ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಬಗ್ಗೆ ಟೀಕೆ ಮಾಡುತ್ತಿರುವವರ ವಿರುದ್ಧ ದೂರು ದಾಖಲು: ರೇಣುಕಾಚಾರ್ಯ

ಮುಂದಿನ ವಾರದ ದೆಹಲಿಗೆ ತೆರಳಲು ಶಾಸಕರ ತೀರ್ಮಾನ
Last Updated 8 ಜುಲೈ 2021, 21:00 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವವರ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಲಾಗುವುದು ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ಯಡಿಯೂರಪ್ಪ ಅವರನ್ನು ಗುರುವಾರ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಈ ಸಂಬಂಧ ನಾವು ಕೆಲವು ಶಾಸಕರು ಚರ್ಚೆ ನಡೆಸಿದ್ದೇವೆ’ ಎಂದು ತಿಳಿಸಿದರು.

‘ಯಡಿಯೂರಪ್ಪ ಅವರು ರಾಜ್ಯದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು. ಅವರನಾಯಕತ್ವ ಮತ್ತು ಅವರ ವಿರುದ್ಧ ಮಾತನಾಡಿದರೆ ನಾವು ಒಪ್ಪುವುದಿಲ್ಲ. ಮಾತನಾಡುವವರು ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ.ಯಡಿಯೂರಪ್ಪ ವಿರುದ್ಧ ಮಾತನಾಡುವುದೂ ಒಂದೇ ಪಕ್ಷದ ವಿರುದ್ಧ ಮಾತನಾಡುವುದೂ ಒಂದೇ’ ಎಂದು ರೇಣುಕಾಚಾರ್ಯ ಕಿಡಿಕಾರಿದರು.

ಮೈಸೂರಿನಲ್ಲಿ ಒಬ್ಬರು ಯಾವಾಗಲೂ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದ ಅವರು, ಮುಖ್ಯಮಂತ್ರಿ ಜತೆ ಅಭಿವೃದ್ಧಿ, ಕೊರೊನಾ ನಿಯಂತ್ರಣ, ಅನುದಾನ ಕೇಳಲು ಮಾತುಕತೆ ನಡೆಸಿದೆ’ ಎಂದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ಯಡಿಯೂರಪ್ಪ ನಮ್ಮ ನಾಯಕರು. ಅವರಿದ್ದರೆ ಮಾತ್ರ ನಾವು ಗೆದ್ದು ಬರುತ್ತೇವೆ. ಅವರನ್ನು ಟೀಕಿಸುವವರು ತಾಕತ್ತಿದ್ದರೆ, ರಾಜೀನಾಮೆ ನೀಡಿ ಚುನಾವಣೆಯಲ್ಲಿ ಗೆದ್ದು ಬರಲಿ’ ಎಂದು ಸವಾಲು ಹಾಕಿದರು.

ಮುಂದಿನ ವಾರ ದೆಹಲಿಗೆ: ಯಡಿಯೂರಪ್ಪ ನಾಯಕತ್ವವನ್ನು ಬೆಂಬಲಿಸಿರುವ 20 ಕ್ಕೂ ಹೆಚ್ಚು ಶಾಸಕರು ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು, ಮುಂದಿನ ವಾರ ದೆಹಲಿಗೆ ಹೋಗಲು ನಿರ್ಧರಿಸಿದ್ದಾರೆ.

ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ, ದೂರು ಸಲ್ಲಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಯಡಿಯೂರಪ್ಪ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಸಬೇಕು, ನಾಯಕತ್ವದ ಬಗ್ಗೆ ಪದೇ ಪದೇ ಮಾತನಾಡುತ್ತಿರುವ ಸಚಿವ ಯೋಗೇಶ್ವರ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎಚ್‌. ವಿಶ್ವನಾಥ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ನಾಯಕತ್ವದ ಬಗ್ಗೆ ಯಾರೂ ಮಾತನಾಡದಂತೆ ಸೂಚಿಸಬೇಕು ಎಂದು ವರಿಷ್ಠರನ್ನು ಆಗ್ರಹಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಸಭೆಯಲ್ಲಿ ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಶಂಕರ ಪಾಟೀಲ ಮುನ್ನೇನಕೊಪ್ಪ, ರಾಜೇಶ ಗೌಡ, ಪ್ರೊ. ಲಿಂಗಣ್ಣ ಸೇರಿದಂತೆ 20ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT