ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸೇರಿದ ಬಾಬೂರಾವ್ ಚಿಂಚನಸೂರಗೆ ಗುರುಮಠಕಲ್‌ ಟಿಕೆಟ್ ?

Last Updated 22 ಮಾರ್ಚ್ 2023, 13:36 IST
ಅಕ್ಷರ ಗಾತ್ರ

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ಸೋಮವಾರ ಬಿಜೆಪಿಗೆ ಕೈಕೊಟ್ಟ ಕಲ್ಯಾಣ ಕರ್ನಾಟಕ ಭಾಗದ ವರ್ಣರಂಜಿತ ರಾಜಕಾರಣಿ, ಮಾಜಿ ಎಂಎಲ್‌ಸಿ ಬಾಬುರಾವ ಚಿಂಚನಸೂರ ಬುಧವಾರ (ಮಾ.22)ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಸಮ್ಮುಖ ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆಯಾಗಿದ್ದಾರೆ. ಚಿಂಚನಸೂರ ಪಕ್ಷ ಸೇರ್ಪಡೆಯಿಂದ ಕ್ಷೇತ್ರದ ಟಿಕೆಟ್‌ 'ಕೈ'ಗಿಟ್ಟಿದೆ ಎನ್ನುವ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ.

ಕೆಲ ದಿನಗಳ ಹಿಂದೆ ಬಿಜೆಪಿ ಎಂಎಲ್ಸಿ ಎನ್‌.ರವಿಕುಮಾರ್ ಜೊತೆಗೂಡಿ ಸುದ್ದಿಗೋಷ್ಠಿ ನಡೆಸಿದ್ದ ಚಿಂಚನಸೂರ 'ಲೋಕಸಭಾ ಚುನಾವಣೆಯಲ್ಲಿ ತೊಡೆತಟ್ಟಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದೆ, ಅದರಂತೆ 2023ರ ವಿಧಾನಸಭಾ ಚುನಾವಣೆಯಲ್ಲಿ ಅವರ ಪುತ್ರ ಪ್ರಿಯಾಂಕ್ ಖರ್ಗೆಯವರನ್ನೂ ಸೋಲಿಸುತ್ತೇನೆ' ಎಂದು ತೊಡೆತಟ್ಟಿದ್ದರು.

ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಶರಣಪ್ರಕಾಶ ಪಾಟೀಲ ಸೇಡಂ ಅವರ ಉಪಸ್ಥಿತಿಯಲ್ಲಿ ಕಾಂಗ್ರೆಸ್‌ ಸೇರುವ ಮೂಲಕ ಪಕ್ಷ ಸೇರ್ಪಡೆಯ ಕುರಿತು ಹರಿದಾಡಿದ ಹಲವು ಚರ್ಚೆಗಳಿಗೆ ತೆರೆಬಿದ್ದಿದೆ.

ಚಿಂಚನಸೂರ 'ಕೈ'ಗೆ ಟಿಕೆಟ್‌: ಕಾಂಗ್ರೆಸ್‌ ಸೇರ್ಪಡೆಗೆ ಮುನ್ನವೇ ಪಕ್ಷದೊಂದಿಗೆ ಸಂಪೂರ್ಣ ಚರ್ಚೆ ನಡೆಸಿದ್ದ ಚಿಂಚನಸೂರ, ಗುರಮಠಕಲ್‌ ಕ್ಷೇತ್ರದ ಟಿಕೆಟ್‌ ನೀಡುವ ಭರವಸೆ ಪಡೆದೇ ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನುವ ಚರ್ಚೆಗಳು ಬುಧವಾರ ಮಧ್ಯಾಹ್ನದಿಂದ ಹರಿದಾಡುತ್ತಿವೆ.

ಕೆಪಿಸಿಸಿ ನೀಡಿದ್ದ ಮಾರ್ಗಸೂಚಿಯಂತೆ ಗುರುಮಠಕಲ್‌ ಕ್ಷೇತ್ರದ ಟಿಕೆಟ್‌ಗಾಗಿ ಈಗಾಗಲೇ ಶ್ರೇಣಿಕುಮಾರ ದೋಖಾ, ಬಸರೆಡ್ಡಿಗೌಡ ಅನಪುರ, ಶರಣಪ್ಪ ಮಾನೇಗಾರ ಸಾಯಿಬಣ್ಣ ಬೋರಬಂಡ, ತಿಪ್ಪಣ್ಣ ಕಮಕನೂರ, ನಿತ್ಯಾನಂದ ಪೂಜಾರಿ, ಡಾ.ಉದಯಕುಮಾರ ಹಾಗೂ ಯೋಗೇಶ ಬೆಸ್ತರ್ ಸೇರಿ ಒಟ್ಟು ಎಂಟು ಜನ ಆಕಾಂಕ್ಷಿಗಳು ಅರ್ಜಿಸಲ್ಲಿಸಿದ್ದಾರೆ.

'ಚಿಂಚನಸೂರ ಸೇರ್ಪಡೆಯ ಜೊತೆಗೆ ಟಿಕೆಟ್‌ ಕೂಡ ಪಡೆಯಲಿದ್ದಾರೆ' ಎನ್ನುವ ಮಾತುಗಳ ಜೊತೆಗೆ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ನೀಡಲಿದೆ? ತಮ್ಮ ಮುಖಂಡನಿಗೆ ಟಿಕೆಟ್‌ ತಪ್ಪಿದರೆ ಮುಂದೇನು ಮಾಡುವುದು ಎನ್ನುವ ಚಿಂತನೆಗಳು ಜೋರಾಗಿವೆ.

ಬಿಜೆಪಿಯಲ್ಲಿ ಮಿಶ್ರ ಪ್ರತಿಕ್ರಿಯೆ:

ಬುರಾವ ಚಿಂಚನಸೂರ ಪಕ್ಷ ತೊರೆದ ಹಿನ್ನಲೆ ಕ್ಷೇತ್ರದ ಕ್ಷೇತ್ರ ಬಿಜೆಪಿ ಪಾಳಯದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಬಂದಿದೆ.

ಚಿಂಚನಸೂರ ಅವರಿಗೆ ಸೋತಾಗ ತಿರುಗಾಡಲು ಸ್ಥಾನಮಾನ ಬೇಕಿತ್ತು, ಅದಕ್ಕಾಗಿ ಬಿಜೆಪಿ ಸೇರಿದ್ದರು. ಚಿಂಚನಸೂರ ಅವರ ವಯಸ್ಸು ಮತ್ತು ಕಬ್ಬಲಿಗ ಸಮುದಾಯದ ಮೇಲಿನ ಗೌರವದಿಂದ ಅವರ ಕುಟುಂಬಕ್ಕೆ ಬಿಜೆಪಿ ಗೌರವದ ಸ್ಥಾನಮಾನವೂ ನೀಡಿತ್ತು. ತಮ್ಮ ಸ್ವಾರ್ಥಕ್ಕೆ ನಂಬಿದ ಕಾರ್ಯಕರ್ತರಿಗೆ ಚಿಂಚನಸೂರ ಮೋಸ ಮಾಡಿದ್ದಾರೆ ಎಂದು ಕೆಲವರು ದೂರುತ್ತಾರೆ.

ವ್ಯಕ್ತಿಗಿಂತ ಪಕ್ಷ ದೊಡ್ಡದು, ಬಿಜೆಪಿಯು ಶಿಸ್ತು ಮತ್ತು ಸಿದ್ಧಾಂತದೊಂದಿಗೆ ಕೆಲಸ ಮಾಡುವ ಕಾರ್ಯಕರ್ತರ ಪಕ್ಷ. ಸ್ವಾರ್ಥಕ್ಕಾಗಿ ಚಿಂಚನಸೂರ ಪಕ್ಷ ತೊರೆದಿದ್ದಾರೆ. ಪಕ್ಷಕ್ಕೆ ಯಾವ ನಷ್ಟವೂ ಇಲ್ಲ ಎನ್ನುವುದು ಕೆಲ ಬಿಜೆಪಿ ಮುಖಂಡರ ಮಾತು.

ಜೆಡಿಎಸ್‌ಗಿಲ್ಲ ನಷ್ಟ:

ಬಾಬುರಾವ ಚಿಂಚನಸೂರ ಅವರು ತಮ್ಮ ಸ್ವಾರ್ಥಕ್ಕೆ ಪದೆ ಪದೇ ಪಕ್ಷ ಬದಲಿಸುತ್ತಿದ್ದು, ಕ್ಷೇತ್ರದ ಜನತೆಯ ನಂಬಿಕೆ ಕಳೆದುಕೊಂಡಿದ್ದಾರೆ. ಕಾಂಗ್ರೆಸ್‌ ಸೇರಿದರೂ ಜೆಡಿಎಸ್‌ಗೆ ಯಾವ ನಷ್ಟವೂ ಇಲ್ಲ ಎನ್ನುತ್ತಾರೆ ಜೆಡಿಎಸ್‌ ಬ್ಲಾಕ್‌ ಅಧ್ಯಕ್ಷ ಪ್ರಕಾಶ ನಿರೇಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT