ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಗಳನ್ನು ಹೀರೋ ಆಗಿಸಲು ಪಾದಯಾತ್ರೆ ಮಾಡಿಲ್ಲ: ನಿರಂಜನಾನಂದಪುರಿ ಸ್ವಾಮೀಜಿ

ಕುರುಬರಿಗೆ ಎಸ್‌ಟಿ ಮೀಸಲಾತಿಗೆ ಒತ್ತಾಯಿಸಿ ಪಾದಯಾತ್ರೆ * ಜೇನಿನ ಹುಳುಗಳಂತೆ ಜನ ಬಂದರು– ಸ್ವಾಮೀಜಿ
Last Updated 3 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಿಚ್ಚು, ಕನಕದಾಸರ ತತ್ವಗಳನ್ನು ಮುಂದಿಟ್ಟುಕೊಂಡು ಪರಿಶಿಷ್ಟ ಪಂಗಡದ (ಎಸ್‌ಟಿ) ಮೀಸಲಾತಿಗಾಗಿ ಒತ್ತಾಯಿಸಿ ಜ.15ರಂದು ಕಾಗಿನೆಲೆಯಿಂದ ಹೊರಟ ಪಾದಯಾತ್ರೆ ಬುಧವಾರ ನಗರಕ್ಕೆ ಬಂದು ತಲುಪಿತು.

ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಸಹಸ್ರಾರು ಜನ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ‘ಯಾವುದೇ ಪಕ್ಷದ ರಾಜಕೀಯ ನಾಯಕರನ್ನು ಹೀರೋ ಮಾಡಲಾಗಲಿ, ಅವರನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವುದಕ್ಕಾಗಲಿ ಈ ಪಾದಯಾತ್ರೆ ಹಮ್ಮಿಕೊಂಡಿಲ್ಲ. ಸ್ವಾತಂತ್ರ್ಯಪೂರ್ವದಿಂದಲೂ ಈ ಸೌಲಭ್ಯಕ್ಕೆ ಒತ್ತಾಯಿಸಿ ಹೋರಾಟ ನಡೆಯುತ್ತಿತ್ತು. ಕುರುಬ ಸಮುದಾಯದವರ ಭವಿಷ್ಯದ ದೃಷ್ಟಿಯಿಂದ ಎಸ್‌ಟಿ ಮೀಸಲಾತಿ ಕೇಳುತ್ತಿದ್ದೇವೆ’ ಎಂದರು.

‘ಪಾದಯಾತ್ರೆಯಲ್ಲಿ ಹೆಚ್ಚು ಜನ ಸೇರುತ್ತಾರೋ, ಇಲ್ಲವೋ ಎಂಬ ಆತಂಕವಿತ್ತು. ಪಾದಯಾತ್ರೆ ಹಾದು ಬರುವ ಸ್ಥಳದಲ್ಲಿ ಜೇನುಗೂಡು ಕಟ್ಟಿತ್ತು. ಎಸ್‌ಟಿ ಎಂಬ ಸಕ್ಕರೆಗಾಗಿ ಜನ ಜೇನಿನ ಹುಳುಗಳಂತೆ ಸೇರುತ್ತಾರೆ ಎಂದು ದೇವರಿಂದ ಸೂಚನೆ ಸಿಕ್ಕಿತು. ಅದರಂತೆ, ಪಾದಯಾತ್ರೆ ಉದ್ದಕ್ಕೂ 500ರಿಂದ 1000 ಜನ ಇರುತ್ತಿದ್ದರು. ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಜಮಾಯಿಸುತ್ತಿದ್ದರು’ ಎಂದರು.

ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ‘ಕುರುಬ ಸಮುದಾಯ ಸರ್ವ ಜನಾಂಗದ, ಸರ್ವ ಧರ್ಮಗಳ ಪ್ರೀತಿಗೆ ಪಾತ್ರವಾದ ಸಮುದಾಯ. ಪಾದಯಾತ್ರೆ ವೇಳೆ ಮುಸ್ಲಿಮರು ಕೂಡ ಮಸೀದಿಯಲ್ಲಿ ನಮಗೆ ಆಶ್ರಯ ನೀಡಿದರು. ಲಂಬಾಣಿ, ವಾಲ್ಮೀಕಿ, ಮಾದಾರ ಚನ್ನಯ್ಯ ಸಮುದಾಯದವರ ಮನೆಯಲ್ಲಿ ಊಟ ಮಾಡಿದೆವು. ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳು ನಮಗೆ ಹಣ ಕೊಟ್ಟಿಲ್ಲ. ಕುರುಬರು ಕುರಿ ಮಾರಾಟ ಮಾಡಿ ಲಕ್ಷಗಟ್ಟಲೇ ದುಡ್ಡು ಕೊಟ್ಟಿದ್ದಾರೆ. ಉತ್ತರ ಕರ್ನಾಟಕದಲ್ಲಿನ ಸಮುದಾಯದ ಮಹಿಳೆಯರು ಲಕ್ಷ ಲಕ್ಷ ರೊಟ್ಟಿ ಬಡಿದು ಕೊಟ್ಟಿದ್ದಾರೆ. ಫೆ.7ರಂದು ನಡೆಯಲಿರುವ ಬೃಹತ್‌ ಸಮಾವೇಶದಲ್ಲಿ 10 ಲಕ್ಷ ಜನ ಭಾಗವಹಿಸಿದರೂ ಎಲ್ಲರಿಗೂ ಊಟದ ವ್ಯವಸ್ಥೆ ಮಾಡುವಷ್ಟು ರೊಟ್ಟಿಗಳನ್ನು ಮಹಿಳೆಯರು ಕೊಟ್ಟಿದ್ದಾರೆ’ ಎಂದರು.

ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್, ‘ಐತಿಹಾಸಿಕ ಪಾದಯಾತ್ರೆಯು ರಾಜ್ಯ ಮತ್ತು ಕೇಂದ್ರಸರ್ಕಾರದ ಕಣ್ಣು ತೆರೆಸಿದೆ. ಜನತಂತ್ರ ವ್ಯವಸ್ಥೆಯಲ್ಲಿ ನಮಗೆ ಸಿಗಬೇಕಾದ ಹಕ್ಕುಗಳು ಸಿಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜ.15ರಂದು ಕಾಗಿನೆಲೆಯಿಂದ ಹೊರಟ ಪಾದಯಾತ್ರೆ ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು ಮೂಲಕ ಬೆಂಗಳೂರಿಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT