ಸೋಮವಾರ, ಸೆಪ್ಟೆಂಬರ್ 20, 2021
20 °C
ಆಕ್ಷೇಪಣೆಗೆ ₹ 1,000 ಪಾವತಿಸಬೇಕು–ಅಭ್ಯರ್ಥಿಗಳು ಆಕ್ರೋಶ

ಕೆ–ಸೆಟ್‌ ಪರೀಕ್ಷೆ: ಕೀ ಉತ್ತರಗಳು ತಪ್ಪಾಗಿ ಪ್ರಕಟ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯ (ಕೆ–ಸೆಟ್‌) ತಾತ್ಕಾಲಿಕ ಕೀ ಉತ್ತರಗಳನ್ನು ಮೈಸೂರು ವಿಶ್ವವಿದ್ಯಾಲಯವು ಪ್ರಕಟಿಸಿದ್ದು, ಅದರಲ್ಲಿ ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದಂತೆ ಸುಮಾರು 20 ಉತ್ತರಗಳು ತಪ್ಪಾಗಿವೆ ಎಂದು ಅಭ್ಯರ್ಥಿಗಳು ದೂರಿದ್ದಾರೆ.

ಕೀ ಉತ್ತರ ಸರಿ ಇಲ್ಲವೆನಿಸಿದರೆ ಆಕ್ಷೇಪಣೆ ಸಲ್ಲಿಸಲು ಪ್ರತಿ ಪ್ರಶ್ನೆಗೆ ₹ 1,000 ಶುಲ್ಕ ಪಾವತಿಸಬೇಕು ಎಂದು ವಿಶ್ವವಿದ್ಯಾಲಯ ಹೇಳಿದೆ. ‘ಹಲವು ತಪ್ಪುಗಳಿದ್ದು, ಹಣ ಎಲ್ಲಿಂದ ತರುವುದು?’ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮರು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.

‘ಹಲವು ಪ್ರಶ್ನೆಗಳ ಕೀ ಉತ್ತರ‌ಗಳು ತಪ್ಪಾಗಿವೆ. ಪ್ರಕಟಿಸುವ ಮುನ್ನ ಪರಿಣತರ ಸಲಹೆ ಪಡೆಯಲಿಲ್ಲವೇ? ಅಥವಾ ಅವರಿಗೇ ಸರಿಯಾಗಿ ಉತ್ತರ ಗೊತ್ತಿಲ್ಲವೇ? ಕೋವಿಡ್‌ನಿಂದ ಕೆಲಸ ಕಳೆದುಕೊಂಡಿದ್ದು, ಆಕ್ಷೇಪಣೆ ಸಲ್ಲಿಸಲು ಹಣವೂ ಇಲ್ಲ. 20 ಪ್ರಶ್ನೆಗಳಿಗೆ ₹ 20 ಸಾವಿರ ಪಾವತಿಸಬೇಕಾಗುತ್ತದೆ’ ಎಂದು ಪರೀಕ್ಷೆ ಬರೆದಿರುವ ಅತಿಥಿ ಉಪನ್ಯಾಸಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಉದಾಹರಣೆಗೆ ಪ್ರಶ್ನೆ ಸಂಖ್ಯೆ 80. ಈ ಪತ್ರಿಕೆಗಳ ಪ್ರಕಟಣೆ ಶುರುವಾದ ವರ್ಷಕ್ಕೆ ಅನುಗುಣವಾಗಿ ವಿಂಗಡಿಸಿ ಎಂಬ ಪ್ರಶ್ನೆಗೆ ಮೈಸೂರು ವಿಶ್ವವಿದ್ಯಾಲಯದ ಕೀ ಉತ್ತರ (ಸಿ) 1) ಮಯೂರ, 2) ತರಂಗ, 3) ಕಸ್ತೂರಿ, 4) ಸುಧಾ. ಇದು ತಪ್ಪು. ಅದಕ್ಕೆ ಸರಿ ಉತ್ತರ (ಎ) 1) ಕಸ್ತೂರಿ, 2) ಸುಧಾ, 3) ಮಯೂರ, 4) ತರಂಗ ಆಗಬೇಕಿತ್ತು ಎಂದು ಅಭ್ಯರ್ಥಿಗಳು ಹೇಳಿದ್ದಾರೆ. ಹಾಗೆಯೇ, 87ನೇ ಪ್ರಶ್ನೆಯಲ್ಲಿ ‘ಸುದಾನಿ ಫ್ರಂ ನೈಜೀರಿಯಾ ’ ಅತ್ಯುತ್ತಮ ಅಸ್ಸಾಮಿ ಚಲನಚಿತ್ರ ಎಂದು ಕೀ ಉತ್ತರದಲ್ಲಿ ತಪ್ಪಾಗಿದೆ. ಇದು ಅತ್ಯುತ್ತಮ ಮಲಯಾಳಂ ಚಿತ್ರ ಎಂದಾಗಬೇಕಿತ್ತು .

ಈ ಸಂಬಂಧ ಪ್ರತಿಕ್ರಿಯಿಸಿರುವ ಕೆ–ಸೆಟ್‌ ಸಂಯೋಜಕ ಪ್ರೊ.ಎಚ್‌.ರಾಜಶೇಖರ್‌, ‘ಈಗ ಪ್ರಕಟಿಸಿರುವ ಉತ್ತರವೇ ಅಂತಿಮ ಅಲ್ಲ. ವಿದ್ಯಾರ್ಥಿಗಳು ಸಲ್ಲಿಸಿದ ಆಕ್ಷೇಪಣೆ ಸರಿಯಿದ್ದರೆ ಹಣ ವಾಪಸ್‌ ಕೊಡುತ್ತೇವೆ. ಪ್ರಶ್ನೆ ಪತ್ರಿಕೆಗಳನ್ನು ಪರಿಣತರು ಸಿದ್ಧಪಡಿಸಿದ್ದು, ಉತ್ತರವನ್ನು ಅವರೇ ನೀಡಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು