ಶುಕ್ರವಾರ, ಫೆಬ್ರವರಿ 3, 2023
25 °C

ಸೇವಾ ಭದ್ರತೆಗೆ ಅತಿಥಿ ಉಪನ್ಯಾಸಕರ ಬೇಡಿಕೆ: ಪರಿಶೀಲನೆ ಭರವಸೆ ನೀಡಿದ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸೇವಾ ಭದ್ರತೆಯೊಂದಿಗೆ ವಾರ್ಷಿಕ ಶೇ 5ರಷ್ಟು ಗೌರವಧನ ಹೆಚ್ಚಿಸಬೇಕು, ನಿವೃತ್ತಿಯ ಸಂದರ್ಭದಲ್ಲಿ ₹ 25 ಲಕ್ಷ ಇಡುಗಂಟು, ಕಾಯಂ ಉಪನ್ಯಾಸಕರಿಗೆ ನೀಡುವಂತೆ ಒಒಡಿ ಹಾಗೂ ರಜೆ ಸೌಲಭ್ಯ ನೀಡಬೇಕೆಂಬ ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆಗಳ ಕುರಿತು ಪರಿಶೀಲಿಸಲಾಗುವುದು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಭರವಸೆ ನೀಡಿದ್ದಾರೆ.

ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾಗಿರುವ ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಅವರ ನೇತೃತ್ವದಲ್ಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅರುಣ್‌ ಶಿವಮೊಗ್ಗ ಮತ್ತಿತರ ಮನವಿ ಸ್ವೀಕರಿಸಿ ಸಚಿವರು ಪ್ರತಿಕ್ರಿಯಿಸಿದರು.

‘ರಾಜ್ಯದ ಉನ್ನತ ಶಿಕ್ಷಣ ವಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿರುವ 11 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಸೇವಾ ವಿಲೀನದ ಸೌಲಭ್ಯ ನೀಡುವ ಮೂಲಕ, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಬೇಕು. ಹಾಗೆಯೇ ಎನ್‌ಇಪಿ ಅನುಸಾರ 40ರಿಂದ 50 ವಿದ್ಯಾರ್ಥಿಗಳಂತೆ ಒಂದೊಂದು ತರಗತಿಗಳನ್ನು ವಿಭಾಗಿಸುವುದರಿಂದ ಅಲ್ಲಿ ನೇಮಕಾತಿಗೆ ಪರಿಗಣಿಸಬೇಕು’ ಎಂದು ಮನವಿಯಲ್ಲಿ ಸಮಿತಿ ಉಲ್ಲೇಖಿಸಿದೆ.

‘ನೇಮಕಾತಿಗಳಲ್ಲಿ ಮೀಸಲಾತಿ, ವಯೋಮಿತಿ ಸಡಿಲಿಕೆ, ವೇತನಸಹಿತ ಆರು ತಿಂಗಳ ಮಾತೃತ್ವ, ಪಿತೃತ್ವ ರಜೆ, ವಿಮೆ, ಇಎಸ್‌ಐ ಮತ್ತು ಇಪಿಎಫ್‌ ಸೌಲಭ್ಯಗಳನ್ನು ಒದಗಿಸಬೇಕು. ಹಾಗೆಯೇ, ಮೌಲ್ಯಮಾಪನಕ್ಕೆ ತೆರಳಿದ ದಿನಗಳ ಗೌರವಧನ ಕಡಿತ ಮಾಡಬಾರದು, ಪರಸ್ಪರ ಸ್ಥಳ ಬದಲಾವಣೆ, ಕಾರ್ಯಭಾರದ ಕೊರತೆ ಉಂಟಾದರೆ ಕರ್ತವ್ಯದಿಂದ ಬಿಡುಗಡೆಗೊಳಿಸದೆ ಕಾರ್ಯಭಾರವಿರುವ ಕಾಲೇಜುಗಳಿಗೆ ವರ್ಗಾವಣೆ ಮಾಡುವ ನೀತಿ ಜಾರಿಗೆ ತರಬೇಕು’ ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು