ಗುರುವಾರ , ಅಕ್ಟೋಬರ್ 21, 2021
22 °C

ಸೆ.26ರಿಂದ ಪಕ್ಷ ಸಂಘಟನೆಗಾಗಿ ವಿಧಾನಸಭಾ ಕ್ಷೇತ್ರಗಳಲ್ಲಿ ‘ಗಾಂಧಿ ನಡಿಗೆ’: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಕ್ಷ ಸಂಘಟನೆ ಗುರಿಯೊಂದಿಗೆ ಇದೇ 26ರಿಂದ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ 'ಗಾಂಧಿ ನಡಿಗೆ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮತ್ತು ಸಲೀಂ ಅಹ್ಮದ್ ಜೊತೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ, ‘ಇದೇ 26ರಂದು ದೇವನಹಳ್ಳಿಯಲ್ಲಿ ಹಾಗೂ 29ರಂದು ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕ್ರಮ ನಡೆಯಲಿದೆ’ ಎಂದರು.

‘ಮುಂದಿನ ತಿಂಗಳು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು’ ಎಂದರು.

‘ನವೆಂಬರ್‌ನಲ್ಲಿ ಚಿಕ್ಕಬಳ್ಳಾಪುರ ವ್ಯಾಪ್ತಿಯ ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ 10ರಿಂದ ಸಂಜೆ 6ರವರೆಗೂ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸ್ಥಳೀಯ ವಾರ್ಡ್, ತಾಲ್ಕೂಕು, ಜಿಲ್ಲಾ ಮಟ್ಟದ ನಾಯಕರು, ಅಭ್ಯರ್ಥಿಗಳು ಭಾಗವಹಿಸಲಿದ್ದು, ಕಾರ್ಯಕರ್ತರಲ್ಲಿ ಹುರುಪು ತುಂಬಲು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದರು.

‘ದೇವರಾಜ ಅರಸು ಅವರ ಕಾಲದಲ್ಲಿ ಹಾಗೂ ಇಂದಿರಾ ಅವರು ಸೋತ ನಂತರ ಈ ರೀತಿ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿದ್ದೆವು. ಆಗ ಪಕ್ಷ ವಿಧಾಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗೆಲುವು ಸಾಧಿಸಿತ್ತು. ಈಗ ಹಣ ಹಾಗೂ ಜಾತಿ ಚುನಾವಣೆಯಲ್ಲಿ ಪ್ರಾಧಾನ್ಯತೆ ಪಡೆದ ವಿಕೃತ ರಾಜಕಾರಣ ಬೆಳೆದಿವೆ. ಇದಕ್ಕೆ ಕಾರಣ ಬಿಜೆಪಿ. ಅವರು ಬ್ರಿಟಿಷರಂತೆ ಮತಗಳು, ಧರ್ಮಗಳ ನಡುವೆ ಒಡೆದು ಆಳುವ ನೀತಿ ಅನುಸರಿಸುತ್ತಿವೆ. ಇದು ಯಾವಾಗಲೂ ಯಶಸ್ವಿಯಾಗುವುದಿಲ್ಲ. ಪ್ರಧಾನಿ ಖ್ಯಾತಿ ಕುಸಿತವೇ ಇದಕ್ಕೆ ಸಾಕ್ಷಿ’ ಎಂದರು.

ಇದನ್ನೂ ಓದಿ... ಮಳೆಯಿಲ್ಲ, ಬಿಸಿಲಿಲ್ಲ, ಮೆಟ್ಟಿಲು ಇಳಿಯಲು ಛತ್ರಿ ಬಿಚ್ಚುವರು ಮೋದಿ: ಕಾಂಗ್ರೆಸ್

ರಾಮಲಿಂಗಾರೆಡ್ಡಿ ಮಾತನಾಡಿ, ವೀರಪ್ಪ ಮೊಯಿಲಿ ಅವರು ಈ ವಿಶೇಷ ಕಾರ್ಯಕ್ರಮ ರೂಪಿಸಿದ್ದಾರೆ. ಮೊದಲು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂದರು.

‘ಗಾಂಧಿ ನಡಿಗೆ ಕಾರ್ಯಕ್ರಮವನ್ನು ರಾಜ್ಯವ್ಯಾಪಿ ನಡೆಸಲು ನಮ್ಮ ಸಿಎಲ್ ಪಿ ನಾಯಕರು ಹಾಗೂ ಅಧ್ಯಕ್ಷರ ಚರ್ಚಿಸಲಾಗುವುದು’ ಎಂದರು.

ಸಲೀಂ ಅಹ್ಮದ್ ಮಾತನಾಡಿ, ‘ಗಾಂಧಿ ನಡಿಗೆ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ತತ್ವ, ಸಿದ್ಧಾಂತ, ಕೊಡುಗೆ, ವಿಚಾರಧಾರೆ ವಿವರಿಸಲಾಗುವುದು. ಆ ಮೂಲಕ ಅವರು ಜನರಿಗೆ, ಯುವ ಪೀಳಿಗೆಗೆ ಮಾರ್ಗದರ್ಶನ ನೀಡುವ ಪ್ರಯತ್ನ ಮಾಡಲಾಗುವುದು  ಎಂದರು.

ಕಾಂಗ್ರೆಸ್ ವತಿಯಿಂದ ಮುಂದಿನ ತಿಂಗಳು ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಪಂಚಾಯಿತಿ, ಬ್ಲಾಕ್ ಹಾಗೂ ಗಾಂಧೀಜಿ ಕೊಡುಗೆ, ಹೋರಾಟ ಎಲ್ಲವನ್ನು ಜನರಿಗೆ ವಿವರಿಸಲಾಗುವುದು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು