ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಚಿರತೆ ಪಾಲಾಗುತ್ತಿರುವ ಹರಕೆ ಕರುಗಳು! ಗೋಶಾಲೆಗಳಲ್ಲೂ ಇಲ್ಲ ಜಾಗ

ಕಾಡಂಚಿನಲ್ಲಿರುವ ಗವಿರಂಗನಾಥ ಸ್ವಾಮಿ ದೇವಾಲಯ, ಸಾಗಣೆಗೆ ಅವಕಾಶ ಕೊಡದ ಗೋರಕ್ಷಕರು
Last Updated 4 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಕೆ.ಆರ್‌.ಪೇಟೆ ತಾಲ್ಲೂಕು ಗವಿರಂಗನಾಥಸ್ಥಾಮಿ ದೇವಾಲಯಕ್ಕೆ ಹರಕೆಗೆ ಬಿಟ್ಟ ಕರುಗಳು ಚಿರತೆಗಳ ಪಾಲಾಗುತ್ತಿವೆ.

ಗವಿರಂಗನಾಥ ಸ್ವಾಮಿ ದೇವಾಲಯ ಸಂತೇಬಾಚಹಳ್ಳಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿದೆ. ಈ ದೇವಾಲಯಕ್ಕೆ ರೈತರು ಹಸುವಿನ ಕರುಗಳನ್ನು ಹರಕೆಗೆ ಬಿಡುವುದು ಸಂಪ್ರದಾಯ. ಮೊದಲು ದೇಸಿ ತಳಿ ಹಸುವಿನ ಕರುಗಳನ್ನು ಮಾತ್ರ ಬಿಡುತ್ತಿದ್ದರು. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ಬಂದ ನಂತರ, ಮಿಶ್ರತಳಿ ಹಸುವಿನ ಕರುಗಳನ್ನೂ ಹರಕೆಗೆ ಬಿಡುತ್ತಿದ್ದಾರೆ. ಕೆಲವರು, ಹರಕೆಯ ಹೊರತಾಗಿಯೂ ದೇವಾಲಯದ ಆವರಣದಲ್ಲಿ ಕರುಗಳನ್ನು ಬಿಟ್ಟು ಹೋಗುತ್ತಿದ್ದಾರೆ.

‘ಮಿಶ್ರತಳಿ ಹಸುವಿನ ಗಂಡು ಕರುಗಳು ಬೆಳಿಗ್ಗೆ 2 ಲೀಟರ್‌, ಸಂಜೆ 2 ಲೀಟರ್‌ ಹಾಲು ಕುಡಿಯುತ್ತವೆ. ಅಷ್ಟೊಂದು ಹಾಲನ್ನು ಕರುವಿಗೆ ಕೊಟ್ಟರೆ ರೈತರು ಹಣ ಸಂಪಾದನೆ ಮಾಡುವುದು ಹೇಗೆ? ಹೆಣ್ಣು ಕರುಗಳನ್ನು ಸಾಕಿದರೆ ಮುಂದೆ ಗರ್ಭ ಧರಿಸುತ್ತವೆ. ಗಂಡು ಕರು ಸಾಕುವುದರಿಂದ ಲಾಭವಿಲ್ಲ. ಹೀಗಾಗಿ ಗವಿರಂಗಪ್ಪನ ಗುಡಿ ಬಳಿ ಬಿಟ್ಟು ಬರುತ್ತಾರೆ’ ಎಂದು ಬಿಲ್ಲೇನಹಳ್ಳಿ ಗ್ರಾಮದ ರೈತರೊಬ್ಬರು ತಿಳಿಸಿದರು.

ಕರುಗಳ ಹರಾಜು: ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ತಹಶೀಲ್ದಾರ್‌ ಪ್ರತಿ ವರ್ಷ ಹರಕೆ ಕರುಗಳನ್ನು ಹರಾಜು ಹಾಕುತ್ತಾರೆ. ಕಸಾಯಿಖಾನೆಗೆ ಮಾರಾಟ ಮಾಡದಂತೆ ಷರತ್ತು ವಿಧಿಸಿ, ಕರುಗಳ ಒಡೆತನದ ಹಕ್ಕನ್ನು ಮಾತ್ರ ನೀಡುತ್ತಾರೆ. ಆದರೆ, ಒಡೆತನದ ಹಕ್ಕು ಪಡೆದವರು ವರ್ತಕರಿಗೆ ಮಾರಾಟ ಮಾಡುತ್ತಾರೆ ಎಂಬ ಆರೋಪ ಮೊದಲಿನಿಂದಲೂ ಇದೆ.

ಹರಾಜಿನ ಮೂಲಕ ಕರುಗಳನ್ನು ಪಡೆದವರಿಗೆ ಅವುಗಳನ್ನು ಸಾಗಿಸಲು ಸಾಧ್ಯವಾಗದ ಕಾರಣ, ಅವು ಕಾಡುಪ್ರಾಣಿಗಳ ಬಾಯಿಗೆ ತುತ್ತಾಗುತ್ತಿವೆ. ಅಲ್ಲಲ್ಲಿ ಕರುಗಳ ಕಳೇಬರ ಪತ್ತೆಯಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಲ್ಲಿನ ಅರಣ್ಯದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಾಗಿದ್ದು ಮನೆಗಳಿಗೇ ನುಗ್ಗಿ ಕರುಗಳನ್ನು ಹೊತ್ತೊಯ್ದ, ಕೊಂದು ಹಾಕಿದ ಉದಾಹರಣೆಗಳು ಸಾಕಷ್ಟಿವೆ.

ಜನವರಿಯಲ್ಲಿ ರೈತರೊಬ್ಬರು ಹರಾಜಿನಲ್ಲಿ 20 ಕರು ಪಡೆದಿದ್ದರು. ಆ ಕರುಗಳ ಸಾಗಾಟಕ್ಕೆ ಗೋರಕ್ಷಕರು ಬಿಡಲಿಲ್ಲ. ಈ ಕುರಿತು ಪ್ರಕರಣವೂ ದಾಖಲಾಗಿತ್ತು. ಇದನ್ನು ಖಂಡಿಸಿ ರೈತಸಂಘದ ಮುಖಂಡರು ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟಿಸಿದ್ದರು. ದೇವಾಲಯದ ಆವರಣದಲ್ಲಿ ಗೋಶಾಲೆ ತೆರೆಯಲು ಒತ್ತಾಯಿಸಿದ್ದರು. ದೇವಾಲಯದ ಆವರಣದಲ್ಲಿದ್ದ ಕರುಗಳನ್ನು ಸದ್ಯ ಗೋಶಾಲೆಯೊಂದರ ಸಿಬ್ಬಂದಿ ರಕ್ಷಿಸಿದ್ದಾರೆ.‌

‘ನಾವು ಕರುಗಳನ್ನು ಮಾರುವುದಿಲ್ಲ, ಹರಾಜಿನ ಮೂಲಕ ರೈತರಿಗೆ ಒಡೆತನದ ಹಕ್ಕು ನೀಡುತ್ತೇವೆ. ಕರುಗಳನ್ನು ಅವರು ಕಸಾಯಿಖಾನೆಗೆ ಮಾರಾಟ ಮಾಡಿದರೆ ಅಂಥವರ ವಿರುದ್ಧ ಪ್ರಕರಣ ದಾಖಲು ಮಾಡುತ್ತೇವೆ’ ಎಂದು ಕೆ.ಆರ್‌.ಪೇಟೆ ತಹಶೀಲ್ದಾರ್‌ ಕೆ.ಶಿವಮೂರ್ತಿ ಹೇಳಿದರು.

***

ಚಿರತೆಗಳು ಸಾಮಾನ್ಯವಾಗಿ ಕರುಗಳ ಮೇಲೆಯೇ ದಾಳಿ ಮಾಡುತ್ತವೆ. ಸಂತೇಬಾಚಹಳ್ಳಿ ಅರಣ್ಯ ಪ್ರದೇಶದಲ್ಲಿ ಕರುಗಳನ್ನು ಬಿಟ್ಟಿದ್ದರೆ ಅವುಗಳನ್ನು ರಕ್ಷಿಸಲಾಗುವುದು

- ಎನ್‌.ಶಿವರಾಜು, ಉಪ ಅರಣ್ಯ ಸಂರಕ್ಷಣಾಧಿಕಾರಿ

***

ಹೊರೆಯಾದ ಜರ್ಸಿ ಹೋರಿಗರು

ಮೈಸೂರು/ಚಾಮರಾಜನಗರ/ಹಾಸನ/ಚಿಕ್ಕಬಳ್ಳಾಪುರ/ರಾಮನಗರ: ಮೇವು– ನೀರಿನ ಸಮಸ್ಯೆಯಿಂದಾಗಿ, ಚಾಮರಾಜನಗರ ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಸ್ಥರು ನಾಟಿ ಮತ್ತು ಜರ್ಸಿ ಹಸು ಹಾಗೂ ಕರುಗಳನ್ನೂ ಮೇಯಲು ಬಿಡುತ್ತಾರೆ.

ರಾಮನಗರ ಜಿಲ್ಲೆಯಲ್ಲಿ ದೇಗುಲಗಳು ಇಲ್ಲವೇ ಗೋಶಾಲೆಗಳಲ್ಲಿ ಬಿಡು
ತ್ತಿದ್ದಾರೆ. ಜಿಲ್ಲೆಯಲ್ಲಿ ಕೇವಲ ಎರಡು ಅನುದಾನಿತ ಗೋಶಾಲೆಗಳು ಇವೆ. ಇಲ್ಲಿಯೂ ದೇಸಿ ತಳಿಗಳ ಪಾಲನೆಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಎಚ್ಎಫ್‌ ತಳಿಯ ಕರುಗಳನ್ನು ಸಾಕಲು ಸಿದ್ಧರಿಲ್ಲ.

ಹಾಸನ ಜಿಲ್ಲೆಯ ಹಿರೀಸಾವೆ ಭಾಗದಲ್ಲಿ ಕುರುಚಲು ಕಾಡು ಹಾಗೂ ಖಾಲಿ ಕೆರೆಯಂಗಳಕ್ಕೆ ತಂದು ಬಿಡಲಾಗುತ್ತಿದೆ. ‘ಎಚ್ಎಫ್ ಆಥವಾ ಜರ್ಸಿ ಕರುವಿಗೆ ಪ್ರತಿ ನಿತ್ಯ ಕನಿಷ್ಠ ಮೂರು ಲೀಟರ್ ಹಾಲು ಬೇಕು. ದೂರದ ಗೋಶಾಲೆಗೆ ಬಿಡಲು ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಸಮೀಪದ ಕೆರೆ ಅಂಗಳದಲ್ಲಿ ಬಿಡಲಾಗಿದೆ’ ಎನ್ನುತ್ತಾರೆ ಹಿರೀಸಾವೆಯ ರೈತ ರಾಮಕೃಷ್ಣ.

‘ಮೂರು ದಿನ ಹಸುವಿನ ಹಾಲು ಉಣಿಸದಿದ್ದರೆ ಕರುಗಳು ಸತ್ತುಹೋಗುತ್ತವೆ. ಕಾಡಂಚಿಗೆ ಬಿಟ್ಟು ಬಂದರೆ ಕರುಗಳು ಕಾಡು ಪ್ರಾಣಿಗಳಿಗೆ ತುತ್ತಾಗುತ್ತವೆ‌’ ಎನ್ನುತ್ತಾರೆ ಅಗ್ಗುಂದ ಗ್ರಾಮದ ಕುಮಾರಸ್ವಾಮಿ.

‘ಹೋರಿಗರುಗಳನ್ನು ಕಾಡಂಚಿಗೆ ಬಿಟ್ಟರೆ, ಅವು ಒಂದೇ ಕಡೆ ನಿಂತು ಹುಲ್ಲನ್ನೆಲ್ಲ ಮೇಯುತ್ತವೆ. ಆನೆ ಮೊದಲಾದ ಸಸ್ಯಾಹಾರಿ ಪ್ರಾಣಿಗಳಿಗೆ ಹುಲ್ಲು ಸಾಕಾಗುವುದಿಲ್ಲ. ಆಗ ಆನೆಗಳು ಸುತ್ತಮುತ್ತಲ ಜಮೀನಿನ ಕಡೆ ಬರುತ್ತವೆ. ಜಾನುವಾರುಗಳ ಸಂಖ್ಯೆ ಕಾಡಂಚಿನಲ್ಲಿ ಹೆಚ್ಚಿದಂತೆ ಮಾಂಸಹಾರಿ ಪ್ರಾಣಿಗಳು ಅಲ್ಲಿಗೆ ಬರುತ್ತವೆ. ಇದರಿಂದ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತದೆ. ಕಾಡಿನ ಪರಿಸರದಲ್ಲಿ ಮಾನವನ ಯಾವುದೇ ಬಗೆಯ ಹಸ್ತಕ್ಷೇಪವು ತೊಂದರೆಯನ್ನೇ ಹೆಚ್ಚಿಸುತ್ತದೆ’ ಎನ್ನುತ್ತಾರೆ ವನ್ಯಜೀವಿ ತಜ್ಞ ರಾಜಕುಮಾರ್‌.

ಮೈಸೂರಿನ ಪಿಂಜರಪೋಳಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಹಸುಗಳು ಬರುತ್ತಿಲ್ಲ. ‘ಮುಗುಮ್ಮಾಗಿ ಕಸಾಯಿಖಾನೆಗಳು ನಡೆಯುತ್ತಿವೆ. ಮುಂಚೆ ರೈತರಿಗೆ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದವರು, ಈಗ ಕಡಿಮೆ ಹಣಕ್ಕೆ ಖರೀದಿಸುತ್ತಿದ್ದಾರೆ. ಕಸಾಯಿಖಾನೆಯಲ್ಲಿ ಕೊಂದು, ಮಾಂಸವನ್ನು ಪ್ಯಾಕೆಟ್‌ನಲ್ಲಿ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರುತ್ತಿದ್ದಾರೆ’ ಎಂದು ಹೆಸರು ಹೇಳಲು ಬಯಸದ ಪಿಂಜರಪೋಳದ ಕೆಲಸಗಾರರೊಬ್ಬರು ತಿಳಿಸಿದರು.

ಮೇವು ಭದ್ರತೆ ಕಾಯ್ದೆ ಜಾರಿಗೊಳಿಸಿ

‘ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಗೆ ತಂದ ಮೇಲೆ, ಜಾನುವಾರುಗಳಿಗೆ ಆಹಾರ ಒದಗಿಸುವ ಮೇವು ಭದ್ರತೆ ಕಾಯ್ದೆಯನ್ನೂ ಸರ್ಕಾರ ಜಾರಿಗೊಳಿಸಬೇಕು. ಜೊತೆಗೆ ಕೊಟ್ಟಿಗೆ ಭಾಗ್ಯ ಯೋಜನೆಯನ್ನೂ ಕರುಣಿಸಬೇಕು’ ಎಂದು ಒತ್ತಾಯಿಸುತ್ತಾರೆ ಮಂಡ್ಯದ ರೈತ ಮುಖಂಡ ಎಂ.ವಿ.ರಾಜೇಗೌಡ.
ಗಂಡುಕರುಗಳಿಗೆ ಬೀದಿ, ಅಡವಿ ದಿಕ್ಕು

ಚಿಕ್ಕಮಗಳೂರು: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಜಾರಿಯಾದ ನಂತರ ಕಾಫಿನಾಡಿನ ವಿವಿಧೆಡೆ ಗಂಡು ಕರುಗಳನ್ನು ಬೀದಿ, ಅಡವಿ ಪಾಲು ಮಾಡುತ್ತಿರುವುದು ಕಂಡುಬಂದಿದೆ.

ಕಡೂರು ಪಟ್ಟಣದಲ್ಲಿ ಅನಾಥವಾಗಿ ಅಡ್ಡಾಡುತ್ತಿದ್ದ ಗಂಡುಕರುಗಳನ್ನು ವರ್ತಕ ಲಾಲ್‌ ಸಿಂಗ್‌ ಅವರು ಬಾಣಾವರ ಸಮೀಪದ ಶ್ರೀಭಗವಾನ್‌ ಮಹಾವೀರ ಗೋಶಾಲೆಗೆ ಬಿಟ್ಟಿದ್ದಾರೆ. ‘ಮಲ್ಲೇಶ್ವರ, ಎಂ.ಕೋಡಿಹಳ್ಳಿಯಿಂದ ಎಂಟು ಕರುಗಳನ್ನು ತಂದು ಬಿಟ್ಟಿದ್ದರು. ಅವುಗಳನ್ನು ಗೋಶಾಲೆಗೆ ತಲುಪಿಸಿದ್ದೇವೆ’ ಎಂದು ಲಾಲ್‌ಸಿಂಗ್‌ ‘ಪ್ರಜಾವಾಣಿಗೆ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT