ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷತ್‌ ‘ಸಂಘರ್ಷ’ದ ಬೆನ್ನಲ್ಲೇ ವಾಕ್ಸಮರ

ಗೂಂಡಾಗಿರಿಗೆ ಜೆಡಿಎಸ್‌ ಕೂಡ ಕಾರಣ–ಸಿದ್ದರಾಮಯ್ಯ * ಪ್ರಜಾತಂತ್ರಕ್ಕೆ ಕಪ್ಪು ಚುಕ್ಕೆ– ಲಕ್ಷ್ಮಣ ಸವದಿ
Last Updated 15 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಬೆಂಗಳೂರು: ಮೇಲ್ಮನೆಯಲ್ಲಿ ಸಭಾಪತಿ ಮೇಲಿನ ‘ಅವಿಶ್ವಾಸ’ ನಿರ್ಣಯಕ್ಕಾಗಿ ಮಂಗಳವಾರ ಬೆಳಿಗ್ಗೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ‘ಸಂಘರ್ಷ’ ನಡೆದ ಬೆನ್ನಲ್ಲೇ, ಎರಡೂ ಪಕ್ಷಗಳ ಸದಸ್ಯರ ವಾಕ್ಸಮರ ತಾರಕ್ಕೇರಿದೆ.

ಎರಡೂ ಪಕ್ಷಗಳ ನಾಯಕರು ಈ ಘಟನೆಯನ್ನು ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಪರಿಷತ್‌ನಲ್ಲಿ ನಡೆದಿರುವುದು ಪ್ರಜಾಪ್ರಭುತ್ವನಾ ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ? ಇದು ಅಸಂವಿಧಾನಿಕ, ಕಾನೂನಿಗೆ ವಿರುದ್ಧವಾದದ್ದು’ ಎಂದಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ರಾಜ್ಯದ ಇತಿಹಾಸದಲ್ಲೇ ಇಂಥ ಗೂಂಡಾಗಿರಿ ನೋಡಿಲ್ಲ. ಬಾಗಿಲು ಹಾಕಿ ಸಭಾಪತಿ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ. ಸಭಾಪತಿ ಇದ್ದಾಗ ಉಪ ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳುವಂತಿಲ್ಲ. ಸದನದ ಗೂಂಡಾಗಿರಿಗೆ ಜೆಡಿಎಸ್ ಕೂಡ ಕಾರಣ’ ಎಂದು ಗುಡುಗಿದರು.

ವಿಧಾನ ಪರಿಷತ್‌ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಕೈಮುಗಿದರು.

‘ಸಭಾಪತಿ ಸೂಚಿಸಿದ ನಂತರ ಉಪ ಸಭಾಪತಿ ಪೀಠದಲ್ಲಿ ಕುಳಿತುಕೊಳ್ಳಬೇಕು. ಯಾರೋ ಹೇಳಿದರು ಎಂದ ಮಾತ್ರಕ್ಕೆ ಸಭಾಪತಿ ಸ್ಥಾನದಲ್ಲಿ ಕುಳಿತು ಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು. ಇದೀಗ ಕಾಂಗ್ರೆಸ್ ವಿರುದ್ಧವೇ ಬಿಜೆಪಿ ನಾಯಕರು ರಾಜ್ಯಪಾಲರ ಬಳಿ ದೂರು ನೀಡಿದ್ದಾರೆ. ರಾಜಭವನ ಬಿಜೆಪಿ ಪಕ್ಷದ ಕಚೇರಿಯಾಗಿದೆ’ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.

‘ರಾಜ್ಯಪಾಲರು ಸೂಚನೆ ಕೊಟ್ಟರೆ ಅವಿಶ್ವಾಸ ನಿರ್ಣಯವನ್ನು ಎದುರಿಸಲು ನಾವು ತಯಾರಾಗಿದ್ದೇವೆ. ಎಲ್ಲಿಯ ತನಕ ಸಭಾಪತಿ ಇರುತ್ತಾರೊ ಅಲ್ಲಿಯವರೆಗೆ ಅವರೇ ‘ಸುಪ್ರೀಂ’ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿ ಕೊಳ್ಳಬೇಕು’ ಎಂದೂ ಹೇಳಿದ್ದಾರೆ.

ರಾಜ್ಯಪಾಲರ ಭೇಟಿಯ ಬಳಿಕ ಮಾತನಾಡಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಕುರ್ಚಿ ಬಿಡಬಾರದು ಎಂದೇ ಕಾಂಗ್ರೆಸ್ ಈ ರೀತಿ ಮಾಡಿದೆ. ಸಭಾಪತಿ ಮೇಲಿನ ಅವಿಶ್ವಾಸ ನಿರ್ಣಯ ವಿಷಯದಲ್ಲಿ ನಾವು (ಜೆಡಿಎಸ್‌) ಬಿಜೆಪಿಗೆ ಬೆಂಬಲ ನೀಡಿದ್ದೇವೆ’ ಎಂದರು. ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಅವಿಶ್ವಾಸ ಮಂಡನೆಗೆ ಅವಕಾಶ ಕೊಡುತ್ತಾರೆ ಎಂದು ಅಂದುಕೊಂಡಿದ್ದೆವು. ಅವಿಶ್ವಾಸ ಚರ್ಚೆ ಮಾಡಿದರೆ ಸಭಾಪತಿ ಸ್ಥಾನ ಹೋಗುತ್ತದೆ ಎಂದು ಇಂಥ ವರ್ತನೆ ತೋರಿದ್ದಾರೆ. ರಾಜ್ಯಪಾಲರು ಕಾ‌ನೂನಾ ತ್ಮಕ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊ ಳ್ಳುವ ಭರವಸೆ ನೀಡಿದ್ದಾರೆ’ ಎಂದರು.

‘ಪರಿಷತ್‌ನಲ್ಲಿ ವಿರೋಧ ಪಕ್ಷ ವರ್ತಿಸಿದ ರೀತಿ ಇಡೀ ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಹಾಳು ಮಾಡುವ ರೀತಿಯಲ್ಲಿದೆ. ಕಾಂಗ್ರೆಸ್‌ ಕಲರ್ (ಬಣ್ಣ) ಏನೆಂಬುದು ಜಗಜ್ಜಾಹೀರಾಗಿದೆ. ಇದು ಅತ್ಯಂತ ಹೇಯ ಹಾಗೂ ನಾಚಿಕೆಗೇಡಿನ ಸಂಗತಿ’ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದ್ದಾರೆ.

ಇನ್ನೊಬ್ಬ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ‘ಸಭಾಪತಿಯವರ ಪೀಠಕ್ಕೆ ನುಗ್ಗಿ, ಉಪ ಸಭಾಪತಿಯವರ ಮೇಲೆ ಹಲ್ಲೆ ನಡೆಸಿ ದಾಂದಲೆ ಎಬ್ಬಿಸಿ ರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೇ ದೊಡ್ಡ ಕಪ್ಪು ಚುಕ್ಕೆ. ಅಧಿಕಾರದ ಹಪಾ ಹಪಿಯಿಂದ ಹತಾಶರಾಗಿ ಕಾಂಗ್ರೆಸ್‌ ಈ ರೀತಿ ದುಂಡಾವರ್ತನೆ ನಡೆಸಿರುವುದು ಅಕ್ಷಮ್ಯ’ ಎಂದು ಪ್ರತಿಕ್ರಿಯಿಸಿದ್ದಾರೆ.

'ಚಿಂತಕರ ಚಾವಡಿ ಎಂದು ಕರೆಸಿ ಕೊಳ್ಳುವ ಮೇಲ್ಮನೆಯಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರವಾಗಿದ್ದು, ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಕಾಂಗ್ರೆಸ್ ನಾಯಕರ ನೈಜ ಬಣ್ಣ ಬಯಲಾಗಿದೆ' ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪ್ರವೇಶಿಸುವ ದ್ವಾರದ ಬಾಗಿಲನ್ನು ಆಡಳಿತ ಪಕ್ಷದ ಸದಸ್ಯರು ಮುಚ್ಚಿದ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರ ವಾಗ್ವಾದ ನಡೆಸಿದರು. ಈ ಸಮಯದಲ್ಲಿ ಬಿಜೆಪಿಯ ರವಿಕುಮಾರ್ ಹಾಗೂ ಕಾಂಗ್ರೆಸ್‌ನ ಹರೀಶ್‌ ಕುಮಾರ್ ನಡುವೆ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತು –ಪ್ರಜಾವಾಣಿ ಚಿತ್ರಗಳು ಕೃಷ್ಣಕುಮಾರ್ ಪಿ.ಎಸ್.

ಹೈರಾಣಾದ ಮಾರ್ಷಲ್‌ಗಳು!
ಬೆಂಗಳೂರು:
ವಿಧಾನಪರಿಷತ್ತಿನಲ್ಲಿ ಬಿಜೆಪಿ–ಕಾಂಗ್ರೆಸ್‌ ಸದಸ್ಯರ ಗದ್ದಲವನ್ನು ನಿಭಾಯಿಸುವಲ್ಲಿ ಮಾರ್ಷಲ್‌ಗಳು ಹೈರಾಣಾಗಿ ಹೋದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಸಭಾಪತಿಯವರ ಪೀಠಕ್ಕೆ ಮುತ್ತಿಗೆ ಹಾಕಿ ಉಪಸಭಾಪತಿಯವರನ್ನು ಎಳೆದಾಡಿ, ಕೆಳಗೆ ದೂಡುವಾಗ ಅವರನ್ನು ರಕ್ಷಿಸಲು ಮಾರ್ಷಲ್‌ಗಳ ಕೈಯಲ್ಲಿ ಸಾಧ್ಯವಾಗಲಿಲ್ಲ. ಒಂದಷ್ಟು ಸಮಯ ಮೂಕಪ್ರೇಕ್ಷಕರಾಗಿಯೇ ನೋಡುತ್ತಾ ನಿಂತಿದ್ದರು.

ಬಿಜೆಪಿ ಸದಸ್ಯರು ಸಭಾಪತಿ ಕೊಠಡಿಗೆ ಹೋಗುವ ದ್ವಾರವನ್ನು ಮುಚ್ಚುವ ಸಂದರ್ಭದಲ್ಲೂ ಅದನ್ನು ತಡೆಯಲಿಲ್ಲ. ಸದಸ್ಯರು ಪರಸ್ಪರ ಕೈ– ಕೈ ಮಿಲಾಯಿಸುವಾಗಲೂ ಬಿಡಿಸಲು ಹೋಗಲಿಲ್ಲ. ಸಭಾಪತಿ ಪೀಠದ ಮುಂದಿನ ಗಾಜಿನ ತಡೆ, ಮೈಕ್ರೊಫೋನ್‌ ಕೀಳುವಾಗಲೂ ತಡೆಯಲಿಲ್ಲ.

ಕೋವಿಡ್‌ ಮರೆತ ಸದಸ್ಯರು: ಕೋವಿಡ್‌ ಕಾರಣಕ್ಕೆ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಆರೋಗ್ಯ ಇಲಾಖೆಯ ಸೂಚನೆಯನ್ನು ಎಲ್ಲ ಸದಸ್ಯರೂ ಮರೆತಿದ್ದರು. ಒತ್ತೊತ್ತಾಗಿ ನಿಂತು ತಳ್ಳಾಡಿದರು. ಕೊರೊನಾ ಬಗ್ಗೆ ಭಯವೇ ಇಲ್ಲದಂತೆ ವರ್ತಿಸಿದರು.

ಅಧಿಕಾರ ಕೊಟ್ಟಿದ್ದು ಯಾರು-ಡಿಕೆಶಿ ಪ್ರಶ್ನೆ
ಬೆಂಗಳೂರು:
‘ಸಂವಿಧಾನ ಬಾಹಿರವಾಗಿ ಸಭಾಪತಿಗೆ ನಿರ್ಬಂಧ ಹೇರಿದ್ದು ಯಾಕೆ. ಈ ಅಧಿಕಾರವನ್ನು ಬಿಜೆಪಿಯವರಿಗೆ ಕೊಟ್ಟಿದ್ದು ಯಾರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಂಗಳವಾರ ಮಾತನಾಡಿದ ಅವರು, ‘ಸಭಾಪತಿ ಬಂದು, ಗಂಟೆ ನಿಲ್ಲುವುದಕ್ಕೂ ಮುನ್ನ ಉಪಸಭಾಪತಿ ಹಠಾತ್ತನೆ ಬಂದು ಬಾಗಿಲು ಮುಚ್ಚಿ ಪೀಠದ ಬಳಿ ಬಂದು ಸಭಾಪತಿಯವರ ಪ್ರವೇಶಕ್ಕೆ ನಿರ್ಬಂಧ ಹಾಕಿದ್ದಾರೆ. ಇದು ವಿಧಾನ ಪರಿಷತ್‌ಗೆ ಆದ ದೊಡ್ಡ ಅಪಮಾನ’ ಎಂದಿದ್ದಾರೆ.

‘ಬಿಜೆಪಿ-ಜೆಡಿಎಸ್ ನಾಯಕರು ಸಭಾಪತಿಯವರ ಪದಚ್ಯುತಿಗೆ ತೀರ್ಮಾ ನಿಸಿದ್ದಾರೆ. ಅದು ಅವರ ನಿರ್ಧಾರ. ಅದು ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು’ ಎಂದೂ ಹೇಳಿದರು.

*
ಪರಿಷತ್‌ನಲ್ಲಿ ಸಭಾಪತಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಜೆಡಿಎಸ್‌ ಬೆಂಬಲ ಪಡೆದು ನಾವು (ಬಿಜೆಪಿ) ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ. ಮುಂದಿನ ನಡೆಯ ಬಗ್ಗೆ ರಾಜ್ಯಪಾಲರು ಸ್ವತಃ ತೀರ್ಮಾನ ತೆಗೆದುಕೊಳ್ಳುತ್ತಾರೆ.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ

*
ಅವಿಶ್ವಾಸ ನಿರ್ಣಯದ ಪರ ಮತ ಹಾಕಿಸುವುದು ಪ್ರಜಾಪ್ರಭುತ್ವ. ಅವಿಶ್ವಾಸವೇ ನಡೆಯಬಾರದು ಅಂದರೆ ಪ್ರಜಾಪ್ರಭುತ್ವ ಎಲ್ಲಿ ಉಳಿಯುತ್ತದೆ. ಬಲ ಸಾಬೀತುಪಡಿಸುವುದಕ್ಕೆ ಆಗದೆ ಕಾಂಗ್ರೆಸ್‌ನವರು ಪಲಾಯನ ಮಾಡಿದ್ದಾರೆ.
-ಆರ್. ಅಶೋಕ, ಕಂದಾಯ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT