ಮಂಗಳವಾರ, ಆಗಸ್ಟ್ 16, 2022
20 °C
ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗೆ ದೂರು

ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮ: ಅನರ್ಹ ಕಂಪನಿಗಳಿಗೆ ‘ಮನ್ನಣೆ’ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕಳಪೆ ಔಷಧಿ ಪೂರೈಸಿ, ಗುತ್ತಿಗೆ ಷರತ್ತುಗಳನ್ನು ಉಲ್ಲಂಘಿಸಿ ಇತರ ರಾಜ್ಯಗಳಲ್ಲಿ ಕಪ್ಪುಪಟ್ಟಿ ಸೇರಿರುವ ಕೆಲವು ಕಂಪನಿಗಳಿಗೆ ಕರ್ನಾಟಕ ವೈದ್ಯಕೀಯ ಸರಬರಾಜು ನಿಗಮದ (ಕೆಎಸ್‌ಎಂಎಸ್‌ಸಿಎಲ್‌) ಅಧಿಕಾರಿಗಳು ‘ಅನುಕೂಲ’ ಮಾಡಿಕೊಡುತ್ತಿದ್ದಾರೆ’ಎಂಬ ದೂರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿ ತಲುಪಿದೆ.

‘ರಾಜ್ಯದ ಸರ್ಕಾರಿ ಆಸ್ಪತ್ರೆಗಳು, ಚಿಕಿತ್ಸಾಲಯಗಳಿಗೆ ಪೂರೈಸಲು ₹ 45 ಕೋಟಿ ಮೊತ್ತದಲ್ಲಿ ಔಷಧಿ ಮತ್ತು ಉಪಕರಣಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇಕಡ 15 ರಷ್ಟು ಲಂಚ ಪಡೆದು ಅನರ್ಹ ಕಂಪನಿಗಳಿಗೆ ಕಾರ್ಯಾದೇಶ ನೀಡಲಾಗುತ್ತಿದೆ’ ಎಂಬ ಆರೋಪ ಚೆನ್ನೈ ನಿವಾಸಿ ಶರವಣನ್‌ ಶಿವಕುಮಾರ್‌ ಎಂಬುವವರ ಹೆಸರಿನಲ್ಲಿ ಸಲ್ಲಿಸಿರುವ ದೂರಿನಲ್ಲಿದೆ. ಮುಖ್ಯಮಂತ್ರಿಯವರ ಜತೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಮುಖ್ಯ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳು, ಲೋಕಾಯುಕ್ತ ಹಾಗೂ ಸಿಬಿಐಗೆ ದೂರಿನ ಪ್ರತಿಯನ್ನು ರವಾನಿಸಲಾಗಿದೆ.

‘ಕಪ್ಪುಪಟ್ಟಿಗೆ ಸೇರಿರುವ ಕಂಪನಿಗಳಿಗೆ ಗುತ್ತಿಗೆ ನೀಡುವಂತಿಲ್ಲ ಎಂಬ ಷರತ್ತು ಟೆಂಡರ್‌ ಅಧಿಸೂಚನೆಯಲ್ಲೇ ಇದೆ. ಉತ್ತರ ಪ್ರದೇಶ ನೊಯ್ಡಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಒಂದು ಕಂಪನಿಯನ್ನು ಛತ್ತೀಸ್‌ಗಢ ರಾಜ್ಯ ಸರ್ಕಾರ ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೆ, ಇದೇ ಕಂಪನಿಗೆ ಕೆಎಸ್‌ಎಂಎಸ್‌ಸಿಎಲ್‌ ₹ 25 ಕೋಟಿ ಮೌಲ್ಯದ ಔಷಧಿಗಳ ಸರಬರಾಜಿಗೆ ಕಾರ್ಯಾದೇಶ ನೀಡಿದೆ. ಸದರಿ ಕಂಪನಿ ಕಪ್ಪುಪಟ್ಟಿಗೆ ಸೇರಿಸುವ ಆದೇಶಕ್ಕೆ ತಡೆಯಾಜ್ಞೆ ತರುವವರೆಗೂ ಕಾದು, ನಂತರ ಕಾರ್ಯಾದೇಶ ನೀಡಲಾ
ಗಿದೆ’ ಎಂಬ ಆರೋಪ ದೂರಿನಲ್ಲಿದೆ.

‘ಮಧ್ಯಪ್ರದೇಶ ಸರ್ಕಾರವು ಕಪ್ಪುಪಟ್ಟಿಗೆ ಸೇರಿಸಿರುವ ನಾಲ್ಕು ಕಂಪನಿಗಳಿಗೆ ₹ 25 ಕೋಟಿ ಮೌಲ್ಯದ ಮಾತ್ರೆಗಳನ್ನು ‍ಪೂರೈಕೆ ಮಾಡಲು ಕಾರ್ಯಾದೇಶ ನೀಡಲಾಗಿದೆ. ಈ ಪೈಕಿ ಕೆಲವು ಕಂಪನಿಗಳು ಅಷ್ಟು ಪ್ರಮಾಣದ ಮಾತ್ರಪೂರೈಸುವ ಸಾಮರ್ಥ್ಯವನ್ನೇ ಹೊಂದಿಲ್ಲ. ಕಾರ್ಯಾದೇಶ ನೀಡಿದ ಬಳಿಕ ಪೂರೈಕೆ ಅವಧಿ ವಿಸ್ತರಿಸಲಾಗಿದೆ. ಔಷಧಿ ಪೂರೈಕೆಯಲ್ಲಿ ಕರ್ನಾಟಕದ ಸಣ್ಣ ಉದ್ಯಮಗಳಿಗೆ ಶೇಕಡ 15ರಷ್ಟು ಗುತ್ತಿಗೆ ನೀಡಬೇಕೆಂಬ ನೀತಿ ಉಲ್ಲಂ
ಘಿಸಿ ಈ ಕಂಪನಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದಿದ್ದಾರೆ.

ಎರಡು ಕಂಪನಿಗಳು ಕಳಪೆ ಗುಣಮಟ್ಟದ ಮಾತ್ರೆಗಳನ್ನು ಪೂರೈಸಿರುವುದು ಇದೇ ಫೆಬ್ರುವರಿಯಲ್ಲಿ ಪತ್ತೆಯಾಗಿತ್ತು. ಆ ಕಂಪನಿಗಳನ್ನು ಕಾನೂನಿನಪ್ರಕಾರ, ಕಪ್ಪುಪಟ್ಟಿಗೆ ಸೇರಿಸಬೇಕಿತ್ತು. ಆದರೆ, ನಿಗಮದ ಅಧಿಕಾರಿಗಳು ಕಂಪನಿಗಳ ಜತೆ ಕೈಜೋಡಿಸಿದ್ದು, ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆಯನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ವಾರ್ಷಿಕ ₹ 10 ಕೋಟಿ ವಹಿವಾಟು ನಡೆಸಿರುವ ಕಂಪನಿಯೊಂದಕ್ಕೆ ಮೂರು ತಿಂಗಳ ಅವಧಿಯಲ್ಲಿ ₹38 ಕೋಟಿ ಮೌಲ್ಯದ ಸೂಜಿಗಳನ್ನು ಪೂರೈಕೆ ಮಾಡಲು ಕಾರ್ಯಾದೇಶ ನೀಡಲಾಗಿದೆ. ₹ 10 ಕೋಟಿ ವಹಿವಾಟಿಗೆ ಸಂಬಂಧಿಸಿದಂತೆಯೂ ಆ ಕಂಪನಿ ಸಲ್ಲಿಸಿರುವ ದಾಖಲೆಗಳು ಶಂಕಾಸ್ಪದವಾಗಿವೆ. ಇನ್ನೊಂದು ಪ್ರಕರಣದಲ್ಲಿ ಒಂದು ಕಂಪನಿ ಪೂರೈಸುತ್ತಿರುವ ಐವಿ–ಫ್ಲೂಯಿಡ್‌ ಗುಣಮಟ್ಟದ ಕುರಿತು ಹಲವು ವೈದ್ಯರು ದೂರು ನೀಡಿದ್ದಾರೆ’ ಎಂದು ದೂರಿದ್ದಾರೆ.

ಹೆಚ್ಚಿನ ದರಕ್ಕೆ ಖರೀದಿ ಆರೋಪ

‘ಮೂರು ಬಗೆಯ ಮಾತ್ರೆಗಳನ್ನು ಕಡಿಮೆ ದರಕ್ಕೆ ತಮಿಳುನಾಡು ವೈದ್ಯಕೀಯ ಸರಬರಾಜು ನಿಗಮಕ್ಕೆ ಪೂರೈಸಿದ್ದ ಕಂಪನಿಗಳಿಂದಲೇ ಕೆಎಸ್‌ಎಂಎಸ್‌ಸಿಎಲ್‌ಗೆ ಹೆಚ್ಚಿನ ದರಕ್ಕೆ ಖರೀದಿಸಿದೆ. ಇದರಿಂದ ₹ 65.90 ಲಕ್ಷ ನಷ್ಟವಾಗಿದೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಖರೀದಿಯಲ್ಲಿ ಕಾನೂನು ಉಲ್ಲಂಘಿಸಿಲ್ಲ’

‘ಔಷಧಿ ಖರೀದಿ ಟೆಂಡರ್‌ನಲ್ಲಿ ಗುತ್ತಿಗೆ ಪಡೆಯಲು ವಿಫಲವಾದ ಕಂಪನಿಗಳಿಂದಲೇ ಇಂತಹ ದೂರು ಸಲ್ಲಿಕೆಯಾಗಿರುವ ಅನುಮಾನವಿದೆ. ಕೆಎಸ್‌ಎಂಎಸ್‌ಸಿಎಲ್‌ ಕಾನೂನಿನ ಪ್ರಕಾರ ಟೆಂಡರ್‌ ಪ್ರಕ್ರಿಯೆ ನಡೆಸಿ ಕಾರ್ಯಾದೇಶ ನೀಡಿದೆ. ಒಂದು ಕಂಪನಿಯನ್ನು ಛತ್ತೀಸ್‌ಗಢ ಸರ್ಕಾರ ಕಪ್ಪುಪಟ್ಟಿಯಲ್ಲಿ ಮುಂದುವರಿಸಿರುವುದು ಖಚಿತವಾದ ಬಳಿಕ 40 ಔಷಧಿಗಳ ಪೂರೈಕೆಗೆ ನೀಡಿದ್ದ ಕಾರ್ಯಾದೇಶ ವಾಪಸ್‌ ಪಡೆಯಲಾಗಿದೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್‌.ಎಂ. ನಾಗರಾಜ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು