ಸಾರಿಗೆ ನೌಕರರಿಗೆ ಸಿಗದ ವೇತನ

ಬೆಂಗಳೂರು: ಕೋವಿಡ್ ಸೋಂಕು ರಾಜ್ಯಕ್ಕೆ ಕಾಲಿಟ್ಟಾಗಿನಿಂದ ತಿಂಗಳ ವೇತನಕ್ಕಾಗಿ ಸರ್ಕಾರದ ಕಡೆಯೇ ಕೈಚಾಚಬೇಕಾದ ಅನಿವಾರ್ಯತೆಯಿಂದ ಸಾರಿಗೆ ಸಂಸ್ಥೆಗಳು ಹೊರ ಬಂದಿಲ್ಲ. ವೇತನಕ್ಕೆ ಅನುದಾನ ಕೋರಿರುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲೇ ಬಾಕಿ ಇದ್ದು, ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನೂ ನೌಕರರು ಬರಿಗೈನಲ್ಲೇ ಬರ ಮಾಡಿಕೊಳ್ಳಬೇಕಾದ ಕಷ್ಟದ ಸ್ಥಿತಿ ಎದುರಾಗಿದೆ.
ಲಾಕ್‌ಡೌನ್ ತೆರವಾದ ಬಳಿಕ ಪೂರ್ಣ ಪ್ರಮಾಣದಲ್ಲಿ(ಎಲ್ಲಾ ಸೀಟುಗಳಲ್ಲೂ) ಪ್ರಯಾಣಿಕರು ಸಂಚರಿಸಲು ಅವಕಾಶ ನೀಡಿದ್ದರೂ, ಬಸ್ ಹತ್ತಲು ಪ್ರಯಾಣಿಕರು ಹಿಂದೇಟು ಹಾಕುತ್ತಲೇ ಇದ್ದಾರೆ. ಈ ನಡುವೆ ಮಹಾರಾಷ್ಟ್ರ ಮತ್ತು ಕೇರಳಕ್ಕೆ ಬಸ್ ಸಂಚಾರವನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಕೊರತೆ ಕಾರಣಕ್ಕೆ ಎಲ್ಲಾ ಮಾರ್ಗಗಳಲ್ಲೂ ಪೂರ್ಣ ಪ್ರಮಾಣದ ಬಸ್ ಸಂಚಾರ ಆರಂಭಿಸಿಲ್ಲ.
ನೌಕರರು ಕೆಲಸವಿಲ್ಲದೆ ಡಿಪೋಗಳಲ್ಲಿ ಕೂರುವ ಸ್ಥಿತಿ ಮುಂದುವರಿದೇ ಇದೆ. ತಡೆ ರಹಿತ ಬಸ್‌ಗಳಲ್ಲಿ ಈ ಹಿಂದೆ ಚಾಲಕರೊಬ್ಬರೇ ನಿರ್ವಾಹಕರ ಕೆಲಸವನ್ನೂ ನಿರ್ವಹಿಸುತ್ತಿದ್ದರು. ನೌಕರರನ್ನು ಖಾಲಿ ಕೂರಿಸಬಾರದು ಎಂಬ ಕಾರಣಕ್ಕೆ ತಡೆ ರಹಿತ ಬಸ್‌ಗಳಲ್ಲೂ ಚಾಲಕ ಮತ್ತು ನಿರ್ವಾಹಕರಿಬ್ಬರನ್ನೂ ನಿಯೋಜಿಸಲಾಗುತ್ತಿದೆ. ಆ ಬಸ್‌ಗಳೂ ಪ್ರಯಾಣಿಕರಿಲ್ಲದೆ ಖಾಲಿ ಖಾಲಿಯಾಗಿಯೇ ಸಂಚರಿಸುತ್ತಿವೆ. ಇನ್ನು ಡೀಸೆಲ್ ದರ ದುಪಟ್ಟಾಗಿರುವುದು ಸಾರಿಗೆ ಸಂಸ್ಥೆಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಬರುವ ವರಮಾನವೆಲ್ಲ ಡೀಸೆಲ್ ವೆಚ್ಚಕ್ಕೆ ಸಮವಾಗುತ್ತಿದೆ.
ನೌಕರರ ವೇತನಕ್ಕೆ ಮತ್ತೆ ಸರ್ಕಾರದ ಮುಂದೆಯೇ ಕೈಚಾಚುವ ಸ್ಥಿತಿ ಇದೆ. ನಾಲ್ಕೂ ಸಂಸ್ಥೆಗಳ ನೌಕರರಿಗೆ ವೇತನ ನೀಡಲು ₹326 ಕೋಟಿ ಅನುದಾನ ಬೇಕು. ಹೆಚ್ಚಳ ಮಾಡಿರುವ ತುಟ್ಟಿಭತ್ಯೆಯ ಹೊರೆಯೂ ಸೇರಿ ಒಟ್ಟಾರೆ ₹350 ಕೋಟಿಗೂ ಹೆಚ್ಚು ಅನುದಾನ ಬೇಕಾಗಲಿದೆ. ಅನುದಾನ ಕೋರಿ ಕೆಎಸ್‌ಆರ್‌ಟಿಸಿ ಮೂಲಕ ನಾಲ್ಕು ನಿಗಮಗಳು ಸಲ್ಲಿಸಿರುವ ಪ್ರಸ್ತಾವನೆ ಹಣಕಾಸು ಇಲಾಖೆಯಲ್ಲಿ ಪರಿಶೀಲನೆಯ ಹಂತದಲ್ಲಿದೆ.
ಹಿಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಆಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಸಿ ಅನುದಾನ ಬಿಡುಗಡೆ ಮಾಡಿಸುತ್ತಿದ್ದರು. ಹೊಸ ಸರ್ಕಾರ ಹಣಕಾಸಿನ ಸ್ಥಿತಿಗತಿ ನೋಡಿಕೊಂಡು ಹೆಜ್ಜೆ ಇಡುತ್ತಿದೆ. ಹೀಗಾಗಿ, ನೌಕರರ ವೇತನದ ಪ್ರಸ್ತಾವನೆ ಇನ್ನೂ ಪರಿಶೀಲನೆ ಹಂತದಲ್ಲೇ ಇದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
‘ಮುಖ್ಯಮಂತ್ರಿ ಅವರ ಅನುಮೋದನೆ ಪಡೆದು ಹಣ ಬಿಡುಗಡೆಯಾಗಿ ನಿಗಮಗಳ ಖಾತೆಗೆ ಹಂಚಿಕೆಯಾಗಿ, ಅಲ್ಲಿಂದ ನೌಕರರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲು ಇನ್ನೂ ಸಾಕಷ್ಟು ಸಮಯ ಬೇಕಾಗಲಿದೆ. ಈ ಬಾರಿಯ ವರಮಹಾಲಕ್ಷ್ಮಿ ಹಬ್ಬವನ್ನು ನೌಕರರು ವೇತನ ಇಲ್ಲದ ಖಾಲಿ ಜೇಬಿನಲ್ಲೇ ಆಚರಿಸಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೆ ಹಬ್ಬಕ್ಕೂ ಮೊದಲೇ ವೇತನ ನೀಡಬೇಕು’ ಎಂದು ನೌಕರರ ಮುಖಂಡರು ಆಗ್ರಹಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.