ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ–ಪ್ರವಾಹ| ಉತ್ತರ ಕನ್ನಡ ಜಿಲ್ಲೆಯಲ್ಲಿ ಸೇತುವೆ, ಮನೆ, ಭೂ ಕುಸಿತ

ಪ್ರವಾಹದಿಂದ 81 ಗ್ರಾಮಗಳು ಬಾಧಿತ: ಮನೆ ಮೇಲೆ ಗುಡ್ಡ ಕುಸಿದು ವ್ಯಕ್ತಿ ಸಾವು: ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತ: 50 ಮನೆಗಳಿಗೆ ಹಾನಿ:
Last Updated 24 ಜುಲೈ 2021, 17:39 IST
ಅಕ್ಷರ ಗಾತ್ರ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಇಳಿಕೆಯಾಗಿದೆ. ಆದರೆ, ಹಾನಿ ಮುಂದುವರಿದಿದೆ. ಪ್ರವಾಹದಿಂದ ಒಟ್ಟು 81 ಗ್ರಾಮಗಳು ಬಾಧಿತವಾಗಿದ್ದು, 50 ಮನೆಗಳು ಸಂಪೂರ್ಣವಾಗಿ ಕುಸಿದಿವೆ.

ಗಂಗಾವಳಿ ನದಿ ಪ್ರವಾಹಕ್ಕೆ ಅಂಕೋಲಾ ತಾಲ್ಲೂಕಿನ ಗುಳ್ಳಾಪುರದ ಸೇತುವೆ ಮಧ್ಯಭಾಗದಿಂದ ಕೊಚ್ಚಿ ಹೋಗಿದೆ. ಇದರಿಂದ ಗುಳ್ಳಾಪುರ- ಹಳವಳ್ಳಿ ಸಂಪರ್ಕ ಕಡಿತವಾಗಿದೆ. ಈ ಭಾಗದಲ್ಲಿ 3,000ಕ್ಕಿಂತ ಹೆಚ್ಚು ಮನೆಗಳಿವೆ. ಹತ್ತಕ್ಕೂ ಹೆಚ್ಚು ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಈ ಸೇತುವೆಯಲ್ಲಿ ಸಾಗಿದರೆ ಗುಳ್ಳಾಪುರ ತಲುಪಲು ಕೇವಲ 10 ಕಿಲೋಮೀಟರ್ ದೂರವಾಗುತ್ತಿತ್ತು. ತಾಲ್ಲೂಕು ಕೇಂದ್ರ ಅಂಕೋಲಾಕ್ಕೆ 50 ಕಿ.ಮೀ, ಯಲ್ಲಾಪುರಕ್ಕೆ 25 ಕಿ.ಮೀ ದೂರವಾಗುತ್ತಿತ್ತು. ಈಗ ಮತ್ತಿಘಟ್ಟ ಮೂಲಕ ಅಂಕೋಲಾಕ್ಕೆ 150 ಕಿ.ಮೀ., ಯಲ್ಲಾಪುರಕ್ಕೆ ಸುಮಾರು 100 ಕಿ.ಮೀ ಸಂಚರಿಸಬೇಕಿದೆ. ಇಡೀ ‍ಪ್ರದೇಶವೇ ದ್ವೀಪದಂತಾಗಿದೆ.

ಯಲ್ಲಾಪುರ ತಾಲ್ಲೂಕಿನ ಕಳಚೆಯಲ್ಲಿ ಶುಕ್ರವಾರ ಸಂಜೆ ಮನೆ ಮೇಲೆ ಗುಡ್ಡ ಕುಸಿದು ದೇವಕಿ ನಾರಾಯಣ ಗಾಂವ್ಕರ (48) ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ಇಬ್ಬರು ಮಕ್ಕಳು ಮತ್ತು ಮೂವರು ದೊಡ್ಡವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಈ ನಡುವೆ, ಶುಕ್ರವಾರ ಕುಸಿದಿದ್ದ ಅರಬೈಲ್ ಘಟ್ಟದಲ್ಲಿ ಶನಿವಾರ ಮತ್ತೆ ಭೂಕುಸಿತವಾಗಿದೆ. ಇದರಿಂದ ರಾಷ್ಟ್ರಿಯ ಹೆದ್ದಾರಿ 63 ಮತ್ತಷ್ಟು ಅಪಾಯದಲ್ಲಿದೆ. ಈ ರಸ್ತೆಯಲ್ಲಿ ಮುಂದಿನ ಸೂಚನೆಯವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ತಳಕೆಬೈಲ್‌ನಲ್ಲಿ ಭೂಕುಸಿತದಿಂದಾಗಿ ಕೈಗಾ– ಇಳಕಲ್ ರಾಜ್ಯ ಹೆದ್ದಾರಿ ಸಂಪೂರ್ಣ ಕುಸಿದು ಹೋಗಿದೆ. ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದ ನಾಲ್ಕು ಕಡೆಗಳಲ್ಲಿ ಗುಡ್ಡ, ಒಂದು ಕಡೆ ರಾಜ್ಯ ಹೆದ್ದಾರಿ ರಸ್ತೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT