ಶುಕ್ರವಾರ, ಅಕ್ಟೋಬರ್ 22, 2021
21 °C

ಲಖಿಂಪುರ–ಖೇರಿ: ಆರೋಪಿಗಳ ಬಂಧನಕ್ಕೆ ಹಿಂದೇಟು- ಸರ್ಕಾರಕ್ಕೆ ‘ಸುಪ್ರೀಂ’ ತರಾಟೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಲಖಿಂಪುರ–ಖೇರಿಯಲ್ಲಿ ನಾಲ್ವರು ರೈತರು ಸೇರಿ ಎಂಟು ಮಂದಿಯ ಕ್ರೂರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ಕೈಗೊಂಡ ಕ್ರಮಗಳು ತೃಪ್ತಿಕರವಲ್ಲ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಆರೋಪಿಗಳನ್ನು ಏಕೆ ಬಂಧಿಸಿಲ್ಲ ಎಂದು ಕೋರ್ಟ್‌ ಶುಕ್ರವಾರ ಪ್ರಶ್ನಿಸಿದೆ. ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಸೂಚಿಸಿದೆ. ಪ್ರಕರಣದ ತನಿಖೆ ಯನ್ನು ಬೇರೊಂದು ಸಂಸ್ಥೆಗೆ ವಹಿಸುವ ಬಗ್ಗೆಯೂ ಚಿಂತನೆ ನಡೆಸಿದೆ. ಸರ್ಕಾರವು ಮಾತಿಗಷ್ಟೇ ಸೀಮಿತ, ಕ್ರಿಯೆಯಲ್ಲಿ ಏನೂ ಇಲ್ಲ ಎಂದಿದೆ.  

ಎಲ್ಲ ಆರೋಪಿಗಳ ವಿರುದ್ಧವೂ ಕಾನೂನಿನ ಅನ್ವಯವೇ ಕ್ರಮ ಜರುಗಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಸ್ಪಷ್ಟವಾಗಿ ಹೇಳಿದೆ. ಹತ್ಯಾ ಪ್ರಕರಣದ ತನಿಖೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವುದಕ್ಕಾಗಿ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರವು ಕೈಗೊಳ್ಳಬೇಕು ಎಂದಿದೆ. 

ತನಿಖೆಗೆ ಸಂಬಂಧಿಸಿ ಈವರೆಗೆ ಆಗಿರುವುದು ತೃಪ್ತಿಕರವಲ್ಲ ಎಂಬುದನ್ನು ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರೂ ಒಪ್ಪಿಕೊಂಡರು. ತನಿಖೆ ಯಲ್ಲಿ ಆಗಿರುವ ಎಲ್ಲ ಲೋಪಗಳು ನಾಳೆಯೊಳಗೆ (ಶನಿವಾರ) ಸರಿ ಆಗಲಿದೆ. ಏಕೆಂದರೆ, ಸಂದೇಶವು ರವಾನೆ ಆಗಿದೆ ಎಂದು ಅವರು ಹೇಳಿದರು. 

‘ರಾಜ್ಯ ಸರ್ಕಾರವು ಕೈಗೊಂಡಿರುವ ವಿವಿಧ ಕ್ರಮಗಳನ್ನು ವಕೀಲರು ವಿವರಿಸಿದ್ದಾರೆ. ಸ್ಥಿತಿಗತಿ ವರದಿಯನ್ನೂ ಸಲ್ಲಿಸಲಾಗಿದೆ. ಆದರೆ, ಕೈಗೊಂಡ ಕ್ರಮಗಳು ತೃಪ್ತಿಕರವಲ್ಲ. ಸರಿಯಾದ ದಿಸೆಯಲ್ಲಿ ಕೈಗೊಂಡ ಕ್ರಮಗಳನ್ನು ಮುಂದಿನ ವಿಚಾರಣೆಯ ಸಂದರ್ಭದಲ್ಲಿ ವಕೀಲರು ತಿಳಿಸಲಿದ್ದಾರೆ. ಬೇರೊಂದು ಸಂಸ್ಥೆಯ ಮೂಲಕ ತನಿಖೆ ನಡೆಸುವ ಬಗ್ಗೆಯೂ ಅವರು ಯೋಚನೆ ಮಾಡಲಿದ್ದಾರೆ’ ಎಂದು ಪೀಠವು ಆದೇಶದಲ್ಲಿ ಹೇಳಿದೆ.   

‘ನಾವು ಯಾವುದೇ ಹೇಳಿಕೆ ನೀಡುವುದಿಲ್ಲ. ಕೆಲವು ಕಾರಣಗಳಿಂದಾಗಿ ಸಿಬಿಐ ತನಿಖೆ ಸಾಧ್ಯವಿಲ್ಲ. ಕಾರಣ ನಿಮಗೆ ತಿಳಿದಿದೆ. ಪ್ರಕರಣದಲ್ಲಿ ಒಳಗೊಂಡ ವ್ಯಕ್ತಿಗಳ ಕಾರಣಕ್ಕೂ ಸಿಬಿಐ ತನಿಖೆಯ ಬಗ್ಗೆ ಆಸಕ್ತಿ ಇಲ್ಲ (ಸಿಬಿಐ ಕೇಂದ್ರ ಗೃಹ ಖಾತೆಯ ಅಧೀನದಲ್ಲಿದೆ. ಆರೋಪಿ ಆಶಿಶ್‌ ಮಿಶ್ರಾ ಅವರ ತಂದೆ ಅಜಯ್‌ ಮಿಶ್ರಾ ಗೃಹ ಖಾತೆಯ ರಾಜ್ಯ ಸಚಿವರಾಗಿದ್ದಾರೆ). ಹಾಗಾಗಿ, ತನಿಖೆಗೆ ಬೇರೆ ಮಾರ್ಗ ಹುಡುಕಿಕೊಳ್ಳಬೇಕು’ ಎಂದು ಪೀಠವು ಹೇಳಿದೆ. 

‘ಹೊಣೆಗಾರಿಕೆಯುಳ್ಳ ಸರ್ಕಾರ, ಹೊಣೆಗಾರಿಕೆಯುಳ್ಳ ಪೊಲೀಸ್‌ ಅಧಿಕಾರಿಗಳು ಮತ್ತು ವ್ಯವಸ್ಥೆ ಇರಬೇಕು ಎಂದು ನಾವು ಬಯಸುತ್ತೇವೆ. ಗುಂಡೇಟು ಮತ್ತು ಕೊಲೆಯ ಗಂಭೀರ ಪ್ರಕರಣ ಇದು. ರೈತರ ಮೇಲೆ ಹರಿಸಲಾದ ವಾಹನದಲ್ಲಿ ಆರೋಪಿ ಇದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಗುಂಡಿನ ಗಾಯ ಇರಲಿಲ್ಲ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಹೇಳಿರುವುದೇ ಆರೋಪಿಯನ್ನು ವಶಕ್ಕೆ ಪಡೆಯದೆ ಇರಲು ಕಾರಣವಾಯಿತೇ’ ಎಂದು ಪೀಠವು ಪ್ರಶ್ನಿಸಿದೆ. 

ಈಗ ಇರುವ ತನಿಖಾಧಿಕಾರಿಗಳನ್ನು ಮುಂದುವರಿಸುವುದರ ಬಗ್ಗೆಯೂ ಪೀಠವು ಆಕ್ಷೇಪ ವ್ಯಕ್ತಪಡಿಸಿದೆ.

ಈಗಿನ ಅಧಿಕಾರಿಗಳ ನಡವಳಿಕೆಯನ್ನು ಗಮನಿಸಿದರೆ ಉತ್ತಮ ತನಿಖೆ ನಡೆಯುವುದು ಸಾಧ್ಯವಿಲ್ಲ ಎಂದು ಅನಿಸುತ್ತದೆ. ಅವರು ಸಾಕ್ಷ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡದಂತೆ ನೋಡಿಕೊಳ್ಳಿ. ಬೇರೊಂದು ಸಂಸ್ಥೆಯು ತನಿಖೆ ಕೈಗೆತ್ತಿಕೊಳ್ಳುವವರೆಗೆ ಸಾಕ್ಷ್ಯಗಳನ್ನು ಸಂರಕ್ಷಿಸಲು ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಿ ಎಂದು ಪೀಠವು ಹೇಳಿದೆ. ‘ಗೃಹ ಕಾರ್ಯದರ್ಶಿ ಮತ್ತು ಪೊಲೀಸ್‌ ಮಹಾನಿರ್ದೇಶಕರ ಜತೆಗೆ ನಾನೇ ನೇರವಾಗಿ ಮಾತನಾಡುತ್ತೇನೆ. ವಿಶ್ವಾಸ ಉಳಿಸಿಕೊಳ್ಳಲು ಹೇಳುತ್ತೇನೆ. ಇದಕ್ಕಿಂತ ಹೆಚ್ಚು ಏನನ್ನೂ ಹೇಳಲಾರೆ’ ಎಂದು ಸಾಳ್ವೆ ಪೀಠಕ್ಕೆ ತಿಳಿಸಿದರು.  

ಇದೇ 20ರಂದು ಮುಂದಿನ ವಿಚಾರಣೆ ನಡೆಯಲಿದೆ. 

‘ಆರೋಪಿಯನ್ನು ಗೋಗರೆಯುವುದು ಏಕೆ?’

ಆರೋಪಿಯ ಬಗ್ಗೆ ಪೊಲೀಸರು ತಳೆದಿರುವ ಧೋರಣೆಯನ್ನು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. ತನಿಖೆಗೆ ಹಾಜರಾಗುವಂತೆ ಆರೋಪಿಗೆ ಸಮನ್ಸ್‌ ನೀಡಲಾಗಿದೆ. ಅವರು ಸ್ವಲ್ಪ ಸಮಯ ಕೇಳಿದ್ದಾರೆ ಎಂದು ಸಾಳ್ವೆ ತಿಳಿಸಿದರು. 

ಶುಕ್ರವಾರ ಅವರು ಹಾಜರಾಗಿಲ್ಲ. ಶನಿವಾರ ಬೆಳಿಗ್ಗೆ 11 ಗಂಟೆಗೆ ಹಾಜರಾಗಲು ಸೂಚಿಸಲಾಗಿದೆ. ಶನಿವಾರವೂ ಹಾಜರಾಗದಿದ್ದರೆ ಅವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾಳ್ವೆ ವಿವರಿಸಿದರು. 

‘ಸಾಳ್ವೆ ಅವರೇ, ಆರೋಪಗಳು ಗಂಭೀರವಾಗಿವೆ. ಅದರ ಸತ್ಯಾಂಶಗಳ ಬಗ್ಗೆ ಈಗ ಯೋಚನೆ ಮಾಡುವುದು ಬೇಡ. ಆದರೆ, ಉತ್ತರ ಪ್ರದೇಶದ ವಕೀಲರು ಸಲ್ಲಿಸಿರುವ ಎಫ್‌ಐಆರ್‌ ಪ್ರತಿಯ ಪ್ರಕಾರ, ಸೆಕ್ಷನ್‌ 302ರ ಅಡಿಯಲ್ಲಿ (ಕೊಲೆ) ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಾಗುವ ಎಲ್ಲ ಆರೋಪಿಗಳನ್ನೂ ಹೀಗೆಯೇ ನಡೆಸಿಕೊಳ್ಳಲಾಗುವುದೇ? ನೋಟಿಸ್‌ ಕಳುಹಿಸಿ ದಯವಿಟ್ಟು ಬನ್ನಿ, ದಯವಿಟ್ಟು ತನಿಖೆಗೆ ಸಹಕರಿಸಿ ಎಂದು ಗೋಗರೆಯ ಲಾಗುವುದೇ’ ಎಂದು ಪೀಠವು ತರಾಟೆಗೆ ತೆಗೆದುಕೊಂಡಿದೆ. 

‘‍‍ಪುರಾವೆ ಇಲ್ಲದೆ ಬಂಧಿಸಲಾಗದು’

ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಅವರನ್ನು ಬಂಧಿಸದೇ ಇರುವುದನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತನಾಡಿದ್ದಾರೆ. 

ಭಾನುವಾರ ನಡೆದ ಘಟನೆಯ ಬಗ್ಗೆ ಇದೇ ಮೊದಲಿಗೆ ಯೋಗಿ ಮಾತನಾಡಿದ್ದಾರೆ. ‘ಕೇವಲ ಅರೋಪಗಳ ಆಧಾರದಲ್ಲಿ ನಾವು ಯಾರನ್ನೂ ಬಂಧಿಸಲಾಗದು. ಪುರಾವೆ ಇದ್ದರೆ ಮಾತ್ರ ಬಂಧನ ಸಾಧ್ಯ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುರಾವೆಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಸುದ್ದಿ ವಾಹಿನಿಯೊಂದಕ್ಕೆ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು