ಭಾನುವಾರ, ಮೇ 22, 2022
25 °C
ಉತ್ತುಂಗ ಸಂದರ್ಭದ ಅಂದಾಜು

ರಾಜ್ಯದಲ್ಲಿ ದಿನಕ್ಕೆ 1.2 ಲಕ್ಷ ಪ್ರಕರಣ: ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಮೂರನೇ ಅಲೆ ಗರಿಷ್ಠ ಮಟ್ಟ ತಲುಪಿದಾಗ ದಿನಕ್ಕೆ 1.2 ಲಕ್ಷ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ವರ್ಚುವಲ್ ರೂಪದಲ್ಲಿ ನಡೆಸಿದ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಆರೋಗ್ಯಾಧಿಕಾರಿಗಳ ಸಭೆ ಬಳಿಕ ಸಚಿವ ಸುಧಾಕರ್‌ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಕೊರೋನಾ ಸೋಂಕು ತಾರಕಕ್ಕೆ ಏರಿದಾಗ ಏನಾಗಬಹುದು ಎಂಬ ಬಗ್ಗೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯನ್ನು ಉಲ್ಲೇಖಿಸಿ ವಿವರ ನೀಡಿದ ಅವರು, ಅದಕ್ಕಿಂತ ಉತ್ತಮ ಸ್ಥಿತಿ ಎಂದರೆ 80 ಸಾವಿರ ಪ್ರಕರಣಗಳು ವರದಿಯಾಗಬಹುದು. ಎರಡನೇ ಅಲೆಗೆ ಹೋಲಿಸಿದರೆ, ಈ ಬಾರಿ ಅತ್ಯಂತ ತ್ವರಿತಗತಿಯಲ್ಲಿ ಅಂದರೆ ನಾಲ್ಕರಿಂದ ಐದು ಪಟ್ಟು ವೇಗವಾಗಿ ಕೋವಿಡ್‌ ಹರಡುತ್ತಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ  ಸೋಮವಾರ 27,156 ಹೊಸ ಪ್ರಕರಣ ವರದಿಯಾಗಿದ್ದವು. ಮಂಗಳವಾರ 41,457 ಹೊಸ ಪ್ರಕರಣಗಳು ವರದಿಯಾಗಿವೆ ಎಂದರು.

ಸಕ್ರಿಯ ಪ್ರಕರಣ 2,50,381 ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ 25,596 ಪ್ರಕರಣಗಳು ದೃಢಪಟ್ಟಿದ್ದರೆ, ಉಳಿದ ಜಿಲ್ಲೆಗಳಲ್ಲಿ ಒಟ್ಟಾರೆ 15,861 ಕ್ಕೆ ಏರಿದೆ. ಗ್ರಾಮೀಣ ಪ್ರದೇಶಗಳಲ್ಲೂ ಏರುತ್ತಿದೆ ಎಂದರು.

ಮೂರನೇ ಅಲೆಯಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡಿದ ಹಾಗೇ, ಅಷ್ಟೇ ವೇಗದಲ್ಲಿ ಇಳಿಕೆ ಆಗುವುದನ್ನೂ ಇತರ ರಾಜ್ಯಗಳಲ್ಲಿ ನೋಡಿದ್ದೇವೆ. ನಮ್ಮ ರಾಜ್ಯದಲ್ಲೂ ಅದೇ ರೀತಿ ಆಗುತ್ತದೆ. ಫೆಬ್ರುವರಿ ಎರಡು ಅಥವಾ ಮೂರನೇ ವಾರದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಾ ಹೋಗುತ್ತವೆ ಎಂದು ಸುಧಾಕರ್‌ ಹೇಳಿದರು.

ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾವಿನ ಸಂಖ್ಯೆ ಕಡಿಮೆ ಇರುವುದು ಸಮಾಧಾನಕರ ಸಂಗತಿ. ಲಸಿಕೆ ತೆಗೆದುಕೊಳ್ಳದವರ ಮೇಲೆ ಕೊರೊನಾ ಪ್ರಭಾವ ಹೆಚ್ಚಾಗಿದೆ ಎಂದರು.

60 ವರ್ಷ ಮೇಲ್ಪಟ್ಟವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮೂರನೇ ಡೋಸ್‌ ಲಸಿಕೆ ನೀಡುವ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಈವರೆಗೆ ಶೇ 39 ರಷ್ಟು ಜನರಿಗೆ ಮಾತ್ರ ಮೂರನೇ ಡೋಸ್‌ ನೀಡಲಾಗಿದೆ. ಇದು ತೃಪ್ತಿದಾಯಕವಾಗಿಲ್ಲ. ಮುಂದಿನ ವಾರ ಅಭಿಯಾನ ತ್ವರಿತಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ 264 ಆಮ್ಲಜನಕ ತಯಾರಿಕಾ ಘಟಕಗಳ ಪೈಕಿ 222 ಘಟಕಗಳನ್ನು ಸೇವೆಗಾಗಿ ಚಾಲನೆ ನೀಡಲಾಗಿದೆ. ವಾರಾಂತ್ಯ ಕರ್ಫ್ಯೂ ಹಿಂತೆಗೆದುಕೊಳ್ಳುವ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ತಿಳಿಸಿದರು.

ವೈದ್ಯರ ನಡೆ ಹಳ್ಳಿ ಕಡೆ: ಸಿ.ಎಂ ಸೂಚನೆ

ವೈದ್ಯರು ಮತ್ತು ಆರೋಗ್ಯ ಸಹಾಯಕಿಯರು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ಮನೆಗೂ ಭೇಟಿ ನೀಡಬೇಕು. ಇದಕ್ಕಾಗಿ ವಿಶೇಷ ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣೆ ವಿಧಾನ) ರೂಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆಯಲ್ಲಿ ಸೂಚಿಸಿದರು.

ಬೆಂಗಳೂರಿನಲ್ಲಿ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರ ರೋಗಿ ವಿಭಾಗಗಳನ್ನು(ಒಪಿಡಿ) ಬಲಪಡಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಒಪಿಡಿಗಳನ್ನು ಆರಂಭಿಸುವಂತೆಯೂ ತಿಳಿಸಿದರು.

ಪ್ರಮುಖ ನಿರ್ದೇಶನಗಳು

*ಜಿಲ್ಲಾಡಳಿತಗಳು ಪ್ರತಿ ಗ್ರಾಮದ ಕಟ್ಟಕಡೆಯ ಮನೆಗೂ ಔಷಧದ ಕಿಟ್‌ಗಳನ್ನು ತಲುಪಿಸಲು ಪರಿಣಾಮಕಾರಿಯಾಗಿ ಕ್ರಮ ತೆಗೆದುಕೊಳ್ಳಬೇಕು.

*ಜಿಲ್ಲಾಧಿಕಾರಿಗಳು, ಡಿ.ಎಚ್‌.ಒಗಳು ತಾಲ್ಲೂಕುಗಳಿಗೆ ಭೇಟಿ ನೀಡಿ ಔಷಧ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಬೇಕು.

*ಪ್ರಯೋಗಾಲಯದ ವರದಿ ಬಂದ ತಕ್ಷಣ ಟೆಲಿ ಟ್ರಯಾಜಿಂಗ್ ಮಾಡಬೇಕು.

*ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ರಾಜ್ಯದ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ನೀಡುವ ಮತ್ತು ಚಿಕಿತ್ಸೆ ನೀಡಲು ವಿಶೇಷ ಎಸ್‌ಒಪಿ ರೂಪಿಸಬೇಕು.

*ಎಲ್ಲ ಜಿಲ್ಲೆಗಳಲ್ಲಿ ದೃಢ ಪ್ರಮಾಣದ ದರ ಹೆಚ್ಚು ಇರುವುದರಿಂದ ಮಧುಮೇಹ, ರಕ್ತದೊತ್ತಡ, ಹೃದ್ರೋಗದಂತಹ ಕಾಯಿಲೆ ಇರುವವರನ್ನು ಗುರುತಿಸಬೇಕು. ಮನೆಗಳಲ್ಲಿ ಪ್ರತ್ಯೇಕ ಇರುವವರಿಗೆ, 60 ವರ್ಷ ಮೇಲ್ಪಟ್ಟವರಿಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಬೇಕು. ಔಷಧಿ ಒದಗಿಸಬೇಕು.

*ಲಸಿಕೆ ಪಡೆದು 90 ದಿನಗಳು ಪೂರೈಸಿರುವವರ ಪಟ್ಟಿ ತಯಾರಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಸಿಕೆ ಕಾರ್ಯಕ್ರಮಮದ ಮೇಲ್ವಿಚಾರಣೆ ಜವಾಬ್ದಾರಿ ನೀಡಬೇಕು.

*ಮೊದಲನೇ ಮತ್ತು ಎರಡನೇ ಡೋಸ್‌ ಲಸಿಕೆ ಪ್ರಮಾಣದಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳು ತಿಂಗಳ ಕೊನೆಯೊಳಗೆ ರಾಜ್ಯದ ಸರಾಸರಿ ತಲುಪಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು