ಸೋಮವಾರ, ಅಕ್ಟೋಬರ್ 25, 2021
25 °C

ಮಹಿಳಾ ಪೊಲೀಸರ ಸಂಖ್ಯೆ ಶೇ 25ಕ್ಕೆ ಹೆಚ್ಚಿಸಲು ಕ್ರಮ: ಸಚಿವ ಆರಗ ಜ್ಞಾನೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಿಗೆ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಮಂಗಳವಾರ ತಿಳಿಸಿದರು.

ಪೊಲೀಸ್ ತರಬೇತಿ ಶಾಲೆ ಜ್ಯೋತಿ ನಗರ ಇಲ್ಲಿ 6ನೇ ತಂಡದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

‘ಮಹಿಳೆ ಅಬಲೆ ಅಂತ ಹೇಳಿದರು, ಯಾಕಾಗಿ ಹೇಳಿದರು ಅಂತ ಈ ಪರೇಡ್ ಸಂದರ್ಭದಲ್ಲಿ ಪ್ರಶ್ನಾರ್ಥಕ ಚಿಹ್ನೆ ನನ್ನಲ್ಲಿ ಮೂಡಿತು. ನಾನು ಅಬಲೆಯಲ್ಲ, ಸಬಲೆ ನನ್ನನ್ನು ನಾನು ರಕ್ಷಣೆ ಮಾಡಿಕೊಂಡು ಸಮಾಜವನ್ನು, ಸಮುದಾಯವನ್ನು ರಕ್ಷಣೆ ಮಾಡುವ ಯೋಗ್ಯತೆ ಪಡೆದಿದ್ದೇನೆಂದು ಎದೆ ತಟ್ಟಿ ಹೇಳುವ ವಾತಾವರಣ ಈ ಪರೇಡ್ ಮೈದಾನದಲ್ಲಿ ಕಂಡು ಬಂತು’ ಎಂದು ಅವರು ಹೇಳಿದರು.

ಓದಿ: 

‘ವೈರಿ ರಾಷ್ಟ್ರಗಳಿಂದ ಬರುವ ಶತ್ರುಗಳನ್ನು ದಮನ ಮಾಡಲು ನಮ್ಮ ಸೇನಾ ಪಡೆ ಸನ್ನದ್ಧವಾಗಿದೆ. ಆದರೆ ವಿವಿಧ ಧರ್ಮ, ಮತ, ಪಂಥ ಭಾಷೆ ಇವೆಲ್ಲವೂ ಇರುವ ದೇಶದ ಆಂತರಿಕ ರಕ್ಷಣೆಯನ್ನು ಪೊಲೀಸರು ಮಾಡಬೇಕು. ಪೊಲೀಸರು ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ನಾಗರಿಕರ ಮಾನ, ಪ್ರಾಣ, ಸ್ವತ್ತು ಕಾಪಾಡುವ ಬಹಳ ದೊಡ್ಡ ಹೊಣೆಗಾರಿಕೆ ನಿರ್ವಹಿಸುತ್ತಿದ್ದಾರೆ’ ಎಂದು ಸಚಿವರು ಶ್ಲಾಘಿಸಿದರು.

‘ಪೊಲೀಸರು ಅಂದ ತಕ್ಷಣ ಪುರುಷರು ಅನ್ನುವ ಪರಿಕಲ್ಪನೆ ನಿರ್ಮಾಣವಾಗುತ್ತಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮಹಿಳಾ ಸಿಬ್ಬಂದಿಯನ್ನು ಪೊಲೀಸ್ ಪಡೆಯಲ್ಲಿ ನೇಮಕ ಮಾಡಿಕೊಳ್ಳುವ ಪಾಲಿಸಿ ತಂದಿದೆ. ಶೇ 25 ಪಾಲು ಮಹಿಳೆಯರು ಪೊಲೀಸ್ ಪಡೆಯಲ್ಲಿ ಇರಬೇಕು. ರಾಜ್ಯದಲ್ಲಿ ಶೇ 10ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದಾರೆ. ಕ್ರಮೇಣ ಇದನ್ನು ಶೇ 25ಕ್ಕೆ ಹೆಚ್ಚಿಸುವ ಕೆಲಸ ನಡೆಯುತ್ತಿದೆ’ ಎಂದರು.

ಓದಿ: 

ಜನರ ಮನಸ್ಸಿನಲ್ಲಿ ಪೊಲೀಸ್ ಎಂದರೆ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಭಯ ಇರಬೇಕೇ ಹೊರತು ಸಾಮಾನ್ಯರಿಗಲ್ಲ. ಠಾಣೆಗೆ ಬಂದ ಸಾಮಾನ್ಯ ಜನರನ್ನು ಗೌರವಿಸಬೇಕು. ಸಾಮಾನ್ಯ ನಾಗರಿಕ ಸ್ನೇಹಿಯಾಗಿ ನಡೆದುಕೊಳ್ಳಬೇಕು. ಸಾಮಾನ್ಯರಿಂದ ಇಂತಹ ಅಪೇಕ್ಷೆ ಇದೆ ಎಂದು ಸಚಿವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು