ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಸಭೆ, ನಗರಸಭೆ ಆಸ್ತಿ ತೆರಿಗೆ ಹೆಚ್ಚಳ ಮಸೂದೆಗೆ ವಿಧಾನಸಭೆ ಒಪ್ಪಿಗೆ

Last Updated 4 ಫೆಬ್ರುವರಿ 2021, 15:59 IST
ಅಕ್ಷರ ಗಾತ್ರ

ಬೆಂಗಳೂರು: ಪುರಸಭೆ ಮತ್ತು ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ಉದ್ದೇಶದ ಎರಡು ಮಸೂದೆಗಳಿಗೆ ಕಾಂಗ್ರೆಸ್‌ ವಿರೋಧದ ಮಧ್ಯೆ ವಿಧಾನಸಭೆ ಗುರುವಾರ ಒಪ್ಪಿಗೆ ನೀಡಿತು.

ಆಸ್ತಿ ತೆರಿಗೆ ಹೆಚ್ಚಿಸುವ ಉದ್ದೇಶದ ಕರ್ನಾಟಕ ಪೌರಸಭೆಗಳ (ಎರಡನೇ ತಿದ್ದುಪಡಿ) ಮಸೂದೆ 2021 ಮತ್ತು ಕರ್ನಾಟಕ ನಗರಪಾಲಿಕೆಗಳ(ತಿದ್ದುಪಡಿ) ಮಸೂದೆ 2021 ಈಗಾಗಲೇ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಇವುಗಳಿಗೆ ಸದನದ ಒಪ್ಪಿಗೆ ಪಡೆಯಲಾಯಿತು.

ಮಸೂದೆಗಳ ಕುರಿತು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರ ಪರವಾಗಿ ವಿವರಣೆ ನೀಡಿದ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು, ಕೇಂದ್ರ ಸರ್ಕಾರ ನಿವ್ವಳ ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಆಧಾರದಲ್ಲಿ ಸಾಲ ಪಡೆಯಲು ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ಅನುಮತಿ ನೀಡಿರುವುದರಿಂದ ಆಸ್ತಿ ತೆರಿಗೆ ಪರಿಷ್ಕರಿಸಲು ಕರಾರು ವಿಧಿಸಿತ್ತು ಆ ಕಾರಣಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

ಪುರಸಭೆಗಳ ಸಬಲೀಕರಣ ಉದ್ದೇಶಕ್ಕಾಗಿ ಸ್ವತ್ತು ತೆರಿಗೆ ಪರಿಷ್ಕರಿಸುವುದು ಅಗತ್ಯವಾಗಿದೆ. 2020–21ನೇ ಸಾಲಿಗೆ ನಿವ್ವಳ ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) ಶೇ 0.25 ಹೆಚ್ಚುವರಿಸಾಲ ಪಡೆವ ಮಿತಿಗೆ ರಾಜ್ಯ ಸರ್ಕಾರ ಅರ್ಹವಾಗಲಿದೆ ಎಂದು ಶೆಟ್ಟರ್‌ ತಿಳಿಸಿದರು.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಅನ್ವಯ ಶೇ 3 ರಿಂದ 5 ರಷ್ಟು ತೆರಿಗೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈಗ ಚಾಲ್ತಿಯಲ್ಲಿರುವ ಮಾರುಕಟ್ಟೆ ಮಾರ್ಗಸೂಚಿ ಮೌಲ್ಯಗಳಿಗೆ ಸ್ವತ್ತು ತೆರಿಗೆಯ ಮೂಲವನ್ನು ಜೋಡಿಸಲಾಗುವುದು. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ರಾಜಸ್ವವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ತೆರಿಗೆ ಪರಿಷ್ಕರಣೆ ಈ ವರ್ಷ ಜಾರಿ ಆಗುವುದಿಲ್ಲ. ಮುಂದಿನ ವರ್ಷದಿಂದ ಜಾರಿ ಆಗಲಿದೆ. ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವುದು ಅಗತ್ಯವಾಗಿದೆ. ಅಭಿವೃದ್ಧಿಗೆ ಸಂಪನ್ಮೂಲ ಸಂಗ್ರಹ ಅಗತ್ಯವಾಗಿದೆ. ಇದಕ್ಕಾಗಿ ತೆರಿಗೆ ಹೆಚ್ಚಿಸುವುದೂ ಅನಿವಾರ್ಯ ಎಂದು ನಾಗರಾಜ್‌ ಪ್ರತಿಪಾದಿಸಿದರು.

ಕೋವಿಡ್‌ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚಿಸುವ ಅಗತ್ಯ ಏನಿದೆ. ಜನರ ಬಳಿ ಆದಾಯವಿಲ್ಲ. ತರಾತುರಿಯಲ್ಲಿ ಸುಗ್ರೀವಾಜ್ಞೆ ತರುವ ಅಗತ್ಯ ಏನಿತ್ತು ಎಂದು ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ಕಾಂಗ್ರೆಸ್‌ನ ಡಾ.ಯತೀಂದ್ರ ಮಾತನಾಡಿ, ನಗರಪಾಲಿಕೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಪ್ರಮಾಣ ಎಷ್ಟು ಹೆಚ್ಚಿಸಲಾಗುತ್ತದೆ ಎಂಬ ಮಾಹಿತಿ ನೀಡಬೇಕು ಎಂದು ಹೇಳಿದರು.

ಹುಣಸೂರು ಶಾಸಕ ಮಂಜುನಾಥ್ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಶೇ 30 ರಷ್ಟು ಆಸ್ತಿ ತೆರಿಗೆ ಸಂಗ್ರಹವಾಗುತ್ತಿಲ್ಲ. ಈ ಪ್ರಮಾಣವನ್ನು ಶೇ 70 ರಷ್ಟು ಹೆಚ್ಚಿಸಲು ಕ್ರಮ ತೆಗೆದುಕೊಂಡರೆ ಸಾಕು. ಆಗ ಆದಾಯ ಹೆಚ್ಚುತ್ತದೆ. ತರಿಗೆ ಪರಿಷ್ಕರಿಸುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.

ಶೇ 5 ರಿಯಾಯ್ತಿ 1 ತಿಂಗಳ ವಿಸ್ತರಣೆ

2020–21 ನೇ ಸಾಲಿನ ಆಸ್ತಿ ತೆರಿಗೆ ಪಾವತಿಯ ಮೇಲೆ ಶೇ 5 ರಿಯಾಯ್ತಿ ನೀಡುವ ಕಾಲಾವಧಿಯನ್ನು ಒಂದು ತಿಂಗಳ ಅವಧಿಗೆ ವಿಸ್ತರಿಸಲಾಗಿದ್ದು, ಈ ಸಂಬಂಧ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ವಿಧಾನಸಭೆ ಒಪ್ಪಿಗೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT