ಸಕಲೇಶಪುರ: ‘ರೈತನನ್ನೇ ಮದುವೆಯಾಗಬೇಕೆಂದು ಇನ್ಫೊಸಿಸ್ ಕಂಪನಿಯ ಕೆಲಸ ಬಿಟ್ಟು ಹಳ್ಳಿಗೆ ಬಂದೆ. ಆದರೆ, ಈ ಊರಿಗೆ ರಸ್ತೆ, ಸೇತುವೆ ಇಲ್ಲ. ಅನಾರೋಗ್ಯಪೀಡಿತರನ್ನು ಬೆಡ್ ಶೀಟ್‌ನಲ್ಲಿ ಎತ್ತಿಕೊಂಡು ಆಸ್ಪತ್ರೆಗೆ ಹೋಗಬೇಕು. ನಾಗರಿಕ ಸಮಾಜ ತಲೆತಗ್ಗಿಸುವ ವಾತಾವರಣವಿದೆ’ ಎಂದು ಚೀರಿ ಚಿನ್ನಳ್ಳಿಯ ಆಶಾ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ವಳಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೀರಿ ಚಿನ್ನಳ್ಳಿ, ಹೊಸಗದ್ದೆ ಗ್ರಾಮಸ್ಥರು ಇಲ್ಲಿನ ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ಕಚೇರಿ ಎದುರು ಎರಡು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಮಾತನಾಡಿದರು.
‘ನೀವು ತಿನ್ನುವ ಅಕ್ಕಿಯನ್ನು ನಾವು ಬೆಳೆಯುತ್ತೇವೆ. ಕ್ವಿಂಟಲ್ ಭತ್ತಕ್ಕೆ ₹1,800 ಇದೆ. ಈ ಭತ್ತವನ್ನು ಊರಿಂದ ಹೊತ್ತು ತರುವುದಕ್ಕೇ ₹1,000 ಖರ್ಚಾಗುತ್ತದೆ. ನಿಮ್ಮ ಜೇಬಿನಿಂದ ಹಣ ತಂದು ರಸ್ತೆ, ಸೇತುವೆ ಮಾಡಿ ಎಂದು ಕೇಳುತ್ತಿಲ್ಲ. ನಾವು ಕಟ್ಟುವ ತೆರಿಗೆಯಲ್ಲಿ ಕಟ್ಟಿಸಿ. ರಸ್ತೆ, ಸೇತುವೆ ಆಗುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ’ ಎಂದರು.
ಚೀರಿ ಚಿನ್ನಹಳ್ಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಡಿ. ಲಕ್ಷ್ಮಣ್‌ಗೌಡ ಇದ್ದರು. ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಹಾಗೂ ಎಸಿಪಿ ಎಚ್.ಎನ್.ಮಿಥುನ್ ಪ್ರತಿಭಟನಕಾರರ ಮನವಿ ಆಲಿಸಿದರು.
‘8 ವರ್ಷಗಳಿಂದ ಇದೇ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಮಾಡುತ್ತಿದ್ದೀರಿ. ಈ ಯೋಜನೆ ಅನುದಾನದಲ್ಲಿ 400 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ್ದೀರಿ. ಯೋಜನೆ ವ್ಯಾಪ್ತಿಗೆ ಒಳಪಡುವ ಈ ಗ್ರಾಮಕ್ಕೆ ಏಕೆ ರಸ್ತೆ, ಸೇತುವೆಯನ್ನು ಈವರೆಗೂ ಮಾಡಿಲ್ಲ ಎಂದು ಅನ್ಮೋಲ್ ಜೈನ್ ಅವರು ಎತ್ತಿನಹೊಳೆ ಯೋಜನೆ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು.
ರೈತರ ಮಕ್ಕಳನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹಧನ: ಎಚ್‌ಡಿಕೆ
ತಿಪಟೂರು: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ರೈತರ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ ₹2 ಲಕ್ಷ ಪ್ರೋತ್ಸಾಹಧನ ನೀಡಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ತಿಪಟೂರು ತಾಲ್ಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಬುಧವಾರ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಕೃಷಿ ಕೆಲಸದಲ್ಲಿ ತೊಡಗಿರುವ ರೈತರ ಮಕ್ಕಳಿಗೆ ಯಾರೂ ಹೆಣ್ಣು ಕೊಡಲು ಮುಂದಾಗುತ್ತಿಲ್ಲ. ಸಂಪೂರ್ಣ ಬಹುಮತದೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬಂದರೆ, ರೈತರ ಮಕ್ಕಳನ್ನು ಮದುವೆಯಾಗುವವರಿಗೆ ಪ್ರೋತ್ಸಾಹಧನ ಯೋಜನೆ ಜಾರಿಗೆ ತರಲಾಗುವುದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.