ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕೋವಿಡ್‌ ಪ್ರಕರಣ ಹೆಚ್ಚಳ; ಎರಡು ದಿನಕ್ಕೊಮ್ಮೆ ದುಪ್ಪಟ್ಟು

ರಾಜ್ಯದಲ್ಲಿ ಒಂದೇ ದಿನ 25 ಸಾವಿರಕ್ಕೂ ಹೆಚ್ಚು ಕೋವಿಡ್‌ ಪ್ರಕರಣ
Last Updated 14 ಜನವರಿ 2022, 3:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದಲ್ಲಿ ಕೋವಿಡ್‌ ಪ್ರಕರಣಗಳು ಪ್ರತಿ ಎರಡು ದಿನಗಳಿಗೊಮ್ಮೆ ದುಪ್ಪಟ್ಟಾಗುತ್ತಿವೆ. ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಸರಾಸರಿ ಶೇ 36.44 ರಷ್ಟು, ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 32.64 ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ 32.65 ರಷ್ಟು ಪ್ರಕರಣಗಳು ಏರಿಕೆ ಆಗಿದೆ.

ರಾಜ್ಯದಲ್ಲಿ ಗುರುವಾರ ಹೊಸ ಪ್ರಕರಣಗಳು 25,005 ದೃಢಪಟ್ಟಿದ್ದು, ಬೆಂಗಳೂರಿನಲ್ಲಿ 18,374 ಪ್ರಕರಣಗಳು ಪತ್ತೆಯಾಗಿವೆ. ಕೋವಿಡ್ ದೃಢ ಪ್ರಮಾಣ ರಾಜ್ಯದಲ್ಲಿ ಸರಾಸರಿ ಶೇ 12.39 ಕ್ಕೆ ಏರಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,15,733 ಕ್ಕೆ ಮುಟ್ಟಿದೆ.

ಮೊದಲ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ 10 ರಿಂದ 12 ದಿನಕ್ಕೆ ದುಪ್ಪಟ್ಟಾದರೆ, ಎರಡನೇ ಅಲೆಯಲ್ಲಿ 8 ದಿನಗಳಿಗೆ ದುಪ್ಪಟ್ಟಾಗುತ್ತಿತ್ತು. ಆದರೆ, ಮೂರನೇ ಅಲೆಯಲ್ಲಿ ಎರಡರಿಂದ ಎರಡೂವರೆ ದಿನಗಳಲ್ಲೇ ದುಪ್ಪಟ್ಟಾಗುತ್ತಿದೆ. ಡಿಸೆಂಬರ್‌ 20 ರಂದು ಬೆಂಗಳೂರಿನಲ್ಲಿ 269 ಹಾಗೂ ಉಳಿದ ಭಾಗದಲ್ಲಿ 87 ಸೇರಿ ಒಟ್ಟು 356 ಪ್ರಕರಣ
ಗಳಿದ್ದವು. ಜ.5 ರಂದು ಬೆಂಗಳೂರಿನಲ್ಲಿ 3,605 ಹಾಗೂ ಉಳಿದ ಭಾಗದಲ್ಲಿ 641, ಜ.11 ರಂದು ಬೆಂಗಳೂರಿನಲ್ಲಿ 10,800 ಹಾಗೂ ಉಳಿದ ಕಡೆಗಳಲ್ಲಿ 3,673 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿಸೆಂಬರ್‌ ಮೊದಲ ವಾರದಲ್ಲಿ 3,151 ಪ್ರಕರಣಗಳು ದೃಢವಾಗಿತ್ತು. ಆಗ ಆಸ್ಪತ್ರೆಯಲ್ಲಿ ಶೇ 23, ಕೋವಿಡ್‌ ಕೇರ್‌ ಕೇಂದ್ರದಲ್ಲಿ ಶೇ 3, ಮನೆಯಲ್ಲಿಯೇ ಪ್ರತ್ಯೇಕ ವಾಸ ಶೇ 74 ರಷ್ಟು ಇದ್ದರು. ಜನವರಿಗೆ 1 ರಿಂದ 11 ರವರೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 62,641 ಆಗಿದ್ದು, ಆಸ್ಪತ್ರೆಯಲ್ಲಿ ಶೇ 6, ಕೋವಿಡ್‌ ಆರೈಕೆ ಕೇಂದ್ರದಲ್ಲಿ ಶೇ 1 ಮತ್ತು ಮನೆ ಪ್ರತ್ಯೇಕ ವಾಸದಲ್ಲಿ ಶೇ 93 ರಷ್ಟು ರೋಗಿಗಳು ಇದ್ದಾರೆ ಎಂದು ವಿವರ ನೀಡಿದರು.

ಕೋವಿಡ್ ಎದುರಿಸಲು ಸಿದ್ಧತೆ: ಪ್ರತಿ ದಿನ 2 ಲಕ್ಷ ಕೋವಿಡ್‌ ಪರೀಕ್ಷೆಯ ಗುರಿಯನ್ನು ನೀಡಲಾಗಿದ್ದು, ಆ ಸಂಖ್ಯೆಯನ್ನು ಇನ್ನು ಹೆಚ್ಚಿಸಲು ಕ್ರಮವಹಿಸಲಾಗಿದೆ. ಬೆಂಗಳೂರಿನಲ್ಲಿ ಈಗ 1 ಲಕ್ಷ ಪರೀಕ್ಷೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 265 ಪರೀಕ್ಷೆ ಪ್ರಯೋಗಾಲಯ ಸ್ಥಾಪಿಸಿದ್ದು, ಮೊದಲ ಬಾರಿಗೆ 5 ವಂಶವಾಹಿ
ಅನುಕ್ರಮಣಿಕೆ ಪರೀಕ್ಷೆಯ ಪ್ರಯೋಗಾಲಯ ಆರಂಭಿಸಲಾಗಿದ್ದು, ಕೇಂದ್ರ ಸರ್ಕಾರ ಈ ರೀತಿಯ 4 ಪ್ರಯೋಗಾಲಯ ಸ್ಥಾಪಿಸಿದೆ. ಒಂದು ಬ್ಯಾಚ್‌ನಲ್ಲಿ 1,875 ಮಾದರಿಗಳನ್ನು ಅನುಕ್ರಮಣಿಕೆ ಮಾಡುವ ಸೌಲಭ್ಯವಿದೆ ಎಂದರು.

ಮೂರನೇ ಅಲೆಯನ್ನು ನಿಭಾಯಿಸಲು ₹243 ಕೋಟಿ ವೆಚ್ಚದಲ್ಲಿ 147 ತಾಲ್ಲೂಕು ಆಸ್ಪತ್ರೆಗಳಲ್ಲಿ 6,386 ಆಮ್ಲಜನಕಯುಕ್ತ ಹಾಸಿಗೆಗಳು, 2,928 ಐಸಿಯು ಹಾಸಿಗೆಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. 19 ಜಿಲ್ಲಾ ಆಸ್ಪತ್ರೆಗಳಲ್ಲಿ 665 ಆಮ್ಲಜನಕಯುಕ್ತ ಹಾಸಿಗೆಗಳು, 263 ಐಸಿಯು ಹಾಸಿಗೆಗಳನ್ನು ₹25 ಕೋಟಿ ವೆಚ್ಚದಲ್ಲಿ ಅಳವಡಿಸಲಾಗಿದೆ. ಆಮ್ಲಜನಕ ಉತ್ಪಾದನಾ ಘಟಕ ರಾಜ್ಯಕ್ಕೆ ದೊರೆತಿದ್ದು, 217 ಕಾರ್ಯಾರಂಭ ಮಾಡಿವೆ. 3,460 ವೆಂಟಿಲೇಟರ್‌ಗಳು ಮತ್ತು 8,100 ಆಮ್ಲಜನಕ ಸಾಂದ್ರಕ ಲಭ್ಯವಿದೆ ಎಂದು ಸುಧಾಕರ್‌ ಹೇಳಿದರು.

ಕೇಂದ್ರದ ನೆರವು ಕೋರಿದ ಬೊಮ್ಮಾಯಿ

‘ಕೋವಿಡ್ ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ರಾಜ್ಯದಲ್ಲಿ ಆಮ್ಲಜನಕ ವ್ಯವಸ್ಥೆ ಇರುವ ಹಾಸಿಗೆಗಳು ಮತ್ತು ಆಮ್ಲಜನಕ ಉತ್ಪಾದನಾ ಘಟಕಗಳ ಸಂಖ್ಯೆ ಇನ್ನಷ್ಟು ಹೆಚ್ಚಿಸಲು ಕೇಂದ್ರದ ಸರ್ಕಾರದ ನೆರವು ಕೋರಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ನಡೆಸಿದ ವರ್ಚುವಲ್‌ ಸಭೆಯಲ್ಲಿ ಬೊಮ್ಮಾಯಿ ಈ ಕುರಿತು ಪ್ರಸ್ತಾವ ಮಂಡಿಸಿದರು.

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಮತ್ತು ನಿರ್ವಹಣೆಗೆ ಅಳವಡಿಸಿರುವ ಟೆಸ್ಟಿಂಗ್‌, ಟ್ರ್ಯಾಕಿಂಗ್‌, ಟ್ರೇಸಿಂಗ್‌, ಟ್ರಯಾಜಿಂಗ್‌ ಮತ್ತು ಟೆಕ್ನಾಲಜಿ ಬಳಕೆಯ 5 ಟಿ ಸೂತ್ರದ ಅಳವಡಿಕೆ, ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆ ನಡೆಸುತ್ತಿರುವುದು ಮತ್ತು ಲಸಿಕೆ ಹಾಕಿಕೊಂಡವರ ಪ್ರಮಾಣದ ದೇಶದ ಸರಾಸರಿಗಿಂತ ಹೆಚ್ಚು ಇರುವ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ಕೋವಿಡ್‌ ಮೂರನೇ ಅಲೆ ಫೆಬ್ರುವರಿಯಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದ್ದು, ಮೊದಲ ಮತ್ತು ಎರಡನೇ ಅಲೆಯನ್ನು ಎದುರಿಸಿದ ಅನುಭವದ ಆಧಾರದಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಸಲಹೆ ನೀಡಿದರು.

ಮೂರನೇ ಅಲೆಯ ಸಂದರ್ಭ ಶೇ 94 ಕ್ಕೂ ಹೆಚ್ಚು ಸೋಂಕಿತರು ಗೃಹ ಪ್ರತ್ಯೇಕ ವಾಸ ಇದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸ ಮೂಡಿಸುವ ಹಾಗೂ ಅವರಿಗೆ ಔಷಧ ಪೂರೈಕೆಯೂ ಸೇರಿ ಸೂಕ್ತ ಆರೈಕೆ ಖಾತರಿಪಡಿಸಲು ಆದ್ಯತೆ ನೀಡಬೇಕು ಎಂದೂ ಪ್ರಧಾನಿ ಸೂಚಿಸಿದ್ದಾಗಿ ಬೊಮ್ಮಾಯಿ ಹೇಳಿದರು.

ಮಕ್ಕಳಿಗೆ ಶೇ 30 ಹಾಸಿಗೆ ಮೀಸಲು

ಮಕ್ಕಳಲ್ಲಿ ಕೋವಿಡ್‌ ಸೋಂಕು ಹೆಚ್ಚುತ್ತಿರುವುದರಿಂದ ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಶೇ 30 ರಷ್ಟು ಹಾಸಿಗೆಗಳನ್ನು ಮಕ್ಕಳ ಚಿಕಿತ್ಸೆಗಾಗಿ ಮೀಸಲಿಡಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯನ್ನು ಕೋವಿಡ್‌ ಸೋಂಕಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಾಗಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ 15 ದಿನಕ್ಕೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT