ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯಗೆ ತಾಕತ್ತು ಇದ್ದರೆ ಡಿಕೆಶಿ ವಿರುದ್ಧ ಸೆಟೆದು ನಿಲ್ಲಲಿ: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಈಗಲೇ ಡಿ.ಕೆ.ಶಿವಕುಮಾರ್‌ ವಿರುದ್ಧ ಸೆಟೆದು ನಿಲ್ಲಲಿ ಎಂದು ಬಿಜೆಪಿ ಸವಾಲು ಹಾಕಿದೆ.

ಕಾಂಗ್ರೆಸ್‌ ನಾಯಕತ್ವ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ತಾನೇ ಮುಂದಿನ ಸಿಎಂ ಎಂದು ಬಿಂಬಿಸಿಕೊಳ್ಳಲು ತನ್ನದೇ ಪಟಾಲಂ ಜೊತೆಗೂಡಿ ವ್ಯಕ್ತಿ ಪೂಜೋತ್ಸವ ಮಾಡಿದರೆ ಅದನ್ನು ಶಕ್ತಿ ಪ್ರದರ್ಶನ ಎನ್ನುವುದಿಲ್ಲ. ಅದು ಉತ್ತರಕುಮಾರನ ಪೌರುಷ ಅಷ್ಟೇ. ತಾಕತ್ತು ಇದ್ದರೆ ಈಗಲೇ ಡಿಕೆಶಿ ವಿರುದ್ಧ ಸೆಟೆದು ನಿಲ್ಲಿ, ರಾಜಕೀಯ ಸಂದಿಗ್ಧತೆ ತಂದಿಡುವುದು ಸಾಮರ್ಥ್ಯವೇ’ ಎಂದು ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಅವರು ತಳಹದಿಯಿಲ್ಲದೆ ಮಹಡಿ ಮನೆ ಕಟ್ಟಲು ಹೊರಟಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರಿಗೆ ಮುಂದಿನ ಚುನಾವಣೆಗೆ ಸ್ಪರ್ಧಿಸಲು ಕ್ಷೇತ್ರ ಸಿಗಲಾರದ ಪರಿಸ್ಥಿತಿ ಯಾವ ನಾಯಕರಿಗೂ ಬರಬಾರದು. ಸಿದ್ದರಾಮಯ್ಯನವರೇ, ಇದಕ್ಕಾಗಿ ನಿಮ್ಮ ಬಗ್ಗೆ ನಮಗೆ ಅನುಕಂಪವಿದೆ!’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

‘ಆ ಭಾಗ್ಯ, ಈ ಭಾಗ್ಯ ಎಂದು ಘೋಷಣೆ ಮಾಡಿದ್ದೇ ಬಂತು, ಜನಪ್ರಿಯತೆ, ಪ್ರಚಾರಕ್ಕಾಗಿ ಮಾಡಿದ ಯಾವ ಕಾರ್ಯವೂ ಈಗ ಸಿದ್ದರಾಮಯ್ಯ ಅವರ ಸಹಾಯಕ್ಕೆ ಬರುತ್ತಿಲ್ಲ. ಹಲವು ಬಿಟ್ಟಿ ಭಾಗ್ಯ ನೀಡಿದ ಅವರಿಗೆ ಈಗ ಕ್ಷೇತ್ರ ಭಾಗ್ಯದ ಫಲಾನುಭವಿಯಾಗಲು ಸಾಧ್ಯವಾಗುತ್ತಿಲ್ಲ. ಇದಕ್ಕಿಂತ ನಾಚಿಗಗೇಡಿನ ಸಂಗತಿ ಮತ್ತೊಂದಿದೆಯೇ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ಸಿದ್ದರಾಮೋತ್ಸವದ ಬಳಿಕ ಕಾಂಗ್ರೆಸ್ ಮತ್ತಷ್ಟು ಖಾಲಿಯಾಗಲಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಸಿದ್ದರಾಮಯ್ಯ ನಾಂದಿ ಹಾಡುತ್ತಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಎಂದು ಸಿದ್ದರಾಮಯ್ಯ ಹೆಸರು ಘೋಷಿಸದೇ ಇದ್ದಲ್ಲಿ, ಆರು ಪಕ್ಷ ಬಿಟ್ಟು ಬಂದಿರುವ ಸಿದ್ದರಾಮಯ್ಯಗೆ ಏಳನೇ ಬಾರಿ ಪಕ್ಷಾಂತರ ಮಾಡುವುದು ಕಷ್ಟವೇ’ ಎಂದು ಬಿಜೆಪಿ ಟೀಕಿಸಿದೆ.

ಸಿದ್ದರಾಮಯ್ಯ ಅವರೇ, ಆ ಧರ್ಮರಾಯನ ಹಿಂದೆಯೇ ಯಾರೂ ಬರಲಿಲ್ಲ, ನಿಮ್ಮಂತಹ ಅಧರ್ಮರಾಯನ ಹಿಂದೆ ಯಾರು ತಾನೇ ನಿಲ್ಲಬಲ್ಲರು. ನಿಮ್ಮ ಉತ್ಸವ ನಾಲ್ಕು ಕುರ್ಚಿಗಳನ್ನು ತುಂಬಬಹುದೇ ಹೊರತು, ನಾಲ್ಕು ಸೀಟುಗಳನ್ನು ಗಳಿಸಿ ಕೊಡದು. ಮೂಲ ಕಾಂಗ್ರೆಸ್ಸಿಗರು ನಿಮ್ಮಿಂದಾಗಿಯೇ ಪಕ್ಷ ತೊರೆಯುತ್ತಿರುವುದು ನಿಜವಲ್ಲವೇ’ ಎಂದು ಬಿಜೆಪಿ ಗುಡುಗಿದೆ.

ಹಿಂದೂ ವಿರೋಧಿ ಧೋರಣೆಯಿಂದಲೇ ಸಿದ್ದರಾಮಯ್ಯ‌ ಅವರಿಗೆ ರಾಜಕೀಯ ಹಿನ್ನಡೆಯಾಗುತ್ತಿದೆ. ಚಾಮುಂಡೇಶ್ವರಿಯಲ್ಲಿ ದೇವಿ ಕೈಹಿಡಿಯಲಿಲ್ಲ. ಬದಾಮಿಯಲ್ಲೂ ಬನಶಂಕರಿಯ ಶಾಪ, ಸವದತ್ತಿ ಎಲ್ಲಮ್ಮನೂ ನಿಮ್ಮನ್ನು ಕಾಪಾಡಲಾರಳು, ಸಿದ್ದರಾಮಯ್ಯರ ಪಾಪದ ಕೊಡ ತುಂಬಿದೆ! #ಸಿದ್ದುಹಾಸ್ಯೋತ್ಸವ ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಬಿಜೆಪಿ ಲೇವಡಿ ಮಾಡಿದೆ.

ಸಿದ್ದರಾಮಯ್ಯ ಅವರೇ ನಿಮ್ಮ ಸರ್ಕಾರ ಮೂರು ವರ್ಷ ಪೂರೈಸಿದಾಗ "ವರ್ಷ ಮೂರು, ಸಾಧನೆ ನೂರಾರು" ಎಂದು ಪುಸ್ತಕ ಬರೆಸಿಕೊಂಡಿದ್ದು ಯಾವ ಸಾಧನೆಗಾಗಿ? ಹಿಂದು ಕಾರ್ಯಕರ್ತರ‌ ಕೊಲೆ ಹಾಗೂ ರೈತರ ಆತ್ಮಹತ್ಯೆ ಬಿಟ್ಟರೆ ನಿಮ್ಮ ಸರ್ಕಾರದ ಸಾಧನೆ ಏನಿತ್ತು? ಸರಣಿ ಸಾವಿಗೆ ಕಾರಣವಾಗಿದ್ದು ನಿಮ್ಮ ಸಾಧನೆಯೇ ಎಂದು ಬಿಜೆಪಿ ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT