ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬದಲಾವಣೆ ವಿಚಾರ: ಬಿಜೆಪಿಯಲ್ಲಿ ಹೊರಗೆ ತಣ್ಣಗೆ, ಒಳಗೆ ಧಗೆ

ಮುಗಿಯದ ಆಂತರಿಕ ಸಮರ: ಯಡಿಯೂರಪ್ಪ ವಿರುದ್ಧ ಸೆಟೆದು ನಿಂತ ಯೋಗೇಶ್ವರ್
Last Updated 27 ಮೇ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ವಿಷಯ ಬಿಜೆಪಿಯಲ್ಲಿ ಹೊಗೆಯಾಡಲಾರಂಭಿಸಿದೆ. ಎಲ್ಲವೂ ತಣ್ಣಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಒಳಗೆ ಅಸಹನೆಯ ಧಗೆ ಕುದಿಯತೊಡಗಿದೆ.

ಒಂದು ವಾರದಿಂದ ಒಬ್ಬ ಸಚಿವ ಮತ್ತು ಒಬ್ಬ ಶಾಸಕನ ದೆಹಲಿ ಭೇಟಿ ಆಡಳಿತ ಪಕ್ಷದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿದೆ. ನಾಯಕತ್ವ ಬದಲಾವಣೆ, ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಳದ ವಿಷಯಗಳೂ ಸೇರಿದಂತೆ ವಿವಿಧ ಸಂಗತಿಗಳ ಬಗ್ಗೆ ಚರ್ಚಿಸಲು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವಂತೆ ಮುಖ್ಯಮಂತ್ರಿಯ ಮೇಲೆ ಒತ್ತಡವೂ ಹೆಚ್ಚ ತೊಡಗಿದೆ. ಭಿನ್ನಮತದ ಚಟುವಟಿಕೆ ಮೆಲ್ಲನೆ ಬಿರುಸು ಪಡೆಯುತ್ತಿದೆ.

ಈ ಮಧ್ಯೆ, ದೂರು ಹೊತ್ತುಕೊಂಡು ದೆಹಲಿಗೆ ಹೋದವರಿಗೆ ವರಿಷ್ಠರ ‘ದರ್ಶನ’ ಭಾಗ್ಯದ ಸಿಗದ ಕಾರಣಕ್ಕೆ ವಾಪಸ್‌ ಆಗಿದ್ದಾರೆ ಎಂಬುದು ಒಂದು ಮೂಲಗಳ ಹೇಳಿಕೆ. ಆದರೆ, ದೆಹಲಿಯಿಂದ ವಾಪಸ್‌ ಬಂದಿರುವ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಅವರು ಗುರುವಾರ ಆಡಿರುವ ಮಾತಿನ ಧಾಟಿ ನೋಡಿದರೆ, ವರಿಷ್ಠರೇ ಅವರ ಬೆಂಬಲಕ್ಕೆ ನಿಂತಂತೆ ಅನುಮಾನ ಬರುತ್ತಿದೆ ಎಂಬ ಮಾತುಗಳು ಪಕ್ಷ ನಿಷ್ಠ ಶಾಸಕರ ವಲಯದಿಂದಲೇ ಹರಿದುಬರತೊಡಗಿವೆ.

‘ನಾಯಕತ್ವ ಬದಲಾವಣೆಯ ಚಟುವಟಿಕೆ ಹಾಗೂ ಶಾಸಕರ ಪ್ರತ್ಯೇಕ ಸಭೆಗಳು ನಡೆಯುತ್ತಿರುವುದು ನೂರಕ್ಕೆ ನೂರು ನಿಜ’ ಎಂದು ಕಂದಾಯ ಸಚಿವ ಆರ್‌.ಅಶೋಕ ಬುಧವಾರ(ಮೇ 26) ಹೇಳಿದ್ದರು. ಈ ಬೆನ್ನಲ್ಲೇ, ಸಚಿವ ಯೋಗೇಶ್ವರ್‌ ಅವರು ಯಡಿಯೂರಪ್ಪ ಮಗ ಬಿ.ವೈ.ವಿಜಯೇಂದ್ರ ವಿರುದ್ಧ ಪರೋಕ್ಷವಾಗಿ ಟೀಕಾ ಪ್ರಹಾರ ನಡೆಸಿದ್ದಾರೆ. ತಮ್ಮ ದೆಹಲಿ ಭೇಟಿಯನ್ನೂ ಸಮರ್ಥಿಸಿಕೊಂಡಿದ್ದಾರೆ. ಇದರಿಂದ ಕುಪಿತರಾಗಿರುವ ಯಡಿಯೂರಪ್ಪ ಅವರ ಆಪ್ತ ಬಣದ ಶಾಸಕರು ಯೋಗೇಶ್ವರ್‌ ಮೇಲೆ ಮುಗಿಬಿದ್ದಿದ್ದಾರೆ.

ಕೊರೊನಾ ಎರಡನೇ ಅಲೆಯ ಬಳಿಕಬಿಜೆಪಿ ರಾಜ್ಯ ಘಟಕ, ಸರ್ಕಾರದ ವಿಚಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿದೆ. ಯಡಿಯೂರಪ್ಪ ವಿಶೇಷ ಆರ್ಥಿಕ ಪ್ಯಾಕೇಜ್‌ ಪ್ರಕಟಿಸಿದಾಗಲೂ ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಸಚಿವರು–ಶಾಸಕರು ಪರಸ್ಪರ ಟೀಕಿಸಿಕೊಳ್ಳುತ್ತಾ, ಆಂತರಿಕ ರಾಜಕೀಯವನ್ನು ಬೀದಿಗೆ ತಂದಿದ್ದರೂ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಈ ಬಗ್ಗೆ ತುಟಿಬಿಚ್ಚಿಲ್ಲ. ಇದು ಕೂಡ ನಾನಾ ರೀತಿಯ ಚರ್ಚೆಗಳನ್ನು ಹುಟ್ಟು ಹಾಕಿದೆ.

ಸಂಪುಟ ಸಭೆಯಲ್ಲೂ ಚರ್ಚೆ: ಯೋಗೇಶ್ವರ್ ಅವರ ದೆಹಲಿ ಭೇಟಿ ವಿಚಾರವನ್ನು ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಪ್ರಸ್ತಾಪಿಸಿದ ಕೆಲವು ಸಚಿವರು, ಕೋವಿಡ್‌ ಸಂಕಷ್ಟದಲ್ಲಿ ಈ ರೀತಿಯ ಬೆಳವಣಿಗೆ ಆಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಯೋಗೇಶ್ವರ್ ಅವರಿಂದ ವಿವರಣೆ ಕೇಳಬೇಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ‘ಈರೀತಿ ವರ್ತನೆ ಸಹಿಸಿಕೊಳ್ಳಬೇಕೆ? ಸಂಪುಟದಿಂದ ಕೈಬಿಡುವುದು ಸೂಕ್ತ ಎಂದು ಮುಖ್ಯಮಂತ್ರಿ ಅವರಿಗೆ ಸಲಹೆ ನೀಡಿದರು’ ಎಂದು ಮೂಲಗಳುಹೇಳಿವೆ.

‘ಹಲವರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲೂ ಈ ರೀತಿ ವರ್ತನೆ ಶೋಭೆ ತರುವಂತಹದ್ದಲ್ಲ. ನಾಯಕತ್ವ ಬದಲಾವಣೆಗೆ ಹೊರಟವರು ಅರ್ಥ ಮಾಡಿಕೊಳ್ಳಬೇಕು ಎಂದು ಕೆಲವು ಸಚಿವರು ಹೇಳಿದರು’ ಮೂಲಗಳು ತಿಳಿಸಿವೆ.

ಉತ್ತರ ಕೊಟ್ಟು ಕಳಿಸಿದ್ದಾರಲ್ಲ:ಯಡಿಯೂರಪ್ಪ
‘ಯಾರೋ ಒಬ್ಬರು ಎಲ್ಲಿಗೋ ಹೋಗಿದ್ದಾರೆ ಎಂದರೆ ನಾನ್ಯಾಕೆ ಮಾತನಾಡಬೇಕು. ಅವರಿಗೆ ಉತ್ತರ ಕೊಟ್ಟು ಕಳಿಸಿದ್ದಾರಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ರಾಜಕೀಯ ಬೆಳವಣಿಗೆಗಳ ಕುರಿತು ಸುದ್ದಿಗಾರರ ಪ್ರಶ್ನೆಗೆ ತುಸು ಸಿಟ್ಟಿನಿಂದಲೇ ಅವರು ಪ್ರತಿಕ್ರಿಯಿಸಿದರು.

‘ನನ್ನ ಮುಂದೆ ಈಗ ಇರುವುದು ಕೋವಿಡ್‌ ನಿರ್ವಹಣೆ ಮಾಡುವುದು ಮತ್ತು ಜನರನ್ನು ಕಾಪಾಡುವುದು. ಅದಷ್ಟೇ ನನ್ನ ಆದ್ಯತೆ’ ಎಂದರು. ‘ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಡ ಇದೆಯೇ’ ಎಂಬ ಪ್ರಶ್ನೆಗೆ, ‘ಆ ಬಗ್ಗೆ ನಿಮ್ಮ ಜತೆ ಮಾತನಾಡುವ ಅಗತ್ಯವಿಲ್ಲ’ ಎಂದು ಮಾಧ್ಯಮದವರಿಗೆ ತಿರುಗಿಸಿ ಹೇಳಿದರು.

ಮಗನ ಅಧಿಕಾರ ಚಲಾವಣೆ ಒಪ್ಪಲ್ಲ:ಸಿ.ಪಿ.ಯೋಗೇಶ್ವರ್
‘ಸಚಿವನಾಗಿ ನನ್ನ ಹೆಸರಲ್ಲಿ ನನ್ನ ಮಗ ಅಧಿಕಾರ ಚಲಾಯಿಸುವುದನ್ನು ಒಪ್ಪುವುದಿಲ್ಲ. ನನ್ನ ಹೆಸರಲ್ಲಿ ಬೇರೊಬ್ಬರು ಅಧಿಕಾರ ಚಲಾಯಿಸುವುದನ್ನೂ ಒಪ್ಪಲ್ಲ. ಇದರ ಸೂಕ್ಷ್ಮ ಏನೆಂಬುದು ನಿಮಗೆ ಅರ್ಥ ಆಗುತ್ತೆ’ ಎಂದು ಸಚಿವ ಸಿ.ಪಿ.ಯೋಗೇಶ್ವರ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧಹರಿಹಾಯ್ದಿದ್ದಾರೆ.

‘ಇಲ್ಲಿರುವುದು ಬಿಜೆಪಿ ಸರ್ಕಾರವಲ್ಲ. ಮೂರು ಪಕ್ಷಗಳ ಸರ್ಕಾರ. ನಮ್ಮ ಪಕ್ಷಕ್ಕೆ ವಲಸೆ ಬಂದವರ ಬಗ್ಗೆ ಮಾತನಾಡುತ್ತಿಲ್ಲ. ಇತರ ಪಕ್ಷಗಳ ಜತೆಗಿನ ಹೊಂದಾಣಿಕೆ ಸರ್ಕಾರ’ ಎಂದು ಅವರು ಸುದ್ದಿಗಾರರಿಗೆ ಹೇಳಿದರು.

‘ದೆಹಲಿಗೆ ಹೋಗುತ್ತಲೇ ಇರುತ್ತೇನೆ. ನನಗೆ ನನ್ನದೇ ಆದ ಸಮಸ್ಯೆಗಳಿವೆ. ಅದಕ್ಕೆ ಪರಿಹಾರ ಕಂಡುಕೊಳ್ಳಲು ನಾಯಕರನ್ನು ಭೇಟಿ ಮಾಡಲು ಹೋಗುತ್ತೇನೆ. ಅದು ಏನೆಂದು ಸಂದರ್ಭ ಬಂದಾಗ ಹೇಳುತ್ತೇನೆ’ ಎಂದರು.

‘ನಾಯಕತ್ವ ಬದಲಾವಣೆ ಚರ್ಚೆ ಎಲ್ಲಿಂದ ಹುಟ್ಟಿತು ಗೊತ್ತಿಲ್ಲ. ನಾಯಕತ್ವ ಬದಲಾವಣೆ ಶಕ್ತಿ ನನಗಿಲ್ಲ’ ಎಂದರು.

‘2023 ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಆ ಚುನಾವಣೆಯಲ್ಲಿ ನಾನೂ ಗೆಲ್ಲಬೇಕು. ಆ ಬಗ್ಗೆಯಷ್ಟೇ ನನ್ನ ಗಮನ. ಇಂದಿನ ಸ್ಥಿತಿಯಲ್ಲಿ ನಾವು ಗೆಲ್ಲಲು ಸಾಧ್ಯವೆ’ಎಂದು ಪ್ರಶ್ನಿಸಿದರು.

***

ಸರ್ಕಾರದಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ವಯಸ್ಸನ್ನೂ ಲೆಕ್ಕಿಸದೇ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅಸ್ಥಿರತೆ ಮೂಡಿಸುವ ಪ್ರಯತ್ನ ಸರಿಯಲ್ಲ.
-ವಿ.ಸೋಮಣ್ಣ, ವಸತಿ ಸಚಿವ

***

ನಿನಗೆ (ಯೋಗೇಶ್ವರ್) ತಾಕತ್ತಿದ್ದರೆ ನಾಯಕತ್ವ ಬದಲಾವಣೆ ಮಾಡು. ಅವನೊಬ್ಬ 420, ಮೆಗಾಸಿಟಿ ಯೋಜನೆಯಲ್ಲಿ ಮೋಸ ಮಾಡಿದ ವ್ಯಕ್ತಿ. ಯೋಗೇಶ್ವರ್‌ ಅವರನ್ನು ವಜಾ ಮಾಡಲಿ. ಯಡಿಯೂರಪ್ಪ ಅವರದು ಸಮರ್ಥ ನಾಯಕತ್ವ.
-ಎಂ.ಪಿ.ರೇಣುಕಾಚಾರ್ಯ, ಶಾಸಕ

***

ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನು ಎಂಎಲ್‌ಸಿ ಮಾಡಿ, ಸಚಿವರನ್ನಾಗಿ ಮಾಡಿದ್ದಕ್ಕೆ ಪಕ್ಷ ಈ ಸ್ಥಿತಿ ಅನುಭವಿಸಬೇಕಾಗಿ ಬಂದಿದೆ. ಮನೆ ದೇವ್ರಿಗೆ ಬ್ಲ್ಯಾಕ್ ಮೇಲ್‌ ಮಾಡ್ತಾ ಇದ್ದಾನೆ.
-ರಾಜೂಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT