ಬುಧವಾರ, ಮೇ 18, 2022
23 °C
ಉಪಕಾರ್ಯದರ್ಶಿ ವರ್ಗಾವಣೆ ತಡೆಯಲು ರೇಣುಕಾಚಾರ್ಯ ಶಿಫಾರಸು

ಸಿಎಂ ದಾರಿ ತಪ್ಪಿಸಿದರೇ ರಾಜಕೀಯ ಕಾರ್ಯದರ್ಶಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಆಡಳಿತ ಸೇವೆಯ (ಕೆಎಎಸ್) ಅಧಿಕಾರಿ ಯೊಬ್ಬರ ವರ್ಗಾವಣೆ ಆದೇಶ ರದ್ದುಪಡಿಸಿ, ಅವರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲೇ ಮುಂದುವರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅವರ ರಾಜಕೀಯ ಕಾರ್ಯದರ್ಶಿ ಎಂ.ರೇಣುಕಾಚಾರ್ಯ ಪತ್ರ ಬರೆದಿದ್ದಾರೆ. ಈ ಶಿಫಾರಸು ಪತ್ರದಲ್ಲಿ ಅವರು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೆಎಎಸ್ ಹಿರಿಯ ಶ್ರೇಣಿ ಅಧಿಕಾರಿ ಎಲಿಷಾ ಆ್ಯಂಡ್ರೂಸ್‌ ಅವರು 2020ರ ಮಾರ್ಚ್‌ 5ರಂದು ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ–1 ಹುದ್ದೆಗೆ ವರ್ಗವಾಗಿದ್ದರು. ಬಳಿಕ ಅವರನ್ನು ಇಲಾಖೆಯ ಉಪಕಾರ್ಯದರ್ಶಿ –3  ಹುದ್ದೆಗೆ ನಿಯುಕ್ತಿಗೊಳಿಸಲಾಗಿತ್ತು. ಎರಡು ವರ್ಷಗಳಿಂದ ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಹುದ್ದೆಯಲ್ಲೇ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಉಪ ಆಯುಕ್ತರಾಗಿ (ಆಡಳಿತ) ಸರ್ಕಾರ ಇತ್ತೀಚೆಗೆ ವರ್ಗಾವಣೆ ಮಾಡಿದೆ. 

ಎಲಿಷಾ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರಿಸುವಂತೆ ರೇಣುಕಾಚಾರ್ಯ ಅವರು ಮುಖ್ಯಮಂತ್ರಿ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಎಲಿಷಾ ಅವರು ಐದು ತಿಂಗಳುಗಳಿಂದ ನಗರಾಭಿವೃದ್ಧಿ ಇಲಾಖೆಯ ಉಪಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ ಎಂದು ರೇಣುಕಾಚಾರ್ಯ ಅವರು ಆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಶಿಫಾರಸ್ಸನ್ನು ಆಧರಿಸಿ ಮುಖ್ಯಮಂತ್ರಿ ಅವರು ಎಲಿಷಾ ಅವರನ್ನು ಈಗಿರುವ ಹುದ್ದೆಯಲ್ಲೇ ಮುಂದುವರಿಸುವಂತೆ ಟಿಪ್ಪಣಿ ಬರೆದಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಉಪಾಯುಕ್ತರಾಗಿ ವರ್ಗವಾದ ಬಳಿಕವೂ ಎಲಿಷಾ ಅವರು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಹುದ್ದೆಯಲ್ಲೇ ಮುಂದುವರಿದಿದ್ದಾರೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಅವರು ಕೆಎಟಿ ಮೊರೆ ಹೋಗಿದ್ದಾರೆ.

‘ಬಿಬಿಎಂಪಿ ಎಂಜಿನಿಯರ್‌ಗಳ ಬಡ್ತಿಗೆ ಮುಖ್ಯಮಂತ್ರಿ ಹೆಸರಿನಲ್ಲೇ ₹4.50 ಕೋಟಿ ಲಂಚ ಪಡೆಯಲಾಗಿದೆ. ಇದರಲ್ಲಿ ನಗರಾಭಿವೃದ್ಧಿ ಇಲಾಖೆಯ ಕೆಲವು ಅಧಿಕಾರಿಗಳು ಭಾಗಿಯಾಗಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಎಸ್‌ಆರ್‌) ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ದೂರು ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು