕುಮಾರ್ ಮನೆಗೆ ಧಾವಿಸಿ ಅಳಲು ತೋಡಿಕೊಂಡರು. ‘ಎಚ್‌.ನಾಗೇಶ್ ಅವರಿಗೆ ಟಿಕೆಟ್‌ ನೀಡಲಾಗಿದೆ. ಪಟ್ಟಿಯಲ್ಲಿ ಸಣ್ಣ ಲೋಪವಾಗಿದೆ’ ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಶೀಘ್ರವೇ ಎರಡನೇ ಪಟ್ಟಿ– ಡಿ.ಕೆ.ಶಿವಕುಮಾರ್

ಬೆಂಗಳೂರು: ‘ವಿಧಾನಸಭೆಗೆ ಸ್ಪರ್ಧಿಸಲಿರುವ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಪ್ರಕಟಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಶೇ 95ರಷ್ಟು ಹಾಲಿ ಶಾಸಕರಿಗೇ ಟಿಕೆಟ್ ಸಿಗಲಿದೆ. ಕೆಲವು ಕ್ಷೇತ್ರಗಳಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ ಹೆಸರುಗಳು ಪ್ರಕಟವಾಗಲಿವೆ’ ಎಂದು ತಿಳಿಸಿದರು.

‘ನಂಜನಗೂಡು ಕ್ಷೇತ್ರದಲ್ಲಿ ಆರ್‌. ಧ್ರುವನಾರಾಯಣ ಅವರು ಸ್ಪರ್ಧಿಸಬೇಕಿತ್ತು. ಆದರೆ, ಅವರು ನಮ್ಮನ್ನು ಅಗಲಿದ್ದಾರೆ. ಹೀಗಾಗಿ, ‌ಅವರ ಪುತ್ರನಿಗೆ ಟಿಕೆಟ್ ನೀಡಿದ್ದೇವೆ’ ಎಂದರು. ವಿರೋಧದ ನಡುವೆಯೂ ಪುಟ್ಟಣ್ಣ ಅವರಿಗೆ ರಾಜಾಜಿನಗರ ಕ್ಷೇತ್ರದ ಟಿಕೆಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ನಾಲ್ಕೂವರೆ ವರ್ಷಗಳ ವಿಧಾನ ಪರಿಷತ್ ಸದಸ್ಯತ್ವ ಅವಧಿ ತ್ಯಜಿಸಿ ಪುಟ್ಪಣ್ಣ ಪಕ್ಷ ಸೇರಿದ್ದಾರೆ. ಹೀಗಾಗಿ ಅವರಿಗೆ ಒಂದು ಅವಕಾಶ ಕಲ್ಪಿಸಲು ಪಕ್ಷ ತೀರ್ಮಾನಿಸಿದೆ’ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಕೇಳಿದಾಗ, ‘ಕ್ಷೇತ್ರ ಆಯ್ಕೆಯನ್ನು ಸಿದ್ದರಾಮಯ್ಯನವರ ವಿವೇಚನೆಗೆ ಬಿಡಲಾಗಿತ್ತು. ಅವರು ವರುಣಾದಿಂದ ಸ್ಪರ್ಧಿಸಲು ಇಚ್ಛಿಸಿದ್ದು, ಪಕ್ಷ ಟಿಕೆಟ್ ನೀಡಿದೆ’ ಎಂದರು.

‘ಕೋಲಾರ, ಬಾದಾಮಿ ಕ್ಷೇತ್ರಕ್ಕೆ ಟಿಕೆಟ್ ಘೋಷಣೆಯಾಗದ ಕಾರಣ ಸಿದ್ದರಾಮಯ್ಯ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಬಹುದೇ’ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಯನ್ನು ಪಕ್ಷದ ಹೈಕಮಾಂಡ್‌ಗೆ ಕೇಳಬೇಕು' ಎಂದರು. ರಾಜಕೀಯ ದ್ವೇಷದಿಂದ ರಾಹುಲ್‌ ಅನರ್ಹ: ‘ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ನಾವು ಇದನ್ನು ಖಂಡಿಸುತ್ತೇವೆ. ನ್ಯಾಯಾಲಯದಲ್ಲಿ ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ’ ಎಂದರು.

‘ಕರ್ನಾಟಕದಲ್ಲಿ ಇಬ್ಬರು ಬಿಜೆಪಿ ಶಾಸಕರು ಚೆಕ್ ಬೌನ್ಸ್ ಹಾಗೂ ಇತರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರನ್ನು ಅನರ್ಹಗೊಳಿಸಿಲ್ಲ ಯಾಕೆ? ಅವರಿಗೆ ಬೇರೆ, ನಮಗೆ ಬೇರೆ ಕಾನೂನು ಇದೆಯೇ’ ಎಂದೂ ಪ್ರಶ್ನಿಸಿದರು.

ಮೀಸಲಾತಿ ಬೋಗಸ್: ‘ಮೀಸಲಾತಿ ಹೆಚ್ಚಳ ಬೋಗಸ್ ಘೋಷಣೆ. ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ’ ಎಂದರು.

‘ಮಹಿಳೆಯರಿಗೆ ಆದ್ಯತೆ ನೀಡುವ ನಿರೀಕ್ಷೆ’

ಮೈಸೂರು: ‘ಮಹಿಳೆಯರಿಗೆ ಪಕ್ಷದಲ್ಲಿ ಸಮಾನ ಪ್ರಾತಿನಿಧ್ಯವಿದೆ. 2ನೇ ಪಟ್ಟಿಯಲ್ಲಿ ಹೆಚ್ಚು ಮಹಿಳೆಯರಿಗೆ ಟಿಕೆಟ್‌ ಸಿಗುವ ವಿಶ್ವಾಸವಿದೆ’ ಎಂದು ಎಐಸಿಸಿ ಮಹಿಳಾ ಘಟಕದ ಅಧ್ಯಕ್ಷೆ ನೆಟ್ಟಾ ಡಿಸೋಜಾ ಹೇಳಿದರು. ಶನಿವಾರ ಕೆಪಿಸಿಸಿ ಮಹಿಳಾ ಕಾಂಗ್ರೆಸ್‌ ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿ
ಯಲ್ಲಿ ಅವರು, ಅವರು, ‘ಪಕ್ಷದಲ್ಲೇ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮಂಡಿಸಲು ಅವಕಾಶವಿದೆ. ಅದೇ ಹೋರಾಟದಲ್ಲೂ ನಾವಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT