ಗುರುವಾರ , ಮಾರ್ಚ್ 30, 2023
24 °C
‘2023ಕ್ಕೆ ಪರಿಶಿಷ್ಟದವರಿಗೆ ರಾಜ್ಯದ ಸಿ.ಎಂ ಹುದ್ದೆ ಸಿಗಬಹುದೇ? ಕುರಿತ ಸಂವಾದ

ಪ್ರಜಾವಾಣಿ ಸಂವಾದ: ಪರಿಶಿಷ್ಟ ಸಿ.ಎಂ: ಕಷ್ಟ, ಆದರೆ ಅಸಾಧ್ಯವಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪರಿಶಿಷ್ಟರು ಕಾಂಗ್ರೆಸ್‌ ಮತ ಬ್ಯಾಂಕ್‌. ಹೀಗಾಗಿ, ಆ ಪಕ್ಷದ ಮುಂದಿನ ಮುಖ್ಯಮಂತ್ರಿ ಪಟ್ಟ ಈ ವರ್ಗದವರಿಗೆ ಸಿಗಬೇಕು’ ಎಂದು ಕೊಳ್ಳೇಗಾಲ ಪಕ್ಷೇತರ ಶಾಸಕ ಎನ್‌.ಮಹೇಶ್‌ ವಾದಿಸಿದರೆ, ‘ಪರಿಶಿಷ್ಟರಿಗೆ ಸಿಗಬೇಕು ಎನ್ನುವುದರಲ್ಲಿ ಭಿನ್ನಾಭಿಪ್ರಾಯ ಇಲ್ಲ. ಆದರೆ, ಕಾಂಗ್ರೆಸ್‌ ವ್ಯಕ್ತಿಯನ್ನು ಮುಂದಿಟ್ಟು ಚುನಾವಣೆ ಮಾಡುವುದಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಹೋಗಲಿದೆ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್‌. ಶಂಕರ್ ಹೇಳಿದರು.

‘ಹೊಸ ರಾಜಕೀಯ ಪ್ರಯೋಗವೊಂದು ಫಲ ನೀಡುವವರೆಗೆ ಪರಿಶಿಷ್ಟ ಮುಖ್ಯಮಂತ್ರಿ ಅಷ್ಟು ಸುಲಭವಲ್ಲ. ಆ ಪ್ರಯೋಗ ಕಷ್ಟಸಾಧ್ಯವೇನೂ ಅಲ್ಲ’ ಎಂದು ‘ಜಾಗೃತ ಕರ್ನಾಟಕ’ ಸಂಘಟನೆಯ ಸಂಚಾಲಕ ಡಾ.ವಾಸು ಎಚ್‌.ವಿ ಅಭಿಪ್ರಾಯಪಟ್ಟರು. ‘2023ಕ್ಕೆ ಪರಿಶಿಷ್ಟ ಸಮುದಾಯಕ್ಕೆ ರಾಜ್ಯದ ಸಿ.ಎಂ ಹುದ್ದೆ ಸಿಗಬಹುದೇ‘ ಎಂಬ ವಿಷಯ ಕುರಿತು ‘ಪ್ರಜಾವಾಣಿ‘ ನೇರ ಸಂವಾದದಲ್ಲಿ ಇವರು ತಮ್ಮ ಅಭಿಪ್ರಾಯ ಮಂಡಿಸಿದರು. ಅದರ ಆಯ್ದ ಅಂಶಗಳು ಇಲ್ಲಿವೆ.

**

ಪರಿಶಿಷ್ಟರು ಭವಿಷ್ಯದಲ್ಲಿ ಸಿ.ಎಂ ಆಗಲಿದ್ದಾರೆ: ಬಿ.ಎಲ್‌. ಶಂಕರ್‌
ಶೋಷಿತ, ಅವಕಾಶ ವಂಚಿತರಿಗೆ ಅವಕಾಶ ಸಿಗಬೇಕು ಎಂಬ ಕಾರಣಕ್ಕೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಆಯ್ಕೆ ಮಾಡಿಕೊಂಡಿದ್ದೇವೆ. ಆದರೆ, 70ರ ದಶಕದ ನಂತರ ಪಕ್ಷದ ಬದಲು, ವ್ಯಕ್ತಿಗೆ ಪ್ರಾಧಾನ್ಯತೆ ಬಂತು. ಸಾಮಾಜಿಕ, ಆರ್ಥಿಕ ಬಲಾಡ್ಯರಿಗೆ ರಾಜಕೀಯ ಅವಕಾಶ ಸಿಕ್ಕಿತು. ಪರಿಶಿಷ್ಟರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ ಎನ್ನುವುದಕ್ಕೆ ನಿರ್ದಿಷ್ಟವಾದ ಒಂದು ಪಕ್ಷಕ್ಕೆ ಹೊಣೆ ಹೊರಿಸುವುದು ಸರಿಯಲ್ಲ. ಬಹಳ ವರ್ಷಗಳಿಂದ ಸಾಮಾಜಿಕ ಸಮಾನತೆಗೆ ನಡೆದ ಹೋರಾಟ ಹಿನ್ನೆಲೆಯಲ್ಲಿ ಈ ವಿಷಯವನ್ನು ಗಮನಿಸಬೇಕು. ರಾಜಕೀಯದಲ್ಲಿ ಸಾಮಾಜಿಕ ಸ್ಥಿತಿ, ಹಣ ವಹಿಸುವ ಪಾತ್ರವನ್ನು ನೋಡಿಕೊಂಡು ಚರ್ಚೆ ಮಾಡಬೇಕು. ಪರಿಸ್ಥಿತಿಯಿಂದಲೊ, ಪಿತೂರಿಯಿಂದಲೊ, ಜನಾಭಿಪ್ರಾಯದಿಂದಲೊ ಗೊತ್ತಿಲ್ಲ, ಪರಿಶಿಷ್ಟರು ಮುಖ್ಯಮಂತ್ರಿಯಾಗುವ ಸಾಧ್ಯತೆಯಂತೂ ಇದೆ. ಸ್ವಂತ ಬಲದಿಂದ ಮುಖ್ಯಮಂತ್ರಿ ಆಗುತ್ತೇನೆಂದರೆ ಸದ್ಯದ ವ್ಯವಸ್ಥೆಯಲ್ಲಿ ಕಷ್ಟ. ಪಕ್ಷಕ್ಕೂ, ನಾಯಕರಿಗೂ ಮತ ಬರಬೇಕು. ಆಗ ಮಾತ್ರ ಸಾಧ್ಯ. ಆದರೆ, ಧರ್ಮ ರಾಜಕೀಯ, ಭಾವನಾತ್ಮಕ ರಾಜಕೀಯ ಇರುವವರೆಗೆ ಅಷ್ಟು ಸುಲಭವಲ್ಲ. ಈ ಎರಡೂ ವಿಷಯ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುತ್ತಿದೆ. ಆದರೆ, ಚುನಾವಣೆಗಳಲ್ಲಿ ಮುಂದಿನ ನಾಯಕರೊಬ್ಬರನ್ನು ಬೊಟ್ಟು ಮಾಡಿ ನಿಲ್ಲಿಸುವುದಕ್ಕೆ ನನ್ನ ವಿರೋಧವಿದೆ. ಸಿದ್ಧಾಂತ, ಈವರೆಗಿನ ಸಾಧನೆ, ಮುಂದಿನ ಯೋಜನೆಗಳನ್ನು ಆಧರಿಸಿ ಪಕ್ಷಗಳಿಗೆ ಜನರು ಮತ ನೀಡಬೇಕು. 

 -ಬಿ.ಎಲ್‌. ಶಂಕರ್‌, ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ

ಪರಿಶಿಷ್ಟರು ಮತ ಬ್ಯಾಂಕ್‌ ಆಗಬಾರದು: ಎನ್‌.ಮಹೇಶ್‌
ಭಾವಿ ಮುಖ್ಯಮಂತ್ರಿ ಬಗ್ಗೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಪ್ರಸ್ತಾಪಿಸಿದ ಬಳಿಕ ಈ ವಿಷಯ ಮುನ್ನೆಲೆಗೆ ಬಂದಿದೆ. ಆದರೆ, 2008ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, 2013ರಲ್ಲಿ ಜಿ. ಪರಮೇಶ್ವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿತ್ತು. 70ರ ದಶಕದಿಂದಲೂ ಪರಿಶಿಷ್ಟರು ಕಾಂಗ್ರೆಸ್ಸಿಗೆ ಮತ ಹಾಕಿಕೊಂಡು ಬಂದಿದ್ದಾರೆ. ಹೀಗಾಗಿ, ಅವರಿಗೆ ಆ ಪಕ್ಷ ಅವಕಾಶ ನೀಡಬೇಕು. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಿಸಿದರೆ ಪರಿಶಿಷ್ಟರಿಗೆ ಅವಕಾಶ ಕೊಡಬೇಕು. ಬಿಜೆಪಿಗೆ ಲಿಂಗಾಯತರು, ಜೆಡಿಎಸ್‌ಗೆ ಒಕ್ಕಲಿಗರು ಮತ ಬ್ಯಾಂಕ್‌. ಹೀಗಾಗಿ ಆ ಪಕ್ಷಗಳು ಅಧಿಕಾರಕ್ಕೆ ಬಂದಾಗ ಆ ಸಮುದಾಯದವರು ಮುಖ್ಯಮಂತ್ರಿ ಆಗಿಲ್ಲವೇ? ಉಳಿದ ಸಮುದಾಯಗಳ ಮತಗಳು ನಷ್ಟ ಆಗಬಾರದು ಎಂಬ ಭಯದಿಂದ ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟರಿಗೆ ಮುಖ್ಯಮಂತ್ರಿ ವಿಷಯಕ್ಕೆ ಆದ್ಯತೆ ಸಿಗುತ್ತಿಲ್ಲ. ಪರಿಶಿಷ್ಟರು ಮತ ಬ್ಯಾಂಕ್‌ ಆಗಬಾರದು. 200 ಕ್ಷೇತ್ರಗಳಲ್ಲಿ ಪರಿಶಿಷ್ಟರು ನಿರ್ಣಾಯಕ‌ರು. ಪಕ್ಷಾತೀತವಾಗಿ ಉತ್ತಮರನ್ನು ಆಯ್ಕೆ ಮಾಡಿದರೆ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸ್ವಚ್ಛ ಮಾಡಲು ಸಾಧ್ಯ. ಹೋರಾಟ ಅಥವಾ ಹೊಂದಾಣಿಕೆಯ ರಾಜಕೀಯವಾದರೂ ಸರಿ, ಶಕ್ತಿ ಕೇಂದ್ರದಲ್ಲಿ ಪರಿಶಿಷ್ಟರು ಇರಬೇಕು. ಕೇವಲ ಬೀದಿಯಲ್ಲಿ ನಿಂತರೆ ಆಗಲ್ಲ. ಹೋರಾಟ ಕೊನೆಯ ಅಸ್ತ್ರ. 

-ಎನ್‌.ಮಹೇಶ್‌, ಶಾಸಕ, ಕೊಳ್ಳೇಗಾಲ

***

ಪ್ರಾಯೋಗಿಕ ರಾಜಕೀಯದಿಂದ ಮಾತ್ರ ಸಾಧ್ಯ: ಡಾ.ವಾಸು ಎಚ್‌.ವಿ
2023ಕ್ಕೆ ಪರಿಶಿಷ್ಟ ಮುಖ್ಯಮಂತ್ರಿ ಆಗಬೇಕೇ ಎಂದರೆ ಆಗಲೇಬೇಕು. ಆಗುವ ಸಾಧ್ಯತೆ ಇದೆಯೇ ಅಂದರೆ ಇಲ್ಲ. ಸಿದ್ಧಾಂತಗಳ ವಿಚಾರದಲ್ಲಿ ರಾಜಿ, ಡಮ್ಮಿ ಕಾರಣಕ್ಕೊ ಮುಖ್ಯಮಂತ್ರಿಯಾಗುವುದು ಬೇರೆ. ಅರ್ಹತೆ ಇದ್ದೂ ಪರಿಶಿಷ್ಟರು ಮುಖ್ಯಮಂತ್ರಿ ಯಾಕೆ ಆಗುವುದಿಲ್ಲ ಎನ್ನುವುದು ಮುಖ್ಯ. ಉತ್ತರ ಪ್ರದೇಶದಲ್ಲಿ ಬಹುಜನ ರಾಜಕೀಯದ ಮೂಲಕ ಬಿಎಸ್‌ಪಿಯನ್ನು ಅಧಿಕಾರಕ್ಕೆ ತಂದು ಮಾಯಾವತಿ ಮುಖ್ಯಮಂತ್ರಿ ಆಗಿಲ್ಲವೇ? ಮಲ್ಲಿಕಾರ್ಜುನ ಖರ್ಗೆಯಂಥ ನಾಯಕರಿದ್ದೂ ಅವರು ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಆದಿಯಾಗಿ ಯಾವ ನಾಯಕರೂ ಬಹಿರಂಗವಾಗಿ ಹೇಳಿಲ್ಲ. ಸದ್ಯ ಈ ವಿಷಯ ಅಸಂಗತವಾದರೂ ಪರಿಶಿಷ್ಟರು ಮುಖ್ಯಮಂತ್ರಿ ಆಗಬೇಕೆ ಎನ್ನುವುದನ್ನು ಬಿಜೆಪಿಯಲ್ಲಿ ಆರೆಸ್ಸೆಸ್ಸ್‌ನ ಕೇಂದ್ರ ನಾಗಪುರ, ಕಾಂಗ್ರೆಸ್‌ನಲ್ಲಿ 10 ಜನಪಥ್‌ ತೀರ್ಮಾನ ಮಾಡಬೇಕು. ಸಾಂವಿಧಾನಿಕ ರಾಜಕೀಯ ಈಗ ನಡೆಯುತ್ತಿಲ್ಲ. ದೊಡ್ಡ ಜಾತಿ, ಬಲಾಢ್ಯರದ್ದೇ ಬಲ. ಪರಿಶಿಷ್ಟರು ಮುಖ್ಯಮಂತ್ರಿ ಹುದ್ದೆಗೇರಬೇಕಿದ್ದರೆ ರಾಜ್ಯದಲ್ಲೂ ಹೊಸ ರೀತಿಯ ಪ್ರಾಯೋಗಿಕ ರಾಜಕೀಯ ರೂಪುಗೊಳ್ಳಬೇಕು. ಬಿಎಸ್‌ಪಿ, ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದಿದ್ದೇ ಆಂಥ ಪ್ರಯೋಗದಿಂದ. ಅದು ಯಶಸ್ಸು ಕಾಣುತ್ತದೆ ಎನ್ನುವುದಕ್ಕೆ ಹಿಂದುತ್ವದ ರಾಜಕೀಯ, ಅಸಾಂವಿಧಾನಿಕ ರಾಜಕೀಯ ಮಾಡಿದ ಮೋದಿಯೇ ಉದಾಹರಣೆ.

-ಡಾ.ವಾಸು ಎಚ್‌.ವಿ, ಸಂಚಾಲಕ, ಜಾಗೃತ ಕರ್ನಾಟಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು