ಸೋಮವಾರ, ಆಗಸ್ಟ್ 8, 2022
24 °C

ನಿಮಗೆ ವಯಸ್ಸಾಗಿಲ್ಲವೇ? ವಿಶ್ವನಾಥ್‌ಗೆ ರೇಣುಕಾಚಾರ್ಯ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕುರಿತು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್ ಆಡಿರುವ ಮಾತುಗಳು ಯಡಿಯೂರಪ್ಪ ಬಣದ ಶಾಸಕರನ್ನು ಕೆರಳಿಸಿದ್ದು, ತೀವ್ರ ವಾಗ್ದಾಳಿ ನಡೆಸಿದ್ದಾರೆ.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಹಿಂದಿನ ವೇಗ ಇಲ್ಲ. ಅವರಿಗೆ ವಯಸ್ಸಾಗಿದ್ದು ಪ್ರಭಾವ ಮಬ್ಬಾಗಿದೆ. ವರಿಷ್ಠರು ಹೇಳಿದರೆ ರಾಜೀನಾಮೆಗೆ ಸಿದ್ಧರಿರುವ ಅವರು ಕೇವಲ ಮಾರ್ಗದರ್ಶಕರಾಗಿ ಮುಂದುವರಿಯಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ‘ವಿಧಾನಸಭಾ ಚುನಾವಣೆಯಲ್ಲಿ ವಿಶ್ವನಾಥ್‌ ಅವರು ಸೋತಿದ್ದರೂ ಅವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರು. ನಿಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಈ ರೀತಿ ಮಾತನಾಡುವುದು ಸರಿಯಲ್ಲ’ ಎಂದು ಹೇಳಿದ್ದಾರೆ.

‘ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಹೇಳುತ್ತೀರಿ, ನಿಮ್ಮ ವಯಸ್ಸೆಷ್ಟು. ಹತಾಶೆಯಿಂದ ಮಾತನಾಡಬಾರದು. ಯಡಿಯೂರಪ್ಪ ಕೋವಿಡ್‌ ಸಂದರ್ಭದಲ್ಲೂ ಯುವಕರಂತೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಅದು ನಿಮ್ಮ ಮಬ್ಬು ಕಣ್ಣಿಗೆ ಕಾಣುವುದಿಲ್ಲವೆ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ... ಮುಖ್ಯಮಂತ್ರಿ ಯಡಿಯೂರಪ್ಪಗೆ ವಯಸ್ಸಾಗಿದ್ದು, ಪ್ರಭಾವ ಮಬ್ಬಾಗಿದೆ: ಎಚ್.ವಿಶ್ವನಾಥ್

‘ನೀವು ಮೂಲ ಬಿಜೆಪಿಯವರೇನಲ್ಲ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿಯವರನ್ನು ಆಯ್ಕೆ ಮಾಡುವ ಹಕ್ಕು ಇರುವುದು ಶಾಸಕರಿಗೆ ಮಾತ್ರ. ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಶಾಸಕ ಹರತಾಳ್‌ ಹಾಲಪ್ಪ ಅವರೂ ತೀಕ್ಷ್ಣ ಹೇಳಿಕೆ ನೀಡಿದ್ದು, ವಿಶ್ವನಾಥ್‌ ಅವರು ಸಾಹಿತಿ ವಿಚಾರವಂತರು ಎಂಬ ಕಾರಣಕ್ಕೆ ಅವರಿಗೆ ಗೌರವ ಕೊಡ್ತಾ ಬಂದಿದ್ದೆವು. ಆದರೆ ಅವರಿಗೆ ಅರಳುಮರುಳಾಗಿದೆ. ಅವರ ಮನಸ್ಥಿತಿ ಸರಿ ಇಲ್ಲ’ ಎಂದಿದ್ದಾರೆ.

ಅರೆ ಹುಚ್ಚ: ಬಿಡಿಎ ಅಧ್ಯಕ್ಷರಾಗಿರುವ ಎಸ್‌.ಆರ್‌.ವಿಶ್ವನಾಥ್‌ ಅವರು, ಎಚ್‌ ವಿಶ್ವನಾಥ್‌ ಅವರು ಅರೆ ಹುಚ್ಚ ಎಂದು ಟೀಕಿಸಿದರು. ಕೆಲವರು ಕೊರೊನಾ ವೈರಸ್‌ಗಿಂತ ಹೆಚ್ಚಾಗಿ ಮಾತನಾಡುತ್ತಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಎಚ್‌.ವಿಶ್ವನಾಥ್ ಅವರು, ‘ಹೌದಪ್ಪ ನಾನು ಅರೆ ಹುಚ್ಚ. ನೀವು ಬಿಡಿಎದಲ್ಲಿ ಕುಳಿತು ಲೂಟಿ ಮಾಡುತ್ತಿದ್ದೀಯಾ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು