ಬೆಂಗಳೂರು: ‘ಕಾಲಮಿತಿಯೊಳಗೆ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಿದರೂ ಹಣ ಬಿಡುಗಡೆ ಮಾಡಲು ಅಧಿಕಾರಿಗಳು ಶೇ 7.5 ರಿಂದ 10 ರಷ್ಟು ಲಂಚ ಕೇಳುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಗುತ್ತಿಗೆದಾರರಿಗೆ ₹22 ಸಾವಿರ ಕೋಟಿ ಹಣ ಬಿಡುಗಡೆಯಾಗಬೇಕಿದೆ’ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕೋಪಯೋಗಿ ಇಲಾಖೆಯಲ್ಲಿ ₹5 ಸಾವಿರ ಕೋಟಿ, ಬೃಹತ್ ಮತ್ತು ಮಧ್ಯಮ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ₹8 ಸಾವಿರ ಕೋಟಿ ಮತ್ತು ಬಿಬಿಎಂಪಿಯಲ್ಲಿ ₹ 3 ಸಾವಿರ ಕೋಟಿ ಹಣ ಬರಬೇಕಿದೆ. ಅತಿ ಹೆಚ್ಚು ಕಾಮಗಾರಿಗಳು ನಡೆದಿದ್ದು ಸಹ ಈ ಮೂರು ಇಲಾಖೆಗಳಲ್ಲಿಯೇ. ಒಟ್ಟು ₹16 ಸಾವಿರ ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
‘ಹಣ ಬಿಡುಗಡೆಯಲ್ಲಿ ಜ್ಯೇಷ್ಠತೆಯನ್ನು ಪಾಲಿಸುತ್ತಿಲ್ಲ. ಸಚಿವರು, ಶಾಸಕರು ಮತ್ತು ಹಿರಿಯ ಅಧಿಕಾರಿಗಳು ಸೂಚಿಸುವವರಿಗೆ ಮಾತ್ರ ಬಾಕಿ ಮೊತ್ತ ಬಿಡುಗಡೆ ಮಾಡಲಾಗುತ್ತಿದೆ. ಶೇ 80ರಷ್ಟು ಮೊತ್ತವನ್ನು ಹಿರಿತನದ ಆಧಾರದ ಮೇಲೆ ಮತ್ತು ಶೇ 20 ರಷ್ಟು ಮೊತ್ತವನ್ನು ವಿವೇಚನಾ ಕೋಟಾದಡಿಯಲ್ಲಿ ಬಿಡುಗಡೆ ಮಾಡಬೇಕೆಂಬ ನಿಯಮವನ್ನು ಗಾಳಿಗೆ ತೋರಲಾಗಿದೆ’ ಎಂದು ವಿವರಿಸಿದರು.
‘ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸುವ ಮುನ್ನವೇ ತ್ವರಿತವಾಗಿ ಬಾಕಿ ಮೊತ್ತ ಪಾವತಿಸಬೇಕು. ಒಂದು ವಾರದೊಳಗೆ ಹಣ ಭರವಸೆ ಪತ್ರ (ಎಲ್‌ಒಸಿ) ಬಿಡುಗಡೆಯಾಗಲಿದ್ದು, ಅದರಲ್ಲಿ ಸೇವಾ ಹಿರಿತನವನ್ನು ಪಾಲಿಸಬೇಕು. ಇಲ್ಲದಿದ್ದರೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು. ನಂತರ ಮುಖ್ಯಮಂತ್ರಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.
‘ಹೊಸ ತಂತ್ರಜ್ಞಾನ ರೂಪಿಸಲು ಆಗ್ರಹ’
‘ಕಾಮಗಾರಿಗಳು ಪೂರ್ಣಗೊಂಡ ನಂತರ ಬಿಲ್ ಪಾವತಿಗೆ ಹೊಸ ತಂತ್ರಜ್ಞಾನವನ್ನು ರೂಪಿಸಿಕೊಳ್ಳಬೇಕು. ಆಯಾ ಇಲಾಖೆಗಳ ಕಚೇರಿಗಳಲ್ಲಿ ಜ್ಯೇಷ್ಠತಾ ಪಟ್ಟಿಯನ್ನು ನಾಮಫಲಕದಲ್ಲಿ ಅಳವಡಿಸಿ ಎಷ್ಟು ಮೊತ್ತ ಬಾಕಿ ಇದೆ, ಎಷ್ಟು ಹಣ ಬಿಡುಗಡೆ ಮಾಡಲಾಗುತ್ತದೆ ಎಂಬ ಮಾಹಿತಿ ಪ್ರಕಟಿಸಬೇಕು. ಎಲ್ಲ ಇಲಾಖೆಗಳ ಪೂರ್ಣಗೊಳಿಸಿದ, ಚಾಲ್ತಿಯಲ್ಲಿರುವ ಮತ್ತು ಮುಂಬರುವ ಕಾಮಗಾರಿಗಳ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಿ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ನಿಗದಿಪಡಿಸಬೇಕು’. ಎಂದು ಡಿ. ಕೆಂಪಣ್ಣ ಸಲಹೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.