ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ: ಜನವರಿ 1ರಿಂದಲೇ ಪೂರ್ವಾನ್ವಯ

Last Updated 5 ಏಪ್ರಿಲ್ 2022, 8:42 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸರ್ಕಾರಿ ನೌಕರರಿಗೆ ಮೂಲವೇತನದ ಶೇ 2.75 ತುಟ್ಟಿಭತ್ಯೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ಜನವರಿ 1 ರಿಂದಲೇ ಅನ್ವಯ ಆಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಇಂದು ಟ್ವೀಟ್ ಮಾಡಿರುವ ಅವರು, 'ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ ₹ 1,447 ಕೋಟಿ ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು'ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವೂ ಕೂಡ ತನ್ನ ನೌಕರರಿಗೆ ಶೇ 3 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು.

ತುಟ್ಟಿಭತ್ಯೆ ಮತ್ತು ಹಣದುಬ್ಬರ
ತುಟ್ಟಿಭತ್ಯೆಗೂ ಹಣದುಬ್ಬರ ಅಥವಾ ಬೆಲೆ ಏರಿಕೆಗೂ ನೇರವಾದ ನಂಟು ಇದೆ. ಸರ್ಕಾರಿ ನೌಕರರ ಒಟ್ಟು ವೇತನದಲ್ಲಿ ಮೂಲವೇತನ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಭತ್ಯೆ ಮುಂತಾದವುಗಳ ಜೊತೆಗೇ ತುಟ್ಟಿಭತ್ಯೆಯೂ ಸೇರಿರುತ್ತದೆ. ತುಟ್ಟಿಭತ್ಯೆ ಹೊರತುಪಡಿಸಿದ ಇತರ ಭತ್ಯೆಗಳು ನಿರ್ದಿಷ್ಟ ಖರ್ಚು ವೆಚ್ಚಗಳಿಗೆ ಸಂಬಂಧಪಟ್ಟಿದ್ದು ಅವುಗಳನ್ನು ಮೂಲವೇತನದ ಒಂದು ನಿಗದಿತ ಶೇಕಡಾ ಭಾಗ ಅಥವಾ ನಿರ್ದಿಷ್ಟ ಮೊತ್ತದ ರೂಪದಲ್ಲಿ ನೀಡಲಾಗುತ್ತದೆ.

ಇಂತಹ ಭತ್ಯೆಗಳು ಪದೇ ಪದೇ ಹೆಚ್ಚಳವಾಗುವುದಿಲ್ಲ. ವ್ಯಕ್ತಿಯ ಜೀವನ ನಿರ್ವಹಣಾ ವೆಚ್ಚಕ್ಕೆ ಪೂರಕವಾಗಿ ತುಟ್ಟಿಭತ್ಯೆಯನ್ನು ಬೆಲೆ ಸೂಚ್ಯಂಕ ಆಧರಿಸಿ ಪ್ರತಿ ಆರು ತಿಂಗಳಿಗೊಮ್ಮೆ ಅಂದರೆ ಜನವರಿ ಮತ್ತು ಜುಲೈ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗುತ್ತದೆ. ಒಂದು ವೇಳೆ ತುಟ್ಟಿಭತ್ಯೆ ಇಲ್ಲದಿದ್ದಲ್ಲಿ ಮುಂದಿನ ವೇತನ ಪರಿಷ್ಕರಣೆಯವರೆಗೆ ಹತ್ತು ವರ್ಷಗಳ ಕಾಲ ವಾರ್ಷಿಕ ವೇತನ ಬಡ್ತಿ ಹೊರತಾಗಿ ಸಂಬಳ ಅಥವಾ ಪಿಂಚಣಿಯಲ್ಲಿ ಯಾವುದೇ ಹೆಚ್ಚಳವಾಗುವ ಸಾಧ್ಯತೆಯೇ ಇರುತ್ತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT