ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಟಿಸಿಎಲ್ | ಜೆಇ, ಎಇ: 30,933 ಅರ್ಜಿ ತಿರಸ್ಕೃತ!

1,492 ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ 3,97,315 ಅಭ್ಯರ್ಥಿಗಳು ಅರ್ಹ
Last Updated 18 ಜುಲೈ 2022, 4:29 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ಕಿರಿಯ ಎಂಜಿನಿಯರ್‌ (ಜೆಇ), ಸಹಾಯಕ ಎಂಜಿನಿಯರ್‌ (ಎಇ) ಮತ್ತು ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ನಡೆಯುವ ಪರೀಕ್ಷೆಗೆ ಸಲ್ಲಿಕೆಯಾದ ಒಟ್ಟು ಅರ್ಜಿಗಳಲ್ಲಿ 3.97 ಲಕ್ಷ ಅರ್ಜಿಗಳು ಸ್ವೀಕೃತಗೊಂಡಿವೆ.

ಈ ಪೈಕಿ, ಜೆಇ ಮತ್ತು ಎಇ ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ 30,933 ತಿರಸ್ಕೃತಗೊಂಡಿದ್ದು, ಈ ಪಟ್ಟಿಯನ್ನು ನೇಮಕಾತಿ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕೆಪಿಟಿಸಿಎಲ್‌ ನೀಡಿದೆ. ಕಿರಿಯ ಸಹಾಯಕ ಹುದ್ದೆಗಳ ಹಾಲ್‌ ಟಿಕೆಟ್‌ ಇನ್ನೂ ಬಿಡುಗಡೆ ಆಗದಿರುವುದರಿಂದ ಈ ಹುದ್ದೆಗೆ ಸಲ್ಲಿಕೆಯಾದ ಅರ್ಜಿಗಳಲ್ಲಿ ತಿರಸ್ಕೃತ‌ ಅರ್ಜಿಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ಅರ್ಜಿಗಳೂ ತಿರಸ್ಕೃತ ಪಟ್ಟಿಯಲ್ಲಿದೆ. ಪ್ರತಿ ಅರ್ಜಿಗೆ ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳು ₹600, ಪರಿಶಿಷ್ಟ ಸಮುದಾಯ ಅಭ್ಯರ್ಥಿಗಳು ₹ 300 ಶುಲ್ಕ ಪಾವತಿಸಿದ್ದಾರೆ. ಅರ್ಜಿ ತಿರಸ್ಕೃತರಾದವರು ಮತ್ತು ತಾಂತ್ರಿಕ ಕಾರಣಗಳಿಂದ ಹಾಲ್‌ ಟಿಕೆಟ್‌ ಡೌನ್‌ ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುವ ಸಂಭವವಿದೆ.

ಜೆಇ ಮತ್ತು ಎಇ ಹುದ್ದೆಗಳ ನೇಮಕಾತಿಗೆ ಕೆಇಎ ಇದೇ 23 ಮತ್ತು 24 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಮೊದಲ ದಿನ 70 ಕೇಂದ್ರಗಳಲ್ಲಿ ಹಾಗೂ ಎರಡನೇ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ 45 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ಆಗಸ್ಟ್‌ 7 ರಂದು ಪರೀಕ್ಷೆ ನಡೆಯಲಿದೆ.

ಜೆಇ ಮತ್ತು ಎಇ ಹುದ್ದೆಗೆ ಅರ್ಜಿ ಸಲ್ಲಿಸಿ, ಸ್ವೀಕೃತವಾದವರ ಹಾಲ್‌ ಟಿಕೆಟ್‌ನ್ನು ಕೆಇಎ ತನ್ನ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಆದರೆ, ಹಾಲ್‌ ಟಿಕೆಟ್‌ ಡೌನ್‌ ಲೋಡ್‌ ಸಾಧ್ಯ ಆಗುತ್ತಿಲ್ಲ ಎಂದು ಹಲವು ಅಭ್ಯರ್ಥಿಗಳು ದೂರುತ್ತಿದ್ದಾರೆ. ಎಲ್ಲ ದಾಖಲೆಗಳ ಸಹಿತ, ಶುಲ್ಕ ಪಾವತಿಸಿದ್ದರೂ ವೆಬ್‌ಸೈಟ್‌ನಲ್ಲಿ ಹಾಲ್‌ ಟಿಕೆಟ್‌ ಕಾಣುತ್ತಿಲ್ಲ ಎಂದು ಅನೇಕರು ಅಳಲು ತೋಡಿಕೊಂಡಿದ್ದಾರೆ.

‘ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳಲು ಸಾಧ್ಯವಾಗದ ಎಇ ಮತ್ತು ಜೆಇ ಹುದ್ದೆಯ ಅರ್ಜಿದಾರರು ಅವರವರ ಅರ್ಜಿಯಲ್ಲಿ ನಮೂದಿಸಿದ ಜನ್ಮ ದಿನಾಂಕವನ್ನು ಪರಿಶೀಲಿಸಿ, ಅದೇ ಜನ್ಮ ದಿನಾಂಕವನ್ನು ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಲು ನಮೂದಿಸಬೇಕು. ಕೆಇಎ ವೆಬ್‌ ಸೈಟ್‌ನ ಪೋರ್ಟಲ್‌ನಲ್ಲಿ ನೀಡಿದ ತಿರಸ್ಕರಿಸಿದ ಪಟ್ಟಿಯನ್ನು ಪರಿಶೀಲಿಸಿ, ಅರ್ಜಿಯು ಈ ಪಟ್ಟಿಯಲ್ಲಿದ್ದರೆ ಕೆಪಿಟಿಸಿಎಲ್ ಅನ್ನು ಸಂಪರ್ಕಿಸಬೇಕು. ಕೆಪಿಟಿಸಿಎಲ್‌ ನೀಡಿದ ಅಭ್ಯರ್ಥಿಗಳ ಪಟ್ಟಿ ಆಧರಿಸಿ ನಾವು ಸ್ಪರ್ಧಾತ್ಮಕ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ ಮಾಡಿದ್ದೇವೆ’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದರು.

‘ಜೆಇ ಮತ್ತು ಎಇ ಹುದ್ದೆ ಆಕಾಂಕ್ಷಿಗಳು ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡುವಾಗ ಸರ್ವರ್‌ನಲ್ಲಿ ಒತ್ತಡ ಉಂಟಾಗಬಾರದೆಂಬ ಕಾರಣಕ್ಕೆ ಕಿರಿಯ ಸಹಾಯಕ ಹುದ್ದೆ ಅರ್ಜಿ ಸಲ್ಲಿಸಿದ ಪರೀಕ್ಷೆ ಬರೆಯಲು ಅರ್ಹರಾದವರ ಹಾಲ್‌ ಟಿಕೆಟ್‌ ಇನ್ನೂ ಬಿಡುಗಡೆ ಮಾಡಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗೆ ಸೂಚಿಸಿದ್ದ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಕೆಪಿಟಿಸಿಎಲ್‌ ನೇಮಕಾತಿಗೂ ಅಳವಡಿಸಲಾಗಿದೆ. ಆ ಮೂಲಕ, ಯಾವುದೇ ಪರೀಕ್ಷಾ ಅಕ್ರಮಗಳಿಗೆ ಅವಕಾಶ ಆಗದಂತೆ, ಅತ್ಯಂತ ಪಾರದರ್ಶಕವಾಗಿ ಈ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸುತ್ತೇವೆ’ ಎಂದು ರಮ್ಯಾ ವಿವರಿಸಿದರು.‌

‘ತಾಂತ್ರಿಕ ದೋಷ– ಅವಕಾಶ ಕಲ್ಪಿಸಬೇಕು’
‘ಕೆಪಿಟಿಸಿಎಲ್ ವೆಬ್‌ಸೈಟ್‌ನಲ್ಲಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ, ಶುಲ್ಕ ಪಾವತಿಸಿದ ನಂತರ ಅರ್ಜಿಯ ಪ್ರತಿ ಪಡೆಯುವ ವೇಳೆಯಲ್ಲಿ ಮತ್ತೊಮ್ಮೆ ಜಾತಿ ಪ್ರಮಾಣಪತ್ರ ಸಲ್ಲಿಸುವಂತೆ ಕೇಳಿತ್ತು. ಇದನ್ನು ಸಲ್ಲಿಸಲು ಹಲವು ಬಾರಿ ಪ್ರಯತ್ನಿಸಿದರೂ ಅದೇ ಪುನರಾವರ್ತನೆ ಆಗುತ್ತಿತ್ತು. ಈ ತಾಂತ್ರಿಕ ದೋಷದಿಂದ ಅನೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯ ಆಗಿಲ್ಲ. ಈ ಬಗ್ಗೆ ಕೆಪಿಟಿಸಿಎಲ್‌ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಕೋವಿಡ್‌ನಿಂದ ಎರಡು ವರ್ಷ ನೇಮಕಾತಿಗಳೇ ನಡೆದಿರಲಿಲ್ಲ. ಅದರಲ್ಲೂ ಕೆಪಿಟಿಸಿಎಲ್‌ನಲ್ಲಿ ಹಲವು ವರ್ಷಗಳ ಬಳಿಕ ನೇಮಕಾತಿ ನಡೆಯುತ್ತಿದೆ. ತಾಂತ್ರಿಕ ದೋಷದಿಂದ ಅರ್ಜಿ ತಿರಸ್ಕೃತರಾದವರಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು’ ಎಂದು ಅರ್ಜಿ ತಿರಸ್ಕೃತ ಪಟ್ಟಿಯಲ್ಲಿರುವ, ಪರೀಕ್ಷೆ ವಂಚಿತ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT