ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ರೈಲು ವಿಳಂಬದಿಂದ ಪರೀಕ್ಷೆ ವಂಚಿತ ಎಲ್ಲರಿಗೂ ಮರು ಪರೀಕ್ಷೆ

Last Updated 19 ಡಿಸೆಂಬರ್ 2021, 10:53 IST
ಅಕ್ಷರ ಗಾತ್ರ

ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿನ ಸಹಾಯಕ ಎಂಜಿನಿಯರ್‌ (ಸಿವಿಲ್) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇದೇ 14ರಂದು ಆಯೋಜಿಸಿದ್ದ ಪರೀಕ್ಷೆಯಲ್ಲಿ ರೈಲು ವಿಳಂಬದಿಂದ ಬೆಳಗ್ಗಿನ ಅವಧಿಯ ಪರೀಕ್ಷೆ ಹಾಜರಾಗಲು ಸಾಧ್ಯವಾಗದ, ಆದರೆ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ ಹಾಜರಾದ ಎಲ್ಲ ಅಭ್ಯರ್ಥಿಗಳಿಗೆ ಇದೇ 29ರಂದು ಬೆಂಗಳೂರಿನಲ್ಲಿ ಮರು ಪರೀಕ್ಷೆ ನಡೆಸಲು ಕೆಪಿಎಸ್‌ಸಿ ನಿರ್ಧರಿಸಿದೆ.

ಹಾಸನ–ಸೊಲ್ಲಾಪುರ ಎಕ್ಸ್‌ಪ್ರೆಸ್‌ ಮತ್ತು ಉದ್ಯಾನ ಎಕ್ಸ್‌ಪ್ರೆಸ್ ರೈಲು ನಿಗದಿತ ವೇಳೆಗೆ ಕಲಬುರಗಿ ಪರೀಕ್ಷಾ ಕೇಂದ್ರಕ್ಕೆ ತಲುಪಲು ತಡವಾದ ಕಾರಣ ಅದರಲ್ಲಿ ಪ್ರಯಾಣಿಸಿದ ಅಭ್ಯರ್ಥಿಗಳಿಗೆ ಬೆಳಗ್ಗಿನ ಪರೀಕ್ಷೆಯನ್ನು (ಸಾಮಾನ್ಯ ಪತ್ರಿಕೆ–1) ಮತ್ತೆ ನಡೆಸುವುದಾಗಿ ಕೆಪಿಎಸ್‌ಸಿ ತಿಳಿಸಿತ್ತು. ಅಲ್ಲದೆ, ಇದೇ 22ರ ಒಳಗಾಗಿ ರೈಲಿಗಳಲ್ಲಿ ಪ್ರಯಾಣಿಸಿದ ಟಿಕೆಟ್‌ ಮತ್ತು ಆಯೋಗ ನೀಡಿರುವ ಪ್ರವೇಶಪತ್ರವನ್ನು ಸಲ್ಲಿಸುವಂತೆಯೂ ಸೂಚಿಸಿತ್ತು.

ಅದೇ ದಿನ, ಬೀದರ್‌–ಯಶವಂತಪುರ ರೈಲು ಕೂಡಾ ವಿಳಂಬ ಆಗಿದ್ದರಿಂದ, ಅದರಲ್ಲಿ ಪ್ರಯಾಣಿಸಿದ ಅಭ್ಯರ್ಥಿಗಳಿಗೆ ಬೆಂಗಳೂರು ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗಿನ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಕೆಪಿಎಸ್‌ಸಿಗೆ ಇ–ಮೇಲ್‌ ಮಾಡಿರುವ ಹಲವು ಅಭ್ಯರ್ಥಿಗಳು, 'ಮಧ್ಯಾಹ್ನದ ಪರೀಕ್ಷೆ ಮಾತ್ರ ಬರೆದಿರುವ ನಮಗೂ ಇದೇ 29ರಂದು ನಡೆಯಲಿರುವ ಬೆಳಗ್ಗಿನ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು' ಎಂದು ಮನವಿ ಸಲ್ಲಿಸಿದ್ದರು.

'ಈ ಹಿನ್ನೆಲೆಯಲ್ಲಿ, ಬೀದರ್‌–ಯಶವಂತಪುರ ರೈಲು ವಿಳಂಬದಿಂದ ಬೆಳಗ್ಗಿನ ಪರೀಕ್ಷೆ ಬರೆಯಲು ಸಾಧ್ಯವಾಗದವರು ಮತ್ತು ಇದೇ ರೀತಿ ಅದೇ ದಿನ ಬೇರೆ ಯಾವುದಾದರೂ ರೈಲು ವಿಳಂಬದಿಂದ ಬೆಳಗ್ಗಿನ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಇದೇ 29ರಂದು ಮರು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ' ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದ್ದಾರೆ.

'ರೈಲು ವಿಳಂಬದಿಂದ ಬೆಳಗ್ಗಿನ ಅವಧಿ ಪರೀಕ್ಷೆಯಿಂದ ವಂಚಿತರಾಗಿ, ಮಧ್ಯಾಹ್ನದ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಇದೇ 22ರ ಒಳಗಾಗಿ ತಡವಾಗಿ ತಲುಪಿದ ರೈಲಿನ ಟಿಕೆಟ್‌ನ ಪ್ರತಿ ಮತ್ತು ಆಯೋಗ ನೀಡಿರುವ ಪ್ರವೇಶಪತ್ರದ ಪ್ರತಿಯನ್ನು ಕಡ್ಡಾಯವಾಗಿ ಆಯೋಗಕ್ಕೆ ತಲುಪಿಸಬೇಕು. ಒಂದು ವೇಳೆ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ' ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT