ಬುಧವಾರ, ಮೇ 25, 2022
30 °C
ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿ ಪಡೆದಿದ್ದ ಸಾಲಿ

ಅಕ್ರಮ ಗೊತ್ತಿದ್ದೂ ಮರೆಮಾಚಿದ್ದ ಡಿವೈಎಸ್ಪಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಬಗ್ಗೆ ಎಲ್ಲ ಮಾಹಿತಿ ಇದ್ದರೂ ಕಾನೂನು ಕ್ರಮ ಕೈಗೊಳ್ಳದೇ ಅಕ್ರಮದಲ್ಲಿ
ಪಾಲು ಪಡೆದ ಆರೋಪದಡಿ ಅಮಾನತುಗೊಂಡಿರುವ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿಗೆ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪ್ರಮುಖ ಆರೋಪಿಗಳಾದ ಆರ್‌.ಡಿ.ಪಾಟೀಲ, ದಿವ್ಯಾ ಹಾಗರಗಿ ಬಳಿಕ ಈಗ ಮಲ್ಲಿಕಾರ್ಜುನ ಸಾಲಿ ಹಾಗೂ ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರಿ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. 

‘ಹಗರಣ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದೂರು ದಾಖಲಿಸಿದ್ದರೆ ವೃತ್ತಿ ಜೀವನದಲ್ಲೂ ಮೈಲಿಗಲ್ಲು ಆಗುತ್ತಿತ್ತು. ಅದನ್ನು ಬಿಟ್ಟು ಇಡೀ ಇಲಾಖೆಗೆ ಕಪ್ಪುಚುಕ್ಕೆ ತರುವ ಕೆಲಸ ಮಾಡಿದ್ದು ಏಕೆ’ ಎಂದು ವಿಚಾರಣೆ ವೇಳೆ ಪ್ರಶ್ನಿಸಲಾಗಿದೆ.

ಬಚಾವಾಗಿದ್ದ ಆರ್‌.ಡಿ.ಪಾಟೀಲ: ಬೆಂಗಳೂರಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಡಿ. 13 ಮತ್ತು 14ರಂದು ನಡೆದಿದ್ದ ಲೋಕೋಪಯೋಗಿ ಇಲಾಖೆಯ ಎಇ ಮತ್ತು ಜೆಇ ಪರೀಕ್ಷೆ ಅಕ್ರಮದಲ್ಲಿ ಆರ್‌.ಡಿ.ಪಾಟೀಲ ಪಾತ್ರವಿರುವ ಬಗ್ಗೆ ಮಾಹಿತಿ ಇದ್ದರೂ ಅವರನ್ನು ಬಂಧಿಸಿರಲಿಲ್ಲ. ಮತ್ತೊಬ್ಬ ಆರೋಪಿ ಮಂಜುನಾಥ ಮೇಳಕುಂದಿಯನ್ನು ಬಂಧಿಸಲಾಗಿತ್ತು.

ಪಿಎಸ್‌ಐ ನೇಮಕದಲ್ಲಿ ಆರ್‌.ಡಿ.ಪಾಟೀಲರಿಂದ ವ್ಯಾಪಕ ಅಕ್ರಮ ವಿರುದ್ಧ ಹಾಗೆಯೇ ಬಿಟ್ಟಿರುವ ಪೊಲೀಸರ ಕ್ರಮದ ಬಗ್ಗೆಯೂ ಶಂಕೆಗಳಿವೆ. ಪ್ರಕರಣದ ಗಂಭೀರತೆ ಹಿಂದೆಯೇ ಆರ್‌.ಡಿ.ಪಾಟೀಲ ವಶಕ್ಕೆ ಪಡೆದು ವಿಚಾರಣೆ ನಡೆಸಲು ಬೆಂಗಳೂರು ಪೊಲೀಸರ ತಂಡ ನಗರಕ್ಕೆ ಬಂದಿದೆ.

ಅಮರ್ಜಾ ಜಲಾಶಯಕ್ಕೆ ಮೊಬೈಲ್ ಎಸೆದಿದ್ದ ಮಂಜುನಾಥ

ಸದ್ಯ, ‌ಸಿಐಡಿ ವಶದಲ್ಲಿರುವ ಮಂಜುನಾಥ ಮೇಳಕುಂದಿ ಸಾಕ್ಷ್ಯ ನಾಶ ಉದ್ದೇಶದಿಂದ ಕಲಬುರಗಿ ಜಿಲ್ಲೆ ಆಳಂದ ಬಳಿಯ ಅಮರ್ಜಾ ಜಲಾಶಯಕ್ಕೆ ತಾನು ಬಳಸಿದ್ದ ಮೊಬೈಲ್ ಫೋನ್‌ ಎಸೆದಿರುವುದಾಗಿ ತಿಳಿಸಿದ್ದರು. ಹೀಗಾಗಿ, ಸಿಐಡಿ ಅಧಿಕಾರಿಗಳ ತಂಡ ಆರೋಪಿಯನ್ನು ಅಮರ್ಜಾಕ್ಕೆ ಕರೆದೊಯ್ದು ಮಹಜರು ನಡೆಸಿತು.

ಮಂಜುನಾಥ ತಿಳಿಸಿದ ಸ್ಥಳದಲ್ಲಿ ಈಜುಗಾರರನ್ನು ಇಳಿಸಿ ಮೊಬೈಲ್‌ ಫೋನ್‌ಗೆ ಶೋಧ ನಡೆಯಿತು. ಆದರೆ, ಸಿಗಲಿಲ್ಲ. ಸದ್ಯ, ಅವರು ಬಳಸುತ್ತಿದ್ದ ಮೊಬೈಲ್ ಫೋನ್‌ನಲ್ಲಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದ ಕರೆ ವಿವರ ಇರಲಿಲ್ಲ. ಸಂಶಯ ಬಂದು ಅಧಿಕಾರಿಗಳು ಪ್ರಶ್ನಿಸಿದಾಗ ಜಲಾಶಯಕ್ಕೆ ಮೊಬೈಲ್ ಎಸೆದಿದ್ದುದನ್ನು ತಿಳಿಸಿದ್ದರು. ನಂತರ ಆರೋಪಿಯನ್ನು ಜ್ಞಾನಜ್ಯೋತಿ ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿ ಮನೆ, ಬ್ಲೂಟೂತ್ ಎಸೆದಿದ್ದ ಕಲಬುರಗಿ ಹೊರವಲಯದ ಕೇಂದ್ರೀಯ ವಿದ್ಯಾಲಯ ಸಮೀಪದ ರಾಜಕಾಲುವೆ ಬಳಿಗೂ ಕರೆದೊಯ್ದು ಮಹಜರು ನಡೆಸಲಾಯಿತು.

ಪೊಲೀಸರ ವರ್ಗಾವಣೆಯಲ್ಲೂ ಶಶಿಧರ್ ಕೈವಾಡ?

ಹಾಸನ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧ ಸಿಐಡಿ ಅಧಿಕಾರಿಗಳು ಬಂಧಿಸಿರುವ, ಚನ್ನರಾಯಪಟ್ಟಣ ಪುರಸಭೆ ಜೆಡಿಎಸ್ ಸದಸ್ಯ ಸಿ.ಎನ್.ಶಶಿಧರ್, ಕಾನ್‌ಸ್ಟೆಬಲ್‌ಗಳ ವರ್ಗಾವಣೆ ಮಾಡಿಸುತ್ತಿದ್ದರು ಎಂಬ ಆರೋಪವಿದೆ.

ಪ್ರಭಾವಿಯಾಗಿ ಬಿಂಬಿಸಿಕೊಂಡಿದ್ದ ಅವರು, ಪರಿಚಯಸ್ಥ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಯ ಆಪ್ತರ ನೆರವಿನಿಂದ ವರ್ಗಾವಣೆ ಮಾಡಿಸುತ್ತಿದ್ದರು. ಮಕ್ಕಳಿಗೆ ನೌಕರಿ ಕೊಡಿಸುವಂತೆ ಜನ ದುಂಬಾಲು ಬೀಳುತ್ತಿದ್ದರು. ಅಧಿಕಾರಿಗಳಿಗೆ ಫೋನ್ ಮಾಡುವಂತೆ ಒತ್ತಡ ಹೇರಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಶಶಿಧರ್‌ ಎರಡು ಬಾರಿ ಪುರಸಭೆಗೆ ಆಯ್ಕೆಯಾಗಿ, ಒಂದು ವರ್ಷ ಅಧ್ಯಕ್ಷರಾಗಿದ್ದರು. ಜೆಡಿಎಸ್ ಶಾಸಕ ಸಿ.ಎನ್. ಬಾಲಕೃಷ್ಣ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗೆ ಬಿಜೆಪಿಗೆ ಹತ್ತಿರವಾಗಿದ್ದರು.

‘ಎರಡು, ಮೂರು ದಿನದಲ್ಲಿ ಮಗ ವಾಪಸ್ ಬರಲಿದ್ದು, ನಂತರ ಎಲ್ಲ ಗೊತ್ತಾಗಲಿದೆ’ ಎಂದು ಅವರ ತಂದೆ, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ್ ತಿಳಿಸಿದರು.  

ಅಭ್ಯರ್ಥಿ ಕರೆದೊಯ್ದ ಸಿಐಡಿ?

ಧಾರವಾಡ: ಪಿಎಸ್‌ಐ ಅಕ್ರಮ ನೇಮಕಾತಿಗೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಇಲ್ಲಿನ ಸಪ್ತಾಪುರದಲ್ಲಿರುವ ಶಿಕ್ಷಣ ಸಂಸ್ಥೆಯಲ್ಲಿ ಕೆಎಎಸ್‌ ಮತ್ತು ಪಿಎಸ್‌ಐ ತರಬೇತಿ ಪಡೆಯುತ್ತಿದ್ದ ಬಾಗಲಕೋಟೆ ಜಿಲ್ಲೆಯ ಮಹಲಿಂಗಪುರದ ರುದ್ರಣ್ಣ ಅರಳಿಕಟ್ಟಿ ವರನ್ನು ವಶಕ್ಕೆ ಪಡೆದರು.

ನಾಲ್ಕು ಜನರಿದ್ದ ಸಿಐಡಿ ತಂಡ ವಶಕ್ಕೆ ಪಡೆದು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು