ಮಂಗಳವಾರ, ಆಗಸ್ಟ್ 16, 2022
30 °C

ಸರ್ಕಾರದ ಕೈ ಹಿಡಿದ ಜೆಡಿಎಸ್: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಮಂಡಿಸಿದ ಭೂ ಸುಧಾರಣಾ ಕಾಯ್ದೆ (ಎರಡನೇ ತಿದ್ದುಪಡಿ)–2020 ಮಸೂದೆಗೆ ವಿಧಾನಸೌಧದ ಹೊರಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದ ಜೆಡಿಎಸ್‌ ಸದಸ್ಯರು, ವಿಧಾನಪರಿಷತ್‌ನಲ್ಲಿ ಬೆಂಬಲ ನೀಡುವ ಮೂಲಕ ಮಸೂದೆ ಅಂಗೀಕಾರಕ್ಕೆ ಕೈ ಜೋಡಿಸಿದರು.

ಮಸೂದೆಯ ಮೇಲೆ ಪರಿಷತ್‌ನಲ್ಲಿ ಮಂಗಳವಾರ ನಡೆದ ‘ವಿಭಜನೆ ಮತ’ ಸಂದರ್ಭದಲ್ಲಿ ಮರಿತಿಬ್ಬೇಗೌಡ ಬಿಟ್ಟು ಉಳಿದ ಎಲ್ಲ ಜೆಡಿಎಸ್‌ ಸದಸ್ಯರು ಬೆಂಬಲ ಸೂಚಿಸಿದರು. ಕಾಂಗ್ರೆಸ್‌ ಸದಸ್ಯರು ವಿರೋಧಿಸಿದರು. ಮಸೂದೆ ಪರ 37 ಹಾಗೂ ವಿರುದ್ಧ 21 ಮತಗಳು ಬಿದ್ದವು.

ಹಿಂದಿನ ಅಧಿವೇಶನದಲ್ಲಿ ಮಸೂದೆಗೆ ಅಂಗೀಕಾರ ದೊರೆತಿರಲಿಲ್ಲ. ಈ ಮಸೂದೆಯ ಮೇಲಿನ ಚರ್ಚೆಯ ಬಳಿಕ, ಅನುಮೋದನೆ ನೀಡುವಂತೆ ಕಂದಾಯ ಸಚಿವ ಆರ್‌. ಅಶೋಕ  ಮನವಿ ಮಾಡಿಸಿದರು. ಮಸೂದೆಯನ್ನು ಧ್ವನಿಮತದ ಬದಲು, ಮತಕ್ಕೆ ಹಾಕುವಂತೆ ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಅದಕ್ಕೆ ಒಪ್ಪಿದ ಸಭಾಪತಿ ‘ವಿಭಜನೆ ಮತ’ ಮುಂದಾದರು.

ಅದಕ್ಕೂ ಮೊದಲು ನಡೆದ ಚರ್ಚೆಗೆ ಉತ್ತರ ನೀಡಿದ ಸಚಿವ ಅಶೋಕ, ‘ಕೃಷಿಯಲ್ಲಿ ಆಸಕ್ತಿ ಇರುವ ಯುವ ಸಮುದಾಯದವರನ್ನು ಕೃಷಿ ಕ್ಷೇತ್ರದತ್ತ ಸೆಳೆಯುವ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು, ಈ ಉದ್ದೇಶದಿಂದ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಸಮರ್ಥಿಸಿದರು.

ನಗೆಗಡಲು: ಸದಸ್ಯರ ಮತ ವಿಭಜನೆ‌ ನಡೆಸಿದ ಸಂದರ್ಭ ಪರ ಹಾಗೂ ವಿರುದ್ಧ ತಲೆ ಎಣಿಕೆ ನಡೆಸಿದ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ, ಎಡಭಾಗದ ನಾಲ್ಕನೇ ಸಾಲು ಎನ್ನುವ ಬದಲು ಎಡಭಾಗದ ನಾಲ್ಕನೇ ಸೋಲು ಎಂದು ಬಾಯ್ತಪ್ಪಿ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು