ಮಂಗಳವಾರ, ಜನವರಿ 18, 2022
20 °C

ರಾಜ್ಯದ ವಿವಿಧೆಡೆ ಧಾರಾಕಾರ ಮಳೆ; ಬೆಳೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಬಯಲುಸೀಮೆ ಭಾಗದಲ್ಲಿ ಶುಕ್ರವಾರ ನಸುಕಿನಲ್ಲಿ ಧಾರಾಕಾರ ಮಳೆಯಾಗಿದೆ. ಶಿವನಿ, ದಂದೂರು, ಕಡೂರು, ಬೀರೂರು ಭಾಗದಲ್ಲಿ ಬೆಳೆ ಹಾನಿಯಾಗಿವೆ.

ಶಿವನಿ, ದಂದೂರು ಭಾಗದಲ್ಲಿ ಮೆಕ್ಕೆಜೋಳ, ರಾಗಿ ಬೆಳೆ ನೆಲಕಚ್ಚಿದೆ. ಅಡಿಕೆ, ತೆಂಗಿನ ತೋಟಗಳಲ್ಲಿ ನೀರು ನಿಂತಿದೆ. ಶಿವನಿ ಕೆರೆ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. 

ಕಡೂರು ಭಾಗದಲ್ಲಿ ಆವತಿ ನದಿ ಮೈದುಂಬಿಕೊಂಡು ಹರಿಯುತ್ತಿದೆ. ಚೌಳಹಿರಿಯೂರುನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಬೀರೂರು ಪಟ್ಟಣದ ಅಜ್ಜಂಪುರ ರಸ್ತೆಯ ಕರ್ಲಹಳ್ಳ ಸೇತುವೆ ಮೇಲೆ ನೀರು ಹರಿಯುತ್ತಿದೆ. ರಹೀಮ್‌ ಸಾಬ್‌ ಬಡಾವಣೆಗೆ ನೀರು ನುಗ್ಗಿದೆ.

ಚೌಡ್ಲಾಪುರ ಕೆರೆ ಕೋಡಿ ಬಿದ್ದಿದೆ. ಕಡೂರು– ತುರುನಹಳ್ಳಿ ರಸ್ತೆಯಲ್ಲಿ ಸೇತುವೆ ಮೇಲೆ ನೀರು ಹರಿಯುತ್ತಿದೆ

ಹಳ್ಳದಲ್ಲಿ ಕೊಚ್ಚಿ ಹೋದ ರಾಗಿ ಬೆಳೆ (ಹೊಳಲ್ಕೆರೆ ವರದಿ): ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಗಂಗಸಮುದ್ರ, ಕಣಿವೆಹಳ್ಳಿ, ಸಿಂಗೇನಹಳ್ಳಿ ಸುತ್ತಮುತ್ತ ಗುರುವಾರ ತಡರಾತ್ರಿ ಭಾರಿ ಮಳೆ ಸುರಿದಿದ್ದು, ಕೆರೆಗಳು ಕೋಡಿ ಬಿದ್ದು ಅಪಾರ ಪ್ರಮಾಣದ ನೀರು ಹರಿಯುತ್ತಿದೆ.

ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಬೆಳಿಗ್ಗೆವರೆಗೂ ಸತತವಾಗಿ ಬಿರುಸಿನ ಮಳೆ ಸುರಿದಿದೆ. ಗಂಗಸಮುದ್ರದ ಕೆರೆ ತುಂಬಿ ನದಿಯಂತೆ ಹರಿಯುತ್ತಿದೆ. ಅಡಿಕೆ ಸಸಿಗಳು ನೀರಿನಲ್ಲಿ ಮುಳುಗಿವೆ.

ಸಿಂಗೇನಹಳ್ಳಿ ಗುಡ್ಡ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಕಣಿವೆಹಳ್ಳಿ ಕೆರೆ ತುಂಬಿದ್ದು, ಹಿರೇಹಳ್ಳಕ್ಕೆ ನೀರು ಹರಿಯುತ್ತಿದೆ. ಕಟಾವು ಮಾಡಿದ್ದ ರಾಗಿ ಬೆಳೆ ನೀರುಪಾಲಾಗಿದೆ. ಮೆಕ್ಕೆಜೋಳವೂ ತೆನೆಯಲ್ಲೇ ಮೊಳಕೆಯೊಡೆದಿದ್ದು, ನಷ್ಟ ಸಂಭವಿಸಿದೆ.

ದಾವಣಗೆರೆ ನಗರವೂ ಸೇರಿ ಜಿಲ್ಲೆಯ ಕೆಲವೆಡೆ ಶುಕ್ರವಾರ ರಾತ್ರಿ ಕೆಲ ಕಾಲ ಉತ್ತಮವಾಗಿ ಮಳೆ ಸುರಿಯಿತು.

ಧಾರಾಕಾರ ಮಳೆ: ಮೈಸೂರು ಭಾಗದ ನಾಲ್ಕು ಜಿಲ್ಲೆಗಳಲ್ಲಿ ಶುಕ್ರವಾರ ಧಾರಾಕಾರ ಮಳೆ ಸುರಿಯಿತು.

ಕೊಡಗು ಜಿಲ್ಲೆಯ ಮೂರ್ನಾಡಿನಲ್ಲಿ ಕೊಯ್ಲು ಮಾಡಿದ್ದ ಭತ್ತ ತೋಯ್ದು ಹೋಗಿದೆ. ಬಿಸಿಲು ಕಾಣಿಸಿಕೊಂಡಿದ್ದರಿಂದ ರೈತರು ಭತ್ತದ ಕೊಯ್ಲು ಮಾಡಿದ್ದರು.

ಮಂಡ್ಯ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆಯಾಗಿದೆ. ಮೈಸೂರು ನಗರ, ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು, ಹುಲ್ಲಳ್ಳಿ, ಚಿಕ್ಕಯ್ಯನ ಛತ್ರ ಹೋಬಳಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಯಿತು.

ಹಾಸನ ಜಿಲ್ಲೆಯಲ್ಲಿ ಕೊಣನೂರು, ಶ್ರವಣಬೆಳಗೊಳ, ಹಳೇಬೀಡು ಕಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು. ಬೇಲೂರಿನಲ್ಲಿ ಎರಡು ತಾಸು, ಹಿರೀಸಾವೆಯಲ್ಲಿ ಅರ್ಧ ತಾಸು ಹದವಾದ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು