ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಜಾಬ್‌: ಟಿ.ಸಿ ಪಡೆದ ಶೇ 16 ವಿದ್ಯಾರ್ಥಿನಿಯರು

ಪದವಿ ಕಾಲೇಜುಗಳ ಎರಡು, ಮೂರು, ನಾಲ್ಕು ಮತ್ತು ಐದನೇ ಸೆಮಿಸ್ಟರ್‌
Last Updated 19 ಆಗಸ್ಟ್ 2022, 19:53 IST
ಅಕ್ಷರ ಗಾತ್ರ

ಮಂಗಳೂರು: ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವಂತಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯ ಕಳೆದ ಮೇ ತಿಂಗಳಿನಲ್ಲಿ ಸೂಚಿಸಿದ ಮೇಲೆ ವಿವಿ ಸಂಯೋಜಿತ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳ ಎರಡು, ಮೂರು, ನಾಲ್ಕು ಮತ್ತು ಐದನೇ ಸೆಮಿಸ್ಟರ್‌ನ ಶೇ 16ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದುಕೊಂಡು, ಕಾಲೇಜಿನಿಂದ ಹೊರಗೆ ಉಳಿದಿದ್ದಾರೆ.

ಮಾಹಿತಿ ಹಕ್ಕಿನ ಅಡಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. 2020–21, 2021–22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವೇಶ ಪಡೆದಿದ್ದ ಒಟ್ಟು 900 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 145ವಿದ್ಯಾರ್ಥಿನಿಯರು ತಮ್ಮ ಟಿಸಿ ಪಡೆದಿದ್ದಾರೆ. ವಿವಿ ವ್ಯಾಪ್ತಿಯಲ್ಲಿ ಬರುವ ಕೊಡಗಿನ ಸರ್ಕಾರಿ, ಅನುದಾನಿತ 10 ಕಾಲೇಜುಗಳಲ್ಲಿ ಓದುತ್ತಿರುವ 113 ಮುಸ್ಲಿಂ ವಿದ್ಯಾರ್ಥಿನಿಯರು ಇದೇ ಕಾಲೇಜುಗಳಲ್ಲಿ ಶಿಕ್ಷಣ ಮುಂದುವರಿಸಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 39 ಸರ್ಕಾರಿ ಕಾಲೇಜುಗಳು, 36 ಅನುದಾನಿತ ಕಾಲೇಜುಗಳು ಇವೆ. ಕಾಲೇಜು ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದವರಲ್ಲಿ ಸರ್ಕಾರಿ ಕಾಲೇಜಿನವರು ಶೇ 34ರಷ್ಟಿದ್ದರೆ, ಅನುದಾನಿತ ಕಾಲೇಜಿನ ಶೇ 8ರಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಇದ್ದಾರೆ. ಮಂಗಳೂರಿನ ಕಾರ್‌ಸ್ಟ್ರೀಟ್‌ನಲ್ಲಿರುವ ಡಾ.ಪಿ. ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 51 ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ 35 ವಿದ್ಯಾರ್ಥಿಗಳು ತಮ್ಮ ಟಿಸಿಗಳನ್ನು ಪಡೆದುಕೊಂಡು ಹೋಗಿದ್ದಾರೆ.

ಹಳೇಅಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ, ಮೂರು ಮತ್ತು ನಾಲ್ಕನೇ ಸೆಮಿಸ್ಟರ್‌ನಲ್ಲಿ ತರಗತಿಗೆ ಹಾಜರಾಗಿದ್ದ 20 ವಿದ್ಯಾರ್ಥಿನಿಯರು ಎರಡು, ನಾಲ್ಕು ಮತ್ತು ಆರನೇ ಸೆಮಿಸ್ಟರ್‌ನಲ್ಲಿರುವಾಗಲೇ ಕಾಲೇಜಿಗೆ ಬರುವುದನ್ನು ಬಿಟ್ಟಿದ್ದಾರೆ. ‘ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ,ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಮತ್ತು ಟಿಸಿಯನ್ನು ಸಹ ಪಡೆದಿಲ್ಲ’ ಎಂದು ಪ್ರಾಂಶುಪಾಲ ಶ್ರೀಧರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲೆ ಅಜ್ಜರಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂಬತ್ತು ಮುಸ್ಲಿಂ ವಿದ್ಯಾರ್ಥಿನಿಯರು ಟಿಸಿ ಪಡೆದಿದ್ದಾರೆ.

‘ನಾನು ಬೇರೆ ಕಾಲೇಜಿಗೆ ಪ್ರವೇಶ ಪಡೆಯುವ ನಿರೀಕ್ಷೆಯಲ್ಲಿದ್ದೇನೆ’ ಎಂದು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ ವಿದ್ಯಾರ್ಥಿನಿ ಹಿಬಾ ಶೇಖ್ ತಿಳಿಸಿದ್ದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಪ್ರತಿಕ್ರಿಯಿಸಿ, ‘ಮುಸ್ಲಿಂ ವಿದ್ಯಾರ್ಥಿನಿಯರು ಸಂಯೋಜಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಸಹಾಯ ಮಾಡುವಂತೆ ವಿನಂತಿಸಿದ್ದರು. ಈ ಸಮಸ್ಯೆ ಪರಿಹರಿಸಲು ಸಾಧ್ಯವಾಗದ ಕಾರಣ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನು ಸಂಪರ್ಕಿಸಲು ಅವರಿಗೆ ತಿಳಿಸಿದ್ದೆ. ಧರ್ಮಕ್ಕಿಂತ ಶಿಕ್ಷಣ ಮುಖ್ಯ ಎಂಬುದನ್ನು ಕೂಡ ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT