ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಗುತ್ತಿಗೆ ನೌಕರರ ಕಾಯಮಾತಿ ಇಲ್ಲ: ಈಶ್ವರಪ್ಪ

Last Updated 1 ಜುಲೈ 2021, 19:00 IST
ಅಕ್ಷರ ಗಾತ್ರ

ಬೆಂಗಳೂರು: ‘ಗ್ರಾಮ ಪಂಚಾಯಿತಿ ಗುತ್ತಿಗೆ ನೌಕರರನ್ನು ಕಾಯಂಗೊಳಿಸುವುದಿಲ್ಲ. ಆದರೆ, ಇವರಲ್ಲಿ ಕೋವಿಡ್‌ನಿಂದ ಯಾರಾದರೂ ಮೃತಪಟ್ಟಿದ್ದರೆ ಅವರ ಕುಟುಂಬಕ್ಕೆ ₹ 30 ಲಕ್ಷ ಪರಿಹಾರ ನೀಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಯಂ ನೌಕರರಿಗೂ ಈ ಪರಿಹಾರ ಸಿಗಲಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೋವಿಡ್‌ನಿಂದ 186 ಮಂದಿ ಮೃತಪಟ್ಟಿದ್ದು, ಅವರೆಲ್ಲರಿಗೂ ತಲಾ ₹ 30 ಲಕ್ಷ ಪರಿಹಾರ ನೀಡಲಾಗುವುದು’ ಎಂದರು.

‘ಕೋವಿಡ್‌ ನಿಯಂತ್ರಿಸಲು ಬಳ್ಳಾರಿ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಮಟ್ಟದ ಕಾರ್ಯಪಡೆಯ ಜೊತೆ, 50 ಮನೆಗಳಿಗೆ ಒಂದು ಸಮಿತಿ ರಚನೆ ಮಾಡಲಾಗಿದೆ. ಈ ಕಾರ್ಯವನ್ನು ಕೇಂದ್ರ ಸರ್ಕಾರ ಅಭಿನಂದಿಸಿದೆ’ ಎಂದರು.

ಇಲಾಖೆಯ ಸಾಧನೆಯ ಬಗ್ಗೆ ವಿವರಿಸಿದ ಈಶ್ವರಪ್ಪ, ‘ಜಲಜೀವನ್ ಮಿಷನ್‍ನಡಿ ಶುದ್ಧ ಕುಡಿಯುವ ನೀರಿನ ಏಳು ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಪ್ರಸಕ್ತ ಸಾಲಿನಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಜಿಸುವ ಗುರಿ ಹೊಂದಲಾಗಿದ್ದು, ಈಗಾಗಲೇ 4.40 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದರು.

‘ಜಲಜೀವನ್ ಮಿಷನ್‍ನಡಿ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ ಕಲ್ಪಿಸಿ, ನಿತ್ಯ 55 ಲೀಟರ್ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ಪೈಪ್‍ಲೈನ್ ಹಾಕಲಾಗಿದ್ದರೂ ಕೆಲವು ಮನೆಗಳಿಗೆ ನಲ್ಲಿ ಸಂಪರ್ಕ ಇರಲಿಲ್ಲ. ಈ ಕಾಮಗಾರಿ ಮುಂದುವರಿಯಲಿದೆ. ನಲ್ಲಿ ಸಂಪರ್ಕಕ್ಕೆ ಯಾವುದೇ ದರ ನಿಗದಿಪಡಿಸಿಲ್ಲ. ಆದರೆ, ಗ್ರಾಮ ಪಂಚಾಯಿತಿಗಳೇ ನೀರಿನ ದರ ನಿಗದಿ ಮಾಡಲಿವೆ. ಪ್ರತಿ ತಿಂಗಳಿಗೆ ₹ 100 ನಿಗದಿಯಾಗಿದ್ದರೂ ಕೆಲವೆಡೆ ಅದನ್ನೂ ಕಟ್ಟುತ್ತಿಲ್ಲ’ ಎಂದರು.

‘ಗ್ರಾಮೀಣ ಭಾಗದಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸುವ ಕೆಲಸವೂ ಆಗುತ್ತಿದೆ. 1,800 ಗ್ರಾಮ ಪಂಚಾಯಿತಿಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಘಟಕಗಳ ನಿರ್ಮಾಣ ಮುಗಿಯುತ್ತಿದೆ. ಕೆಲವೆಡೆ ತ್ಯಾಜ್ಯ ವಿಲೇವಾರಿಗೆ ಸ್ಥಳ ಸಿಗುತ್ತಿಲ್ಲ’ ಎಂದರು.

22 ಲಕ್ಷ ನರೇಗಾ ಕಾರ್ಮಿಕರಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT