ಶುಕ್ರವಾರ, ಮೇ 20, 2022
25 °C

ಡಿ.ಕೆ.ಶಿವಕುಮಾರ್ ‘ಏಕಾಂಗಿ’ ಸಭೆ: ಸಿದ್ದರಾಮಯ್ಯ ಆಪ್ತರ ಅಸಮಾಧಾನ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಕೆದಾಟು ಯೋಜನೆ ತ್ವರಿತಗೊಳಿಸಲು ಆಗ್ರಹಿಸಿ ಜ. 9ರಿಂದ 10 ದಿನ ಹಮ್ಮಿಕೊಳ್ಳಲಿರುವ ಪಾದಯಾತ್ರೆಯ ಭಾಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲಾಮಟ್ಟದಲ್ಲಿ ಪಕ್ಷದ ಸ್ಥಳೀಯ ನಾಯಕರ ಜೊತೆ ಏಕಾಂಗಿಯಾಗಿ ಪೂರ್ವಭಾವಿ ಸಭೆ ನಡೆಸುತ್ತಿರುವುದು ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಡಿ.ಕೆ.ಶಿವಕುಮಾರ್‌ ಅವರ ನಡೆ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಕೆಲವರು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ ದೂರು ನೀಡಿದ್ದಾರೆ. ಎಲ್ಲ ನಾಯಕರನ್ನು ಜೊತೆಯಾಗಿ ಕರೆದೊಯ್ಯುವಂತೆ ಸೂಚಿಸಬೇಕು ಎಂದು ಸಲಹೆ ನೀಡಿದ್ದಾರೆ’ ಎಂದು ಹೇಳಲಾಗಿದೆ.

ಬೆಳಗಾವಿಯಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸದೆ ಪಕ್ಷದ ನಾಯಕರ ಜೊತೆ ಸಭೆ ನಡೆಸಲು ಶಿವಕುಮಾರ್‌ ತೆರಳಿರುವುದಕ್ಕೂ ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿವೇಶನದ ಮಧ್ಯೆ (ಡಿ. 23) ಮೈಸೂರು– ಚಾಮರಾಜನಗರ ಭಾಗದ ನಾಯಕರ ಜೊತೆ ಸಭೆ ನಡೆಸಲು ಶಿವಕುಮಾರ್‌ ಮುಂದಾಗಿದ್ದ ಬಗ್ಗೆ ಸಿದ್ದರಾಮಯ್ಯ ನೇರವಾಗಿಯೇ ಬೇಸರ ವ್ಯಕ್ತಪಡಿಸಿದ್ದರು. ‘ನಾನಿಲ್ಲದೆ ಮೈಸೂರು ಭಾಗದ ಸಭೆ ನಡೆಸಬೇಡಿ’ ಎಂದು ಸೂಚಿಸಿದ್ದರು. ‘ಜೊತೆಯಲ್ಲಿ ತೆರಳಿ ಸಭೆ ನಡೆಸದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ’ ಎಂದೂ ಖಾರವಾಗಿಯೇ ಹೇಳಿದ್ದರು.

*
ಪಾದಯಾತ್ರೆ ಮಾಡಿ ಸಿಎಂ ಆಗಬಹುದು ಎಂದು ಡಿಕೆಶಿ ಅಂದುಕೊಂಡಿದ್ದರೆ ಅದು ಬರೀ ಕನಸು. ಪಾದಯಾತ್ರೆಯ ಮೂಲಕ ಜನಬೆಂಬಲ ಗಿಟ್ಟಿಸಬಹುದು ಎಂಬುದು ಮೂರ್ಖತನ.
–ಎಸ್‌.ಟಿ.ಸೋಮಶೇಖರ್‌, ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು