ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಗ್ಗಿದ ಮಳೆ: ಇಳಿಯದ ಪ್ರವಾಹ

ಬಸ್‌ ಮೇಲೆ ಬಿದ್ದ ಮರ: ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಕುಸಿಯುವ ಆತಂಕ
Last Updated 17 ಜುಲೈ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾನುವಾರ ಮಳೆ ತುಸು ಬಿಡುವು ನೀಡಿದೆ. ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರೂ ತಮ್ಮ ಮನೆಗಳಿಗೆ ವಾಪಸಾಗಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ಮಳೆ ಬಿಡುವು ನೀಡಿದೆ. ಆದರೆ, ಮಹಾ ರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಧಾರಾ ಕಾರಮಳೆಮುಂದುವರಿದ ಪರಿಣಾಮ, ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರಿನ ಮಟ್ಟ ಹೆಚ್ಚುತ್ತ ಸಾಗಿದೆ.

ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸ ಕೊಪ್ಪ ಜಲಾಶಯ ಬಹುತೇಕ ಭರ್ತಿ ಯಾಗಿದೆ. 2,475 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 2,473.50 ಅಡಿ ನೀರಿದೆ. ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಹರಿಸಲಾಗುತ್ತಿದೆ. ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಸೇತುವೆ ಬಳಿ ಕೃಷ್ಣಾ ನದಿಗೆ 1,29,370 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.

ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ ಕ್ಷೀಣಿಸಿತ್ತು. ಹೊನ್ನಾವರ ತಾಲ್ಲೂಕಿನ ಗುಂಡಬಾಳ, ಸಾಲ್ಕೋಡು ಹಳ್ಳಗಳು, ಕುಮಟಾ ತಾಲ್ಲೂಕಿನ ಅಘನಾಶಿನಿ ಹಾಗೂ ಅಂಕೋಲಾ ತಾಲ್ಲೂಕಿನ ಗಂಗಾವಳಿ ನದಿಗಳಲ್ಲಿ ಪ್ರವಾಹದ ಸ್ಥಿತಿ ದೂರವಾಗಿದೆ. ಸುತ್ತಮುತ್ತಲಿನ ಜಮೀನು, ಮನೆಗಳಿಂದಲೂ ನೀರು ಇಳಿದಿದೆ. ವಿವಿಧ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರೂ ತಮ್ಮ ಮನೆ ಗಳಿಗೆ ವಾಪಸಾಗಿದ್ದಾರೆ.

ಹೊನ್ನಾವರ ತಾಲ್ಲೂಕಿನ ವಂದೂರಿ ನಲ್ಲಿ ಶನಿವಾರ ರೈಲ್ವೆ ಹಳಿ ಸಮೀಪದ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಕೂಲಿ ಕಾರ್ಮಿಕ ಹಳದಿ ಪುರದ ಕೃಷ್ಣ ಮಾಸ್ತಿಗೌಡ (48) ಅವರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದು ವರಿದಿದೆ. ಹೊಸನಗರದಿಂದ ನಿಟ್ಟೂರು–ಕೊಲ್ಲೂರು ಸಂಪರ್ಕ ರಸ್ತೆಯಾದ ನಾಗೋಡಿ ಘಾಟಿಯಲ್ಲಿ ಖಾಸಗಿ ಬಸ್ ಮೇಲೆ ಮರ ಉರುಳಿಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ. ಶಿವಮೊಗ್ಗದಿಂದ ಕುಂದಾಪುರಕ್ಕೆ ಹೊರಟಿದ್ದ ಖಾಸಗಿ ಬಸ್‌ ಮೇಲೆ ಅಕೇಶಿಯಾ ಮರ ಬಿದ್ದಿತ್ತು.

ಸ್ಥಳೀಯರ ಸಹಕಾರದಿಂದ ತೆರವು ಗೊಳಿಸಲಾಯಿತು. ಇದರಿಂದ ಕೆಲ ಹೊತ್ತು ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು.

ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ತಗ್ಗಿದೆ. ಅಪಾಯದಲ್ಲಿದ್ದವರ ಮನವೊಲಿಸಿದ ಜಿಲ್ಲಾಡಳಿತ, 127 ಕುಟುಂಬಗಳ 452 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದೆ. ಇದರಿಂದ ಕಾಳಜಿ ಕೇಂದ್ರದಲ್ಲಿರುವವರ ಸಂಖ್ಯೆ 602ಕ್ಕೆ ಏರಿದೆ.

ಭಾಗಮಂಡಲ ಸೇರಿದಂತೆ ಅನೇಕ ಕಡೆ ನದಿ ನೀರಿನ ಮಟ್ಟದಲ್ಲಿ ಇಳಿಕೆಯಾಗುತ್ತಿದೆ. ಆದಾಗ್ಯೂ, ನಾಪೋಕ್ಲು– ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದೆ. 2 ಮನೆಗಳಿಗೆ ಹಾನಿಯಾಗಿದೆ. ದೊಡ್ಡಪುಲಿಕೋಟು ಗ್ರಾಮದ ಮಣವಟ್ಟೀರ ದಯಕುಟ್ಟಪ್ಪ ಅವರ ಮನೆಯ ಹಿಂಭಾಗ ಮಣ್ಣು ಕುಸಿದು ಕಾಫಿ ಗಿಡಗಳು ನಾಶವಾಗಿವೆ.

ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ರುವ ಜಿಲ್ಲಾಧಿಕಾರಿ ಕಚೇರಿಯ ತಡೆ ಗೋಡೆಯ ಸ್ಲ್ಯಾಬ್‌ಗಳು ಹೊರ ಚಾಚಿದ್ದು, ಕಳಚಿ ಬೀಳುವ ಆತಂಕ ಮೂಡಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ‌.

ಮಡಿಕೇರಿಯಿಂದ ಮಂಗಳೂರಿಗೆ ಹೋಗುವವರು ಹಾಗೂ ಬರುವವರು ಮೇಕೇರಿ-ಅಪ್ಪಂಗಳ-ತಾಳತ್ತಮನೆ ಜಂಕ್ಷನ್ ಮಾರ್ಗದಲ್ಲಿ ಸಂಚರಿಸಬೇಕಿದೆ. ನಿರಂತರ ಮಳೆಯಿಂದಾಗಿ ವಾರ ದಿಂದಲೂ ಸ್ಲ್ಯಾಬ್‌ಗಳು ಹೊರಚಾಚಿವೆ. ‘ತಡೆಗೋಡೆ ಕುಸಿದು ಬೀಳುವುದಿಲ್ಲ, ಒಳಗೆಮಳೆನೀರು ಸೇರಿರುವುದರಿಂದ ತೊಂದರೆಯಾಗಿದೆಯಷ್ಟೆ’ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರತಿಪಾದಿಸಿದ್ದರು.

ತಡೆಗೋಡೆ ಕುಸಿತದ ಭೀತಿಯಿಂದ ಮಂಗಳೂರು ರಸ್ತೆಯಲ್ಲಿ ಸಂಚಾರ ನಿಷೇಧಿಸಿ ಮೇಕೇರಿ-ಅಪ್ಪಂಗಲ-ತಾಳತ್ತಮನೆ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಆದರೆ, ಇಲ್ಲಿ ರಸ್ತೆ ಚಿಕ್ಕದಾಗಿರುವುದರಿಂದ ವಾಹನ ದಟ್ಟಣೆ ಉಂಟಾಗಿದೆ. ಕಿ.ಮೀ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಕಲಬುರಗಿ, ಬೀದರ್, ಯಾದಗಿರಿ ಹಾಗೂ ‌ಕೊಪ್ಪಳ ಜಿಲ್ಲೆಗಳಲ್ಲಿ ಮಳೆ ಸುರಿಯಿತು. ಕಲಬುರಗಿ ನಗರ ಸೇರಿದಂತೆ ಅಫಜಲಪುರ, ಚಿತ್ತಾಪುರ, ಕಮಲಾಪುರ, ಕಾಳಗಿ, ಯಡ್ರಾಮಿ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ. ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ 20 ನಿಮಿಷ ಮಳೆ ಸುರಿದಿದೆ.ಕೊಪ್ಪಳ ನಗರ ಮತ್ತು ಯಲಬುರ್ಗಾದಲ್ಲಿ ಜಿಟಿಜಿಟಿ ಮಳೆಯಾಗಿದೆ. ಯಾದಗಿರಿ,
ಶಹಾಪುರದಲ್ಲಿಯೂ ಮಳೆಯಾಯಿತು.

ಶಿರಾಡಿ: ಲಘು ವಾಹನಗಳಿಗೆ ಬದಲಿ ರಸ್ತೆ

ಹಾಸನ: ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಬಳಿ ಭೂಕುಸಿತ ಸಂಭವಿಸಿದ್ದರಿಂದ ಎಲ್ಲ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೆಲ ಷರತ್ತಿನೊಂದಿಗೆ ಕಾರು, ಜೀಪು, ಸೇರಿದಂತೆ ಸಣ್ಣ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಾರು, ಜೀಪು, ಟೆಂಪೊ, ಎಲ್‌ಸಿವಿ (ಮಿನಿ ವ್ಯಾನ್), ಪ್ರಯಾಣಿಕ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ಆಂಬುಲೆನ್ಸ್‌ಗಳು ಮಾತ್ರ ಸಕಲೇಶಪುರದಿಂದ ಆನೆಮಹಲ್–ಕ್ಯಾನಹಳ್ಳ-ಚಿನ್ನಳ್ಳಿ-ಕಡಗರವಳ್ಳಿ-ಮಾರನಹಳ್ಳಿ ಮಾರ್ಗದ ಮೂಲಕ ಮಂಗಳೂರು ತಲುಪಲು ಅವಕಾಶ ಕಲ್ಪಿಸಲಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುವವರು ಮಾರನಹಳ್ಳಿಯಿಂದ ಕ್ಯಾಮನಹಳ್ಳಿ- ಹಾರ್ಲೆ-ಕೂಡಿಗೆ-ಅನೆಮಹಲ್-ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರು ತಲುಪಬಹುದು. ಈ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ‌.

ರಸ್ತೆ ಬಿರುಕು; ಹೆಚ್ಚಿದ ಭೀತಿ

ಹೆಬ್ರಿ: ಉಡುಪಿ–ಹೆಬ್ರಿ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಆಗುಂಬೆ ಘಾಟಿಯ 4ನೇ ತಿರುವಿನಲ್ಲಿ ರಸ್ತೆಯು ಬಿರುಕು ಬಿಟ್ಟಿದ್ದು ಮತ್ತೆ ಕುಸಿಯುವ ಭೀತಿ ಎದುರಾಗಿದೆ. ಕೆಲ ದಿನಗಳಿಂದ ಆಗುಂಬೆ ಘಾಟಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಮರಗಳು ಧರೆಗುರುಳಿವೆ. ಕೆಲವೆಡೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಪ್ರಯಾಣಿಕರು ಆತಂಕದಿಂದ ಸಂಚರಿಸುವಂತಾಗಿದೆ.

ಹೆಬ್ರಿ ಪರಿಸರದ ವಿವಿಧೆಡೆ ಮುಂಜಾನೆಯಿಂದ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಸಿಡಿಲು ಸಹಿತ ಮಳೆಯಾಗಿದೆ. ಶಿವಪುರದಲ್ಲಿ ವಿದ್ಯುತ್‌ ಕಂಬ ಬಿದ್ದು ವಿದ್ಯುತ್‌ ಸರಬರಾಜು ವ್ಯತ್ಯಯಗೊಂಡಿದೆ.

ಉತ್ತರ ಕನ್ನಡ, ಬೆಳಗಾವಿಯಲ್ಲಿ ‘ಆರೆಂಜ್‌ ಅಲರ್ಟ್‌’

ಬೆಂಗಳೂರು: ರಾಜ್ಯದ ಉತ್ತರ ಕನ್ನಡ, ಕೊಡಗು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸೋಮವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

ಕರಾವಳಿ ಭಾಗದ ಜಿಲ್ಲೆಗಳು ಹಾಗೂ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಳೆ: ಎಲ್ಲಿ, ಎಷ್ಟು?

ಸ್ಥಳ; ಸೆಂ ಮೀ.

ಬೆಳಗಾವಿ ಜಿಲ್ಲೆ

ಗೇರುಸೊಪ್ಪ;17.7

ಕದ್ರಾ;12.3

‌ಕೊಡಸಳ್ಳಿ;12

ಅಂಕೋಲಾ;11.8

ಕಾರವಾರ;11.6

ಭಟ್ಕಳ;11.3

ಯಲ್ಲಾಪುರ;11.4

ಶಿವಮೊಗ್ಗ ಜಿಲ್ಲೆ

ಚಕ್ರಾ; 15.7

ಮಾಣಿ;15.5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT