ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್ ಸಮ್ಮತಿ

Last Updated 12 ಜುಲೈ 2021, 16:59 IST
ಅಕ್ಷರ ಗಾತ್ರ

ಬೆಂಗಳೂರು: 2020–21ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಪರೀಕ್ಷೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ.

ಬೆಂಗಳೂರಿನ ಎಸ್.ವಿ. ಸಿಂಗ್ರೇಗೌಡ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನಾ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿತು. ‘ ಪರೀಕ್ಷೆ ನಡೆಸುವುದರಿಂದ ಕೋವಿಡ್‌ ಹರಡಲಿದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು’ ಎಂದೂ ಹೇಳಿತು.

ಜೂನ್ 21ರಂದು ರಾಜ್ಯ ಸರ್ಕಾರ ಹೊರಡಿಸಿರುವ ಪರಿಷ್ಕೃತ ವೇಳಾಪಟ್ಟಿ ಮತ್ತು ಮಾರ್ಗದರ್ಶಿ ಸೂತ್ರಗಳ(ಎಸ್‌ಒಪಿ) ಪ್ರಕಾರ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಜುಲೈ 19 ಮತ್ತು 22ರಂದು ನಡೆಯಲಿದೆ.

‘ಎಲ್ಲಾ ವಿದ್ಯಾರ್ಥಿಗಳಿಗೂ ಲಸಿಕೆ ನೀಡದ ಕಾರಣ ಪರೀಕ್ಷೆ ನಡೆಸುವುದು ಸುರಕ್ಷಿತವಲ್ಲ. ಪರೀಕ್ಷೆಗೆ ಹಾಜರಾಗುವ 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೋಂಕಿಗೆ ಬಲಿಯಾಗುವ ಸಾಧ್ಯತೆ ಇದೆ. 7ನೇ ತರಗತಿಯಿಂದ ಆರಂಭಿಸಿ ಹಿಂದಿನ ತರಗತಿಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಬಡ್ತಿ ನೀಡಬಹುದು’ ಎಂದು ಅರ್ಜಿದಾರರು ಹೇಳಿದ್ದರು. ‘ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಎರಡು ದಿನಗಳಲ್ಲಿ ಆರು ವಿಷಯಗಳನ್ನು ಬರೆಯಬೇಕಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕಠಿಣವಾಗಲಿದೆ’ ಎಂದು ಅರ್ಜಿದಾರರ ಪರ ವಕೀಲ ಆರ್‌.ಪಿ. ಸೋಮಶೇಖರಯ್ಯ ವಾದಿಸಿದರು.

ವಿದ್ಯಾರ್ಥಿಗಳು ಮತ್ತು ಪೋಷಕರ ಅಭಿಪ್ರಾಯಗಳನ್ನೂ ಒಳಗೊಂಡು ಸಾಮೂಹಿಕ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ವಿದ್ಯಾರ್ಥಿ ಸ್ನೇಹಿ ಮತ್ತು ವಸ್ತುನಿಷ್ಠ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷೆ ಒಳಗೊಂಡಿರುತ್ತವೆ. ತಜ್ಞರ ಜತೆ ಸಮಾಲೋಚನೆ ನಡೆಸಿದ ಬಳಿಕವೇ ನಿರ್ಧಾರ ಕೈಗೊಳ್ಳಲಾಗಿದೆ. ಒಬ್ಬ ವಿದ್ಯಾರ್ಥಿಗೆ ಒಂದು ಮೇಜು ನಿಗದಿ ಮಾಡಿ ಅಂತರ ಕಾಪಾಡಿಕೊಂಡು ಪರೀಕ್ಷೆ ಬರೆಸಲಾಗುವುದು. ಆರೋಗ್ಯ ತಪಾಸಣೆಗೆ ವೈದ್ಯಕೀಯ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗುವುದು. ಕಳೆದ ವರ್ಷವೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲಾಯಿತು ಮತ್ತು ಇದೇ ರೀತಿಯ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ ಎಂದು ಅಡ್ವೊಕೇಟ್ ಜನರಲ್ ಮಾಹಿತಿ ನೀಡಿದರು.‌

‘ಪರೀಕ್ಷೆ ಬರೆಯದೆ ‘ಪಾಸ್’ ಎಂದು ಬಡ್ತಿ ಪಡೆಯುವ ಬದಲು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವುದು ವಿದ್ಯಾರ್ಥಿಗಳ ದೃಷ್ಟಿಯಿಂದ ಒಳ್ಳೆಯದು’ ಎಂದು ಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT