ಶುಕ್ರವಾರ, ಏಪ್ರಿಲ್ 16, 2021
31 °C
‘ಮೇಕ್ ಇನ್ ಇಂಡಿಯಾ’ದ ಲಾಂಛನ ಉದ್ಘಾಟನೆ

‘ಕರ್ನಾಟಕ ಹೂಡಿಕೆಗೆ ನೆಚ್ಚಿ‌ನ ತಾಣವಾಗಿದೆ': ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೈಗಾರಿಕೆ ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆ ಆಕರ್ಷಿಸುವ ಉದ್ದೇಶದಿಂದ ನಗರದ ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ‘ಮೇಕ್ ಇನ್ ಇಂಡಿಯಾ’ದ ಲಾಂಛನವಾದ ಸಿಂಹದ ಕಲಾಕೃತಿಯನ್ನು  ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಶನಿವಾರ ಲೋಕಾರ್ಪಣೆ ಮಾಡಿದರು. ನೀರಿನ ಚಿಲುಮೆ, ವಿದ್ಯುತ್ ದೀಪಗಳ ಮೂಲಕ ನಗರಕ್ಕೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶವೂ ಇದಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಕರ್ನಾಟಕ ಹೂಡಿಕೆಗೆ ನೆಚ್ಚಿ‌ನ ತಾಣವಾಗಿದೆ. ಸಮೀಕ್ಷೆ ಪ್ರಕಾರ, ವಿಶ್ವದಲ್ಲೇ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ನೆಲೆ ಎಂದು ಖ್ಯಾತಿ ಪಡೆದಿದೆ’ ಎಂದರು.

‘ಪ್ರಧಾನಿ ಮೋದಿಯವರ ‘ಮೇಕ್‌ ಇನ್ ಇಂಡಿಯಾ’ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಈ ಲಾಂಛನವನ್ನು ಉದ್ಘಾಟಿಸಿರುವುದು ಸಂತೋಷಕರ ವಿಷಯ. ನಗರ ಹೂಡಿಕೆ ‌ಸ್ನೇಹಿಯಾಗಿದೆ. ಜಿಡಿಪಿ ಶೇ 20ಕ್ಕೆ ಹೆಚ್ಚಿಸಲು ಕ್ರಮ ವಹಿಸಿದ್ದು, ಇದರ ಬಹುಪಾಲು ಕೊಡುಗೆ ಬೆಂಗಳೂರಿನದ್ದೇ ಆಗಿದೆ’ ಎಂದರು.


ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದ ಮೇಕ್ ಇನ್ ಇಂಡಿಯಾದ ಲಾಂಛನ (ಚಿತ್ರ; ಬಿಬಿಎಂಪಿ)

‘ಬೆಂಗಳೂರು ನಗರ ಹಲವು ಕ್ಷೇತ್ರಗಳ ಕಂಪನಿಗಳ ನೆಲೆಯಾಗಿದೆ. ನಗರವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಸುಗಮ ಸಂಚಾರ ಸೌಲಭ್ಯ, ಸಾರ್ವಜನಿಕ ಸಂಚಾರ ಬಳಕೆಗೆ ಒತ್ತು ಹಾಗೂ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲಾಗುವುದು. ಬೆಂಗಳೂರನ್ನು ವಿಶ್ವಮಾನ್ಯ ನಗರ ಮಾಡುವುದಕ್ಕೆ ಒತ್ತು ನೀಡಲಾಗುವುದು. ಅದಕ್ಕಾಗಿ ಮಿಷನ್– 2022 ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ತಮ್ಮ ಜನ್ಮದಿನದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ‘ರಾಷ್ಟ್ರಪತಿ, ಪ್ರಧಾನಿ ಮೋದಿ, ದೇವೇಗೌಡರು ಕರೆ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದರು. ಅಲ್ಲದೆ, ಇತರ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಎಲ್ಲರ ಅಪೇಕ್ಷೆಯಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇನೆ. ಇದೇ 8ರಂದು ಉತ್ತಮ ಬಜೆಟ್ ಮಂಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್‌. ಅಶೋಕ, ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು