ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ವಿಭಜನೆ ಮಾರಕ: ಚರ್ಚೆಗೆ ಗ್ರಾಸವಾದ ಕಿರಣ್ ಮಜುಂದಾರ್ ಷಾ ಟ್ವೀಟ್‌

ಪ್ರಗತಿಪರ ನಾಯಕ ಬೊಮ್ಮಾಯಿ ವಿವಾದ ಬಗೆಹರಿಸಲಿ: ಕಿರಣ್ ಮಜುಂದಾರ್ ಷಾ
Last Updated 31 ಮಾರ್ಚ್ 2022, 18:39 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಿಜಾಬ್‌ ವಿವಾದ, ಮುಸ್ಲಿಂ ವರ್ತಕರಿಗೆ ಆರ್ಥಿಕ ಬಹಿಷ್ಕಾರದ ಬಳಿಕ ಹಲಾಲ್ ಕಟ್‌ಗೆ ವಿರೋಧದ ಸರಣಿ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ, ಉದ್ಯಮಿ ಕಿರಣ್ ಮಜುಂದಾರ್ ಷಾ ಅವರು ‘ಧಾರ್ಮಿಕ ವಿಭಜನೆಯನ್ನು ದಯವಿಟ್ಟು ತಡೆಯಿರಿ’ ಎಂದು ಟ್ವೀಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಧ್ರುವೀಕರಣವನ್ನು ಟೀಕಿಸಿರುವ ಬಯೊಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟ್ವಿಟರ್ ಖಾತೆಯನ್ನು ಟ್ಯಾಗ್ ಮಾಡಿ ಸರಣಿ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗಳನ್ನು ನೂರಾರು ಜನ ರೀ–ಟ್ವೀಟ್ ಮಾಡಿದ್ದರೆ, ಅನೇಕರು ಆಕ್ಷೇಪಗಳನ್ನೂ ವ್ಯಕ್ತಪಡಿಸಿದ್ದಾರೆ.

ಕಿರಣ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಬೊಮ್ಮಾಯಿ, ‘ಎಲ್ಲರೂ ಸಂಯಮದಿಂದ ವರ್ತಿಸಬೇಕು’ ಎಂದು ಮನವಿ ಮಾಡಿದ್ದಾರೆ.

ಟ್ವೀಟ್‌ಗಳಲ್ಲಿ ಏನಿದೆ?: ‘ಕರ್ನಾಟಕವೂ ಸದಾ ಎಲ್ಲರನ್ನು ಒಳಗೊಳ್ಳುವ ಆರ್ಥಿಕ ಅಭಿವೃದ್ಧಿಯನ್ನು ಪಾಲಿಸುತ್ತಿದೆ. ನಾವು ಕೋಮು ಆಧರಿತ ಬಹಿಷ್ಕಾರಕ್ಕೆ ಅವಕಾಶ ಕಲ್ಪಿಸಬಾರದು. ಐಟಿ–ಬಿಟಿ ಕ್ಷೇತ್ರದಲ್ಲಿ ಕೋಮುವಾದಕ್ಕೆ ಅವಕಾಶ ಕಲ್ಪಿಸಿದರೆ, ನಮ್ಮ ಜಾಗತಿಕ ನಾಯಕತ್ವವನ್ನೇ ಅದು ನಾಶಪಡಿಸಬಹುದು’ ಎಂದು ಕಿರಣ್ ಮಜುಂದಾರ್ ಷಾ ಎಚ್ಚರಿ ಸಿದ್ದಾರೆ.

‘ನಾನೂ ಹೆಮ್ಮೆಯ ಕನ್ನಡತಿ. ಇಂತಹ ಘಟನೆಗಳಿಂದ ಆರ್ಥಿಕ ಬೆಳವಣಿಗೆಯು ಹಾದಿ ತಪ್ಪುವುದನ್ನು ನೋಡಲು ನಾನು ಬಯಸುವುದಿಲ್ಲ. ಎಲ್ಲ ಪಕ್ಷಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತ ಆಗಬೇಕಿದೆ. ಬೊಮ್ಮಾಯಿ ಅವರು ಪ್ರಗತಿಪರ ನಾಯಕ. ಅವರು ಈ ವಿವಾದವನ್ನು ಆದಷ್ಟು ಬೇಗ ಶಾಂತಿಯುತವಾಗಿ ಬಗೆಹರಿಸುತ್ತಾರೆ ಎಂಬ ವಿಶ್ವಾಸ ವಿದೆ’ ಎಂದೂ ಅವರುಪ್ರತಿಪಾದಿಸಿದ್ದಾರೆ.

‘ನಾನು ಯಾವುದೇ ರಾಜಕೀಯ ಉದ್ದೇಶದಿಂದ ಈ ಹೇಳಿಕೆ ನೀಡುತ್ತಿಲ್ಲ. ಇತ್ತೀಚಿಗೆ ಹೆಚ್ಚುತ್ತಿರುವ ಕೆಲವು ಘಟನೆಗಳು ಅನಗತ್ಯವಾಗಿ ಗಮನ ಸೆಳೆ ಯುತ್ತಿದ್ದು, ಹಾಗಾಗಿ ನಾನು ಈ ಹೇಳಿಕೆ ನೀಡಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಈ ವಿವಾದ ಶಾಂತಿಯುತವಾಗಿ ಬಗೆಹರಿಯಲಿದೆ ಎಂಬ ನಂಬಿಕೆಯೂ ಇದೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ‘ಮಸೀದಿಗಳ ಬಳಿ ಅನೇಕ ಹಿಂದೂ ವರ್ತಕರ ಮಳಿಗೆಗಳು ಇರುವುದನ್ನು ಬೆಂಗಳೂರಿನಾದ್ಯಂತ ನಾನು ನೋಡಿದ್ದೇನೆ. ವರ್ತಕರನ್ನು ನಾವು ಧರ್ಮದ ಆಧಾರದಲ್ಲಿ ಗುರುತಿಸುವುದು ಶುರುವಾಗಿದ್ದು ಯಾವಾಗ’ ಎಂದೂ ಅವರು ಪ್ರಶ್ನಿಸಿದ್ದಾರೆ.

ಶಾಂತಿ–ಸಾಮರಸ್ಯ ಕಾಪಾಡಿ: ಸಿ.ಎಂ

ಬೆಂಗಳೂರು: ರಾಜ್ಯದಲ್ಲಿ ಶಾಂತಿ–ಸುವ್ಯವಸ್ಥೆ ಮತ್ತು ಸಾಮರಸ್ಯ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಕೋಮು ಧ್ರುವೀಕರಣ ಆಗುತ್ತಿರುವ ಬಗ್ಗೆ ಉದ್ಯಮಿ ಕಿರಣ್‌ ಮಜುಂದಾರ್‌ ಷಾ ಅವರು ಟ್ವೀಟ್‌ ಮಾಡಿ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ಬೊಮ್ಮಾಯಿ ಈ ಕರೆ ಕೊಟ್ಟಿದ್ದಾರೆ.

‘ಶಾಂತಿ ಮತ್ತು ಪ್ರಗತಿಗೆ ಕರ್ನಾಟಕ ಹೆಸರುವಾಸಿ. ಯಾರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲರೂ ಸಂಯಮದಿಂದ ವರ್ತಿಸಬೇಕು.ಸಮವಸ್ತ್ರದ ವಿಷಯ ಈಗಾಗಲೇ ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದೆ. ಬೇರೆ ಬೇರೆ ವಿಷಯಗಳ ಬಗ್ಗೆ ನಮ್ಮ ನಮ್ಮ ನಂಬಿಕೆಗಳ ಆಧಾರದ ಮೇಲೆ ನಾವೆಲ್ಲರೂ ಬದುಕು ನಡೆಸುತ್ತಿದ್ದೇವೆ’ ಎಂದರು.

ಸಾಮಾಜಿಕವಾಗಿ ಹಲವಾರು ಸಮಸ್ಯೆಗಳು ಉದ್ಭವವಾಗುವ ಸಂದರ್ಭದಲ್ಲಿ ಕುಳಿತು ಪರಸ್ಪರ ಚರ್ಚೆ ಮಾಡಿ ಬಗೆಹರಿಸಲು ಸಾಧ್ಯವಿದೆ ಎಂದೂ ಅವರು ಹೇಳಿದರು. ‘ರಾಜ್ಯ ಸರ್ಕಾರ ಸಮವಸ್ತ್ರ ವಿವಾದ ಸೇರಿದಂತೆಎಲ್ಲ ವಿಚಾರಗಳನ್ನು ಅತ್ಯಂತ ದಕ್ಷತೆಯಿಂದ ನಿಭಾಯಿಸಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯ. ಇದರಲ್ಲಿ ಗಂಡಸುತನದ ಪ್ರಶ್ನೆಯೇ ಇಲ್ಲ’ ಎಂದು ಬೊಮ್ಮಾಯಿ ಹೇಳಿದರು.

ಕುಮಾರಸ್ವಾಮಿ ಹೇಳಿಕೆಗೆ ತುಮಕೂರಿನಲ್ಲಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ಅವರು ಹೇಳಿದ್ದಕ್ಕೆ
ಉತ್ತರ ಕೊಡೋಕೆ ಆಗಲ್ಲ. ರಾಜ್ಯದಲ್ಲಿ ಸಾಮರಸ್ಯ ಕಾಪಾಡುವ ಕೆಲಸವನ್ನು ಸಮರ್ಥವಾಗಿ ಮಾಡುತ್ತಿದ್ದೇವೆ’
ಎಂದರು.

‘ಗಂಡಸುತನ ಇದ್ದರೆ ಕ್ರಮ ಜರುಗಿಸಿ’

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗಂಡಸುತನ ಇದ್ದರೆ ಸಮಾಜದ ಶಾಂತಿ ಕದಡುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಬೆಳಿಗ್ಗೆ ರಾಮನಗರದಲ್ಲಿ ಹೀಗೆ ಹೇಳಿದ್ದ ಕುಮಾರಸ್ವಾಮಿ ಅವರು ‘ಸಹಜವಾದ ಆಕ್ರೋಶ ವ್ಯಕ್ತಪಡಿಸುವಾಗ ಬಾಯಿ ತಪ್ಪಿನಿಂದ ಕೆಲವು ಪದಗಳು ಬರುತ್ತವೆ. ಗಂಡಸುತನ’ ಪದ ಬಳಕೆಗೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದರು.

ಬೆಳಿಗ್ಗೆ ಹೇಳಿದ್ದೇನು?

‘ಹಿಂದೂ ಪರಿಷತ್, ಬಜರಂಗದಳದವರಿಗೆ ರೈತರ ಬದುಕು ಗೊತ್ತಿದೆಯಾ? ಈಗ ಇವರು ಬಂದು ಹಲಾಲ್ ಕಟ್ - ಜಟ್ಕಾ ಕಟ್ ಅಂತಿದ್ದಾರೆ. ನಮ್ಮ ರೈತರು ಕತ್ತರಿಸುವ ಮಾಂಸ ಸ್ವಚ್ಚ ಮಾಡಲು ಅದೇ ಸಮಾಜದವರೇ ಬರಬೇಕು. ರೈತರಿಂದ ಮಾವು, ದ್ರಾಕ್ಷಿ, ರೇಷ್ಮೆ ಖರೀದಿ ಮಾಡಲಿಕ್ಕೆ ಈ ಪೋಲಿಗಳು ಬರುತ್ತಾರಾ’ ಎಂದು ಪ್ರಶ್ನಿಸಿದರು.

‘ಇವರ ಹೊಟ್ಟೆಪಾಡಿಗೆ, ದೇಶ ಹಾಳು ಮಾಡಲು ಇಂತಹ ವಿಚಾರ ಇಟ್ಟುಕೊಂಡು ಬಂದಿದ್ದಾರೆ. ಎಷ್ಟು ವರ್ಷದಿಂದ ನಾವೆಲ್ಲ ಹಲಾಲ್‌ ಮಾಡಿದ ಮಾಂಸ ತಿಂದೇ ಬದುಕುತ್ತಿದ್ದೇವೆ.ಆಸ್ಪತ್ರೆಗಳಲ್ಲಿ ಆಮ್ಲಜನಕ ಇಲ್ಲದೇ ಜನ ಸತ್ತರು. ಆ ಸಂದರ್ಭವನ್ನು ಸರ್ಕಾರ ಹೇಗೆ ನಿರ್ವಹಣೆ ಮಾಡಿತು ಎನ್ನುವುದನ್ನು ನಾವೆಲ್ಲ ನೋಡಿದ್ದೇವೆ. ಬಿಜೆಪಿ ಸರ್ಕಾರದ ಯೋಗ್ಯತೆಗೆ ಆಸ್ಪತ್ರೆ ನಿರ್ವಹಣೆ ಮಾಡಲು ಅಗಲಿಲ್ಲ. ಆಗ ವಿಶ್ವ ಹಿಂದೂ ಪರಿಷತ್, ಬಜರಂಗದಳದವರು ಎಲ್ಲಿದ್ದರು’ ಎಂದು ಕೇಳಿದರು.

‘ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಏನು ಗೊತ್ತಿಲ್ಲದಂತೆ ಸರ್ಕಾರ ಮೌನವಾಗಿರಬಾರದು. ಯಾವ ಸಂವಿಧಾನಕ್ಕೆ ಗೌರವ ನೀಡುತ್ತಿದ್ದೀರಿ, ಯಾಕೆ ಅಂಬೇಡ್ಕರ್ ಜಯಂತಿ ಆಚರಿಸುತ್ತೀರಿ? ಅದೆಲ್ಲ ಯಾವ ಪುರುಷಾರ್ಥಕ್ಕೆ? ಇಂಥದ್ದನ್ನು ನಡೆಯಲು ಬಿಟ್ಟು ಸಂವಿಧಾನ, ಅಂಬೇಡ್ಕರ್ ಅವರ ಹೆಸರು ಹೇಳಿದರೆ ಏನು ಪ್ರಯೋಜನ’ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್ ನವರಿಗೆ ಈ ವಿಚಾರದಲ್ಲಿ ಮಾತನಾಡಲು ತಾಕತ್ತಿಲ್ಲ. ಮಾತನಾಡಿದರೆ ಹಿಂದೂಗಳು ವೋಟ್ ಹಾಕ್ತಾರೋ ಇಲ್ಲವೋ ಎಂಬ ಭಯ ಅವರನ್ನು ಕಾಡುತ್ತಿದೆ. ಆದರೆ ನನಗೆ ಅದಕ್ಕಿಂತ ಸಮಾಜದ ಶಾಂತಿ ಮುಖ್ಯ. ಉತ್ತರ ಪ್ರದೇಶದಲ್ಲಿ ನಿಮ್ಮ ಆಟ ಆಡಿಕೊಳ್ಳಿ, ಇಲ್ಲಿ ಬೇಡ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT