ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ | ‘ಚುಡಾಯಿಸ್ತಾರ‍್ರೀ, ನಾವು ಅಲ್ಲಿಗೆ ಹೋಗಂಗಿಲ್ಲ’

ಕಾಳಜಿ ಕೇಂದ್ರಕ್ಕೆ ತೆರಳಲು ಹೆಣ್ಣುಮಕ್ಕಳು ಹಿಂದೇಟು
Last Updated 17 ಆಗಸ್ಟ್ 2020, 19:15 IST
ಅಕ್ಷರ ಗಾತ್ರ

ಲಕಮಾಪುರ (ಗದಗ): ನರಗುಂದ ತಾಲ್ಲೂಕಿನ ಲಕಮಾಪುರ ಗ್ರಾಮ ಪ್ರವಾಹದಿಂದಾಗಿ ನಡುಗಡ್ಡೆಯಂತಾಗಿದ್ದು, ಅಲ್ಲಿನ ಜನರೆಲ್ಲರೂ ಊರು ಬಿಟ್ಟಿದ್ದಾರೆ. ಅವರನ್ನು ಸಮೀಪದ ಬೆಳ್ಳೇರಿಯ ಕಾಳಜಿ ಕೇಂದ್ರಕ್ಕೆ ಕರೆದೊಯ್ಯಲು ಅಧಿಕಾರಿಗಳು ಸೋಮವಾರ ಇಡೀ ದಿನ ತಮ್ಮ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದರು!

ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಎಸ್.‌ಪಿ. ಯತೀಶ್‌ ಎನ್‌. ಮೊದಲಾದ ಅಧಿಕಾರಿಗಳು ಗ್ರಾಮಸ್ಥರನ್ನು ಪರಿಪರಿಯಾಗಿ ಕೇಳಿಕೊಂಡರೂ ಅವರು ಕಾಳಜಿ ಕೇಂದ್ರಕ್ಕೆ ತೆರಳಲು ಒಪ್ಪಲಿಲ್ಲ. ಅಲ್ಲಿದ್ದ ಹೆಂಗಸರು, ಯುವತಿಯರು ‘ನಾವು ಯಾವುದೇ ಕಾರಣಕ್ಕೂ ಆ ಊರಿಗೆ ಹೋಗುವುದಿಲ್ಲ. ಸತ್ತರೂ, ಕೆಟ್ಟರೂ ಇಲ್ಲೇ ಇರುತ್ತೇವೆ’ ಎಂದು ಹಟ ಹಿಡಿದು ಅಧಿಕಾರಿಗಳಿಗೆ ಬೆನ್ನು ತೋರಿಸಿ ನಿಲ್ಲುತ್ತಿದ್ದರು. ಹೆಣ್ಣು ಮಕ್ಕಳ ಮನ ಒಲಿಸುವಲ್ಲಿ ಊರಿನ ಹಿರಿಯರೂ ಸೋತು, ಕೊನೆಗೆ ಕೈ ಚೆಲ್ಲಿದರು.

ಉತ್ತಮ ಸೌಲಭ್ಯ ಇರುವ ಕಾಳಜಿ ಕೇಂದ್ರಕ್ಕೆ ತೆರಳಲು ಯಾಕಿಷ್ಟು ಅಂಜಿಕೆ ಎಂದು ‘ಪ್ರಜಾವಾಣಿ’ ಊರಿನ ಯುವಕರನ್ನು ಪ್ರಶ್ನಿಸಿದಾಗ ಅವರು ಉತ್ತರಿಸಿದ್ದು ಹೀಗೆ:

‘ನಮಗೂ ಆ ಊರಿಗೂ ಅಷ್ಟಕ್ಕಷ್ಟೇ. ನಾವು ಅಲ್ಲಿಗೆ ಹೋದರೆ ನಮ್ಮ ಹೆಣ್ಣು ಮಕ್ಕಳನ್ನು ಅವರು ಚುಡಾಯಿಸುತ್ತಾರೆ. ಅಲ್ಲಿ ಹೆಂಗಸರಿಗೆ ರಕ್ಷಣೆ ಇರುವುದಿಲ್ಲ. ನಮಗೆ ಇಲ್ಲೇ ಶೆಡ್‌ ನಿರ್ಮಿಸಿಕೊಟ್ಟರೆ ಸಾಕು. ರಟ್ಟೆಯಲ್ಲಿ ಶಕ್ತಿ ಇದೆ. ಕೂಲಿ–ನಾಲಿ ಮಾಡಿಕೊಂಡು ಬದುಕುತ್ತೇವೆಯೇ ಹೊರತು; ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ’.

ಈ ವಿಚಾರವನ್ನು ಎಸ್‌ಪಿ ಯತೀಶ್‌ ಎನ್‌. ಗಮನಕ್ಕೆ ತಂದಾಗ, ‘ಆ ರೀತಿ ಸಮಸ್ಯೆ ಇದ್ದರೆ ಪೊಲೀಸರ ರಕ್ಷಣೆ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಅಂತೂ ಸೋಮವಾರ ಸಂಜೆ 5ರ ಸುಮಾರಿಗೆ ಊರಿನ ಹೆಣ್ಣು ಮಕ್ಕಳೆಲ್ಲರೂ ಕಾಳಜಿ ಕೇಂದ್ರಕ್ಕೆ ತೆರಳಲು ಒಪ್ಪಿದರು. ಅವರು ಒಪ್ಪಿದ್ದಕ್ಕೆ ಅಧಿಕಾರಿಗಳು ನಿಟ್ಟುಸಿರು ಬಿಟ್ಟರು.

ರಸ್ತೆ ಜಲಾವೃತ
ರೋಣ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಾದ ಮೆಣಸಗಿ, ಗಾಡಗೋಳಿ, ಹೊಳೆಮಣ್ಣೂರು, ಹೊಳೆಆಲೂರು, ಅಮರಗೋಳ, ಬಿ.ಎಸ್.ಬೇಲೇರಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳ ಜನರು ಪ್ರವಾಹದ ಭೀತಿಯಲ್ಲಿ ಇದ್ದಾರೆ.

ಹೊಳೆಆಲೂರಿನಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಹೊಳೆಆಲೂರಿನಿಂದ ಬಾದಾಮಿ, ಕುರುವಿನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT