ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿಗೆ ಅಂದು ವಿರೋಧ, ಇಂದು ಹೋರಾಟ: ಸಿ.ಕೆ.ಮಹೇಶ್ ಕಳವಳ

ಸಂವಿಧಾನ ಬಿಕ್ಕಟ್ಟಿಗೆ ನಾಂದಿ: ಸಂವಾದದಲ್ಲಿ ದಲಿತ ಮುಖಂಡರ ಕಳವಳ
Last Updated 20 ಫೆಬ್ರುವರಿ 2021, 20:26 IST
ಅಕ್ಷರ ಗಾತ್ರ

ಬೆಂಗಳೂರು: ‘ದಲಿತರಿಗೆ ಮೀಸಲಾತಿ ವಿರೋಧಿಸುತ್ತಿದ್ದ ಸಮುದಾಯಗಳೆಲ್ಲ ಈಗ ತಮಗೂ ಮೀಸಲಾತಿ ಬೇಕೆಂದು ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಈ ಬೆಳವಣಿಗೆ ಸಂವಿಧಾನ ಬಿಕ್ಕಟ್ಟಿಗೆ ನಾಂದಿಯಾಗಲಿದೆ’ ಎಂದುದಲಿತ ಸಂಘರ್ಷ ಸಮಿತಿ ಮುಖಂಡ ಸಿ.ಕೆ.ಮಹೇಶ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ‘ಶೋಷಿತ ಸಮುದಾಯಗಳೊಂದಿಗೆ ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಮತ್ತು ಒಳ ಮೀಸಲಾತಿ’ ಸಂವಾದದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿ ನೀಡಿದರೆ, ಮೀಸಲಾತಿ ಪ್ರಮಾಣ ಶೇ 54.5ಕ್ಕೆ ಏರಿಕೆಯಾಗಲಿದೆ. ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಪ್ರಕಟಿಸಿದ್ದು, ಮುಂದಿನ ದಿನಗಳಲ್ಲಿ ಮೀಸಲಾತಿ ಶೇ 64ರಷ್ಟಾಗಲಿದೆ. ಮೀಸಲಾತಿಗಾಗಿ ಏರ್ಪಟ್ಟಿರುವ ಈ ಸ್ಪರ್ಧೆಯು ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಹುಟ್ಟು ಹಾಕಲಿದೆ’ ಎಂದು ಅವರು ಹೇಳಿದರು.

‘ಮೀಸಲಾತಿಗಾಗಿಲಿಂಗಾಯತರು ಹಾಗೂ ಒಕ್ಕಲಿಗರಿಂದಲೂ ಬೇಡಿಕೆ ಬಂದಿದೆ. ಇವರ ನಡೆ ಅಂಬೇಡ್ಕರ್ ಅವರ ಮೀಸಲಾತಿ ಪರಿಕಲ್ಪನೆಗೆ ವಿರುದ್ಧವಾಗಿದೆ. ಶೋಷಿತರ ವಿರುದ್ಧ ಉನ್ನತ ಸಮುದಾಯಗಳನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಪರಿಶಿಷ್ಟ ವಲಯದ ಸಮುದಾಯಗಳನ್ನು ಪ್ರತ್ಯೇಕಗೊಳಿಸಿ, ಪ್ರತಿ ಜಾತಿಗೆ ಆಯೋಗಗಳನ್ನು ರಚಿಸುವ ಮೂಲಕ ನಮ್ಮ ಒಗ್ಗಟ್ಟು ಚದುರಿಸಲಾಗುತ್ತಿದೆ’ ಎಂದು ದೂರಿದರು.

ಕುರುಬ ಸಮುದಾಯದ ಎಸ್.ಟಿ.ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಮುಕಡಪ್ಪ,‘ ಕುರುಬ ಸಮುದಾಯದ ಶೇ 98ರಷ್ಟು ಮಂದಿಯನ್ನು ಶೇ 2ರಷ್ಟು ನಾಯಕರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸಮುದಾಯದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಸಿದ್ದರಾಮಯ್ಯ ಇವರೆಲ್ಲರೂ ಬ್ರಾಹ್ಮಣರಂತೆ ವರ್ತಿಸುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ನಿಜಕ್ಕೂ ಮೀಸಲಾತಿ ಅಗತ್ಯವಾಗಿದ್ದರೆ, ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ತಮಿಳುನಾಡು ಮಾದರಿ ಮೀಸಲಾತಿ ಪ್ರಮಾಣ ಹೆಚ್ಚಿಸಿದರೆ, ಎಲ್ಲರಿಗೂ ಮೀಸಲಾತಿ ಸಿಗಲಿದೆ’ ಎಂದರು.

ಐಎಎಸ್ನಿವೃತ್ತ ಅಧಿಕಾರಿ ಬಾಬುರಾವ್ ಮುಡಬಿ,‘ಮೀಸಲಾತಿ ಇಲ್ಲದಿದ್ದರೆ ದೇಶ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತಿರಲಿಲ್ಲ. ಮೀಸಲಾತಿ ಕೇಳುವ ಮುನ್ನ ತಮ್ಮ ಸಮುದಾಯಗಳ ಸ್ಥಿತಿಗತಿ ಹಾಗೂ ಸಮಗ್ರ ಮಾಹಿತಿ ಕಲೆ ಹಾಕಬೇಕು. ಸಮುದಾಯದ ಸ್ಪಷ್ಟತೆ ಇಲ್ಲದಿದ್ದರೆ, ವಾದ ಮಂಡನೆಗೆ ಅರ್ಥವಿರುವುದಿಲ್ಲ’ ಎಂದರು.

‘25ರಿಂದ ಅಹೋರಾತ್ರಿ ಧರಣಿ’
‘ಪರಿಶಿಷ್ಟ ವಲಯದ 101 ಜಾತಿಗಳಲ್ಲಿ ಒಳಮೀಸಲಾತಿ ಜಾರಿಗಾಗಿ ನ್ಯಾ.ಸದಾಶಿವ ಆಯೋಗದ ವರದಿಯನ್ನು ಅನುಷ್ಠಾನಗೊಳಿಸಬೇಕು. ಈ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಇದೇ 25ರಿಂದ ಮೌರ್ಯ ವೃತ್ತದಲ್ಲಿ ಅಹೋರಾತ್ರಿ ಪ್ರತಿಭಟನಾ ಧರಣಿ ನಡೆಸಲಾಗುವುದು’ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೆಣ‍್ಣೂರು ಶ್ರೀನಿವಾಸ್ ತಿಳಿಸಿದರು.

ಯಾವ ಜಾತಿಗೂ ಮೀಸಲಾತಿಬೇಡ: ಶಾಸಕ ರಾಜೂಗೌಡ
ಯಾದಗಿರಿ
: ‘ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂಪ್ಪ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಯಾವ ಜಾತಿಗೂ ಮೀಸಲಾತಿ ಕೊಡುವುದು ಬೇಡವೇ ಬೇಡ’ ಎಂದು ಶಾಸಕ ರಾಜೂಗೌಡ ಹೇಳಿದರು.

ಸುರಪುರ ತಾಲ್ಲೂಕಿನ ಖಾನಾಪುರ ಎಸ್‌.ಎಚ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಒಂದು ಅಕ್ಷರ ಬದಲಾವಣೆ ಮಾಡುವ ಶಕ್ತಿ ಯಾರಿಗೂ ಇಲ್ಲ. ಲಿಂಗಾಯತ, ಒಕ್ಕಲಿಗ, ಪಂಚಮಸಾಲಿ ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಎಲ್ಲಿ ಕಡುಬಡವರಿದ್ದಾರೆಯೋ ಅದರ ಆಧಾರದ ಮೇಲೆ ಮೀಸಲಾತಿ ನೀಡಬೇಕು’ ಎಂದರು.

‘ಮಳೆ ಬಂದರೆ ಸಂತೆಯಲ್ಲಿ ಉಪ್ಪು ಮಾರುವವರು ಅಳುತ್ತಾರೆ. ಉಪ್ಪು ಕರಗಿ ಹೋಗುತ್ತದೆ ಎಂಬ ಆತಂಕ ಅವರಿಗೆ.ಆದರೆ, ಈಗ ತೆಂಗಿನಕಾಯಿ ಮಾರುವವರೂ ಅಳುತ್ತಿದ್ದಾರೆ’ ಎಂದು ಸೂಚ್ಯವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT