ಶುಕ್ರವಾರ, ಮೇ 20, 2022
26 °C
ಸಿದ್ದರಾಮಯ್ಯ ದೊಡ್ಡ ಸುಳ್ಳು ಹೇಳಿದ್ದಾರೆ:ಬೊಮ್ಮಾಯಿ

ಪಕ್ಷಾಂತರ ಹೇಳಿಕೆ: ಬಿಜೆಪಿ– ಕಾಂಗ್ರೆಸ್‌ ವಾಕ್ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದಾರೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಉಭಯ ಪಕ್ಷಗಳ ಮುಖಂಡರ ನಡುವೆ ತೀವ್ರ ವಾಕ್ಸಮರಕ್ಕೆ ಎಡೆಮಾಡಿದೆ. ವಿಪಕ್ಷ ನಾಯಕರ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರ ಸಂಪುಟದ ಸದಸ್ಯರು, ಹೇಳಿಕೆಗೆ ಸಾಕ್ಷ್ಯ ಕೊಡುವಂತೆ ಸವಾಲು ಹಾಕಿದ್ದಾರೆ.

‘ಬಿಜೆಪಿ ಮತ್ತು ಜೆಡಿಎಸ್‌ನ ಹಲವು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದರು. ‘ಇತರ ಪಕ್ಷಗಳ ಹಲವು ಶಾಸಕರು ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆ. ಅವರ ಅರ್ಜಿಗಳು ನಮ್ಮ ಮುಂದಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡ ಹೇಳಿಕೆ ನೀಡಿದ್ದರು. ಆ ಬಳಿಕ ರಾಜ್ಯ ರಾಜಕೀಯ ವಲಯದಲ್ಲಿ ಪಕ್ಷಾಂತರ ವಿಷಯ ಭಾರಿ ಚರ್ಚೆಗೆ ಗ್ರಾಸವಾಗಿದೆ.

ದೊಡ್ಡ ಸುಳ್ಳು: ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಿದ್ದರಾಮಯ್ಯ ದೊಡ್ಡ ಸುಳ್ಳು ಹೇಳಿದ್ದಾರೆ. ಬಿಜೆಪಿಯಿಂದ ಯಾರು ಬರುತ್ತಾರೆ ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವೇ ಇಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಮಧ್ಯದಲ್ಲೇ ಆಂತರಿಕ ಪೈಪೋಟಿ ಇದೆ’ ಎಂದರು.

ಶಿವಕುಮಾರ್‌ ಸುದ್ದಿಗೋಷ್ಠಿ ನಡೆಸಿ ಬೇರೆ ಪಕ್ಷದ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ ಎನ್ನುತ್ತಾರೆ. ಸಿದ್ದರಾಮಯ್ಯ ಕೂಡ ಅಭದ್ರತೆಯಿಂದ ಅವರು ಬರುತ್ತಾರೆ, ಇವರು ಬರುತ್ತಾರೆ ಎನ್ನುತ್ತಾರೆ. ಇಬ್ಬರ ನಡುವಿನ ತಿಕ್ಕಾಟದಲ್ಲಿ ಕಾಂಗ್ರೆಸ್‌ನವರೇ ಪಕ್ಷ ಬಿಡುತ್ತಾರೆ. ಅಲ್ಲಿಗೆ ಯಾರೂ ಹೋಗುವುದಿಲ್ಲ ಎಂದು ಹೇಳಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ನೆಲೆ ಇಲ್ಲ. ಪಂಜಾಬ್‌ನಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಅಪ್ರಸ್ತುತವಾಗುತ್ತಿರುವ ಪಕ್ಷವನ್ನು ಯಾರು ಸೇರುತ್ತಾರೆ? ಅದರ ಪ್ರಭಾವ ರಾಜ್ಯದ ಕಾಂಗ್ರೆಸ್‌ ಮೇಲೂ ಆಗುತ್ತದೆ ಎಂದರು.

ತಮ್ಮ ಜತೆ ಕಾಂಗ್ರೆಸ್‌ನ 16 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅವರ ಜತೆ ಯಾರು ಸಂಪರ್ಕದಲ್ಲಿ ಎಂಬುದನ್ನು ಅವರನ್ನೇ ಕೇಳಬೇಕು. ನನ್ನ ಜತೆ ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಬೇರೆಯವರ ರೀತಿ ನಾನು ಸುಳ್ಳು ಹೇಳುವುದಿಲ್ಲ’ ಎಂದು ಹೇಳಿದರು.

ಪಕ್ಷಾಂತರ – ಸಚಿವರ ಪ್ರತಿಕ್ರಿಯೆಗಳು

‘ಹುಚ್ಚು ಹಿಡಿದವರು ಕಾಂಗ್ರೆಸ್‌ ಸೇರುತ್ತಾರೆ’

‘ಹುಚ್ಚು ಹಿಡಿದವರು ಕಾಂಗ್ರೆಸ್‌ಗೆ ಹೋಗುತ್ತಾರೆ. ಬುದ್ಧಿ ನೆಟ್ಟಗೆ ಇರುವವರು ಯಾರೂ ಆ ಪಕ್ಷಕ್ಕೆ ಹೋಗುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸದೃಢವಾಗಿದೆ. ಇಂತಹ ಸಮಯದಲ್ಲಿ ಯಾರೂ ಪಕ್ಷ ಬಿಡುವುದಿಲ್ಲ’

– ಆರಗ ಜ್ಞಾನೇಂದ್ರ, ಗೃಹ ಸಚಿವ

––––

ಗೆದ್ದಲು ಹಿಡಿದ ಮರ

ಕಾಂಗ್ರೆಸ್‌ ಈಗ ಗೆದ್ದಲು ಹಿಡಿದ ಮರ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ ಅನ್ನು ಮುಗಿಸುತ್ತಾರೆ. ತಲೆಹರಟೆ ಮಾತನಾಡಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ’

– ಕೆ.ಎಸ್‌. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

––––

ಎಷ್ಟು ಶಾಸಕರನ್ನಾದರೂ ತರುತ್ತಾರೆ

ರಮೇಶ ಜಾರಕಿಹೊಳಿ ಹಿರಿಯ ರಾಜಕಾರಣಿ. ಮಾಜಿ ಸಚಿವ ಹಾಗೂ ಅನುಭವಿ. ಅವರ ಸಂಪರ್ಕದಲ್ಲಿ ಎಷ್ಟೋ ಶಾಸಕರು ಇರಬಹುದು. ಆದರೆ, ನನಗೆ ಮಾಹಿತಿ ಇಲ್ಲ. ಎಷ್ಟು ಶಾಸಕರನ್ನಾದರೂ ಬಿಜೆಪಿಗೆ ಕರೆತರುವ ಶಕ್ತಿ ರಮೇಶ ಅವರಿಗಿದೆ.

– ಗೋವಿಂದ ಕಾರಜೋಳ, ಜಲ ಸಂಪನ್ಮೂಲ ಸಚಿವ

–––––

ಹಾವು ಬಿಡ್ತೇನೆ ಎಂಬ ಕತೆ

ಕಾಂಗ್ರೆಸ್‌ನವರಿಗೆ ಮಾಡಲು ಬೇರೆ ಏನೂ ಕೆಲಸ ಇಲ್ಲ. ಹಾವಿನ ಬುಟ್ಟಿ ಇಟ್ಟುಕೊಂಡು ಹಾವು ಬಿಡ್ತೇನೆ, ಹಾವು ಬಿಡ್ತೇನೆ ಎಂದು ಹೆದರಿಸುವಂತೆ ಮಾಡುತ್ತಿದ್ದಾರೆ. ಬುಟ್ಟಿ ತೆರೆದರೆ ತಾನೇ ಗೊತ್ತಾಗೋದು, ಬುಸ್‌ ಅನ್ನುತ್ತಾ? ಠುಸ್‌ ಅನ್ನುತ್ತಾ? ಅಂತ.

– ಎಸ್‌.ಟಿ. ಸೋಮಶೇಖರ್‌, ಸಹಕಾರ ಸಚಿವ.

––––––
ಅಭದ್ರತೆಯ ದ್ಯೋತಕ

ಪಕ್ಷ ಬಿಟ್ಟು ಹೋದವರನ್ನು ಮತ್ತೆ ಯಾವ ಕಾರಣಕ್ಕೂ ಹಿಂದಕ್ಕೆ ಕರೆಯುವುದಿಲ್ಲ ಎಂದು ಸಿದ್ದರಾಮಯ್ಯ ಎರಡು ವರ್ಷಗಳ ಹಿಂದೆ ಮೇಜು ಗುದ್ದಿ ಹೇಳಿದ್ದರು. ಈಗ ಅವರೇ ಪರೋಕ್ಷವಾಗಿ ಆಹ್ವಾನ ನೀಡುತ್ತಿದ್ದಾರೆ. ಪಕ್ಷ ಬಿಟ್ಟು ಹೋದವರ ಅನಿವಾರ್ಯ ಕಾಂಗ್ರೆಸ್‌ಗೆ ಇದೆ. ಇದು ಸಿದ್ದರಾಮಯ್ಯ ಅವರ ಅಭದ್ರತೆಯ ದ್ಯೋತಕ.

– ಸಿ.ಸಿ. ಪಾಟೀಲ, ಲೋಕೋಪಯೋಗಿ ಸಚಿವ

–––––––

ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ

‘ನಾವು ಯಾರೂ ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿ ಇಲ್ಲ. ನಾವು ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಿಟ್ಟು ಕಾಂಗ್ರೆಸ್‌ಗೆ ಹೋಗುವ ಪ್ರಶ್ನೆಯೇ ಇಲ್ಲ. ಮುಂದೆಯೂ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. 17 ಜನರೂ ಬಿಜೆಪಿಯಲ್ಲೇ ಇರುತ್ತೇವೆ’

– ಕೆ.ಸಿ. ನಾರಾಯಣ ಗೌಡ, ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ

––––

ಶುದ್ಧ ಸುಳ್ಳುಗಾರರು

‘ಬಿಜೆಪಿ ಶಾಸಕರು ಯಾವ ಪಕ್ಷದವರ ಸಂಪರ್ಕದಲ್ಲೂ ಇಲ್ಲ. ಕಾಂಗ್ರೆಸ್‌ವರು ನಮ್ಮ ಸಂಪರ್ಕದಲ್ಲೂ ಇಲ್ಲ. ಬಿಜೆಪಿ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬುದು ಸುಳ್ಳು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಶುದ್ಧ ಸುಳ್ಳುಗಾರರು’

– ಪ್ರಭು ಚವಾಣ್‌, ಪಶುಸಂಗೋಪನಾ ಸಚಿವ

–––––––

ಆತ್ಮಾವಲೋಕನ ಮಾಡಿಕೊಳ್ಳಲಿ

‘ಬೇರೆ ಪಕ್ಷದ ಶಾಸಕರು ಬಿಜೆಪಿಗೆ ಬಂದು ಜಾತ್ರೆ ಮಾಡಿಕೊಂಡು ಹೋಗುತ್ತಾರೆ ಎಂಬ ಹೇಳಿಕೆ ಸರಿಯಲ್ಲ. ಈ ರೀತಿ ಹೇಳಿಕೆ ನೀಡುವವರು ಎಲ್ಲೆಲ್ಲಿ ಹೋಗಿ ಬಂದಿದ್ದಾರೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಯಾರಾದರೂ ಪಕ್ಷ ಬಿಟ್ಟು ಹೋಗುತ್ತೇವೆ ಎಂದು ಹೇಳಿದ್ದಾರಾ?‘

– ಮುರುಗೇಶ ಆರ್‌. ನಿರಾಣಿ, ಕೈಗಾರಿಕಾ ಸಚಿವ

(ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ)

––––

ಪಟ್ಟಿ ಬಿಡುಗಡೆ ಮಾಡಲಿ

ವಿಶ್ವಾಸವೇ ಬೇರೆ, ರಾಜಕಾರಣವೇ ಬೇರೆ. ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್‌ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬುದರ ಪಟ್ಟಿಯನ್ನು ಬಿಡುಗಡೆ ಮಾಡಲಿ. ಅವರ ಸಂಪರ್ಕದಲ್ಲಿ ಯಾರು ಇದ್ದಾರೊ? ಇಲ್ಲವೊ? ಗೊತ್ತಿಲ್ಲ. ಚುನಾವಣೆಗೆ ಇನ್ನೂ 15 ತಿಂಗಳು ಇರುವಾಗಲೇ ಈ ರೀತಿ ಮಾತನಾಡುತ್ತಿದ್ದಾರೆ.

– ಡಾ.ಕೆ. ಸುಧಾಕರ್‌, ಆರೋಗ್ಯ ಸಚಿವ

––––

ಹಗಲು ಕನಸು ಕಾಣುತ್ತಿದ್ದಾರೆ

ರಾಜ್ಯದ ಕಾಂಗ್ರೆಸ್‌ ನಾಯಕರು ಮುಖ್ಯಮಂತ್ರಿ ಹುದ್ದೆಗಾಗಿ ಕಚ್ಚಾಡುತ್ತಾ ಹಗಲು ಕನಸು ಕಾಣುತ್ತಿದ್ದಾರೆ. ಇಂತಹ ಪರಿಸ್ಥಿತಿ ಬಿಜೆಪಿ ಬಿಟ್ಟು ಯಾರು ಕಾಂಗ್ರೆಸ್‌ಗೆ ಹೋಗುತ್ತಾರೆ? ಡಿ.ಕೆ. ಶಿವಕುಮಾರ್‌ ಅವರನ್ನು ಕೆಲವು ಸಚಿವರು ಭೇಟಿ ಮಾಡಿದ್ದಾರೆ ಎಂಬುದು ಗಾಳಿ ಸುದ್ದಿಯಷ್ಟೆ.

– ಡಾ.ಸಿ.ಎನ್‌. ಅಶ್ವತ್ಥನಾರಾಯಣ,  ಉನ್ನತ ಶಿಕ್ಷಣ ಸಚಿವ

––––

ನನ್ನ ಪಾದರಕ್ಷೆಯೂ ಹೋಗುವುದಿಲ್ಲ

ನಾನಲ್ಲ, ನಾನು ಧರಿಸುವ ಪಾದರಕ್ಷೆಯೂ ಕಾಂಗ್ರೆಸ್‌ ಪಕ್ಷಕ್ಕೆ ಹೋಗುವುದಿಲ್ಲ. ಅನೇಕ ಬಾರಿ ಶಾಸಕರಾದವರಿಗೆ ಸಚಿವರಾಗಬೇಕೆಂಬ ಆಕಾಂಕ್ಷೆ ಇರುತ್ತದೆ. ಅದಕ್ಕಾಗಿ ಲಾಬಿ ಮಾಡುವುದಿಲ್ಲ. ಪಕ್ಷದಲ್ಲಿ ಯಾವುದನ್ನೂ ಅಪೇಕ್ಷೆಪಡಬಾರದು ಎಂಬುದನ್ನು ಕಲಿಸಿಕೊಟ್ಟಿದ್ದಾರೆ.

– ಶಿವನಗೌಡ ನಾಯಕ, ಬಿಜೆಪಿ ಶಾಸಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು