ಗುರುವಾರ , ಜನವರಿ 27, 2022
27 °C

ತಪ್ಪು ಮುಚ್ಚಿಕೊಳ್ಳಲು ಕಾರಜೋಳ ಸುಳ್ಳು ಹೇಳುತ್ತಿದ್ದಾರೆ: ಎಂ.ಬಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ತಪ್ಪು ಮುಚ್ಚಿಕೊಳ್ಳಲು ಜಲ‌ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ದಾಖಲೆಗಳನ್ನು ತಿರುಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಎಂ.ಬಿ. ಪಾಟೀಲ ಆರೋಪಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರವು ಅವಧಿಯಲ್ಲಿ ಯಾವುದೇ ರೀತಿಯಲ್ಲೂ ವಿಳಂಬವಾಗಿಲ್ಲ. ಲೋಪವೂ ಆಗಿಲ್ಲ. ಕಾರಜೋಳ ಅವರು ಅರ್ಧಂಬರ್ಧ ದಾಖಲೆಗಳನ್ನು ತೋರಿಸಿ ಸುಳ್ಳು ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ' ಎಂದರು.

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಆರಂಭಿಸಲಾಗಿತ್ತು. 2017ರ ಮಾರ್ಚ್ 13ರಂದು ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಸಂಪುಟ ಸಭೆ ಒಪ್ಪಿಗೆ ನೀಡಿತ್ತು. 2017ರ ಜೂನ್ 7ರಂದು ಕೇಂದ್ರ ಜಲ ಆಯೋಗಕ್ಕೆ ಡಿಪಿಆರ್ ಸಲ್ಲಿಸಲಾಗಿತ್ತು ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಡಿಪಿಆರ್ ಸಲ್ಲಿಸುವ ವಿಚಾರದಲ್ಲಿ ಕಾರಜೋಳ ಆಧಾರರಹಿತ ಆರೋಪ ಮಾಡಿದ್ದಾರೆ. 2017ರಲ್ಲೇ ಕೇಂದ್ರ ಜಲ ಆಯೋಗದ ಮಾರ್ಸೂಚಿಗಳನ್ನು ಬದಲಾವಣೆ ಮಾಡಲಾಯಿತು. ಬದಲಾದ ಮಾರ್ಗಸೂಚಿ ಪ್ರಕಾರ, ಪೂರ್ವಭಾವಿ ಕಾರ್ಯಸಾಧ್ಯತಾ ವರದಿ (ಪಿಎಫ್ಆರ್) ಸಲ್ಲಿಸುವಂತೆ ಆಯೋಗ ನಿರ್ದೇಶನ ನೀಡಿತ್ತು. ಅದರಂತೆ 2017ರ ಅಕ್ಟೋಬರ್ 9ರಂದು ಕೇಂದ್ರ ಜಲ ಆಯೋಗಕ್ಕೆ ಪಿಎಫ್ಆರ್ ಸಲ್ಲಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಯಾವ ಲೋಪವೂ ಆಗಿಲ್ಲ ಎಂದರು.

ತಾವು ಜಲ ಸಂಪನ್ಮೂಲ ಸಚಿವರಾಗಿದ್ದ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳ ಪರಿಣಾಮವಾಗಿ ಮೇಕೆದಾಟು ಯೋಜನೆಯ ಪಿಎಫ್ಆರ್ ಮತ್ತು ಡಿಪಿಆರ್ ಗಳಿಗೆ ಕೇಂದ್ರ ಜಲ ಆಯೋಗದ ಅನುಮೋದನೆ ದೊರಕಿದೆ. ತಮ್ಮ ಅವಧಿಯಲ್ಲಿ ಯಾವ ಹಂತದಲ್ಲೂ ವಿಳಂಬವಾಗಿಲ್ಲ ಎಂದು ಪಾಟೀಲ ಹೇಳಿದರು.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದ ವಿವಾದದಲ್ಲಿ ರಾಜ್ಯದ ಪರ ವಾದ ಮಂಡನೆಯಿಂದ ಹಿಂದೆ ಸರಿದಿದ್ದ ಹಿರಿಯ ವಕೀಲ ಫಾಲಿ ನಾರಿಮನ್ ಅವರನ್ನು ಅವರ ಮನೆಗೆ ಹೋಗಿ ಮನವೊಲಿಸಿದ್ದೆ. ತಿಂಗಳ ಕಾಲ ದೆಹಲಿಯಲ್ಲಿದ್ದು ಕಾನೂನು ಹೋರಾಟಕ್ಕೆ ಜತೆಯಾಗಿದ್ದೆ. ಫಲವಾಗಿ ರಾಜ್ಯಕ್ಕೆ 14.75 ಟಿಎಂಸಿ ಅಡಿ ಹೆಚ್ಚುವರಿ ನೀರು ದೊರೆಯಿತು. ಇದೆಲ್ಲವೂ ಕಾರಜೋಳ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಲ‌ ಸಂಪನ್ಮೂಲ‌ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಕೂಡ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದರು. ಹೊಸ ದರದ ಅನುಸಾರ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದ್ದರು. ಕೇಂದ್ರ ಜಲ ಸಂಪನ್ಮೂಲ ಸಚಿವರನ್ನೂ ಭೇಟಿಯಾಗಿ ಯೋಜನೆಗೆ ಒಪ್ಪಿಗೆ ನೀಡುವಂತೆ ಒತ್ತಡ ಹೇರಿದ್ದರು ಎಂದರು.

2015ರ ಮಾರ್ಚ್ ನಲ್ಲೇ ಸರ್ವಪಕ್ಷಗಳ ನಾಯಕರ ನಿಯೋಗವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕರೆದೊಯ್ದಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಕೆದಾಟು ಯೋಜನೆಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದರು. ವಿವಾದ ಇತ್ಯರ್ಥಕ್ಕೆ ಕರ್ನಾಟಕ, ತಮಿಳುನಾಡು ಮತ್ತು ಪುದುಚ್ಚೇರಿ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಮನವಿ‌ ಮಾಡಲಾಗಿತ್ತು. ಈವರೆಗೆ ಪ್ರಧಾನಿ ಏನನ್ನೂ ಮಾಡಿಲ್ಲ ಎಂದು ದೂರಿದರು.

ಮೇಕೆದಾಟು ಯೋಜನೆ ಪ್ರಸ್ತಾವ ಈಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದಿದೆ. ಪ್ರಾಧಿಕಾರದ ಒಪ್ಪಿಗೆ ಮತ್ತು ಕೇಂದ್ರ ಪರಿಸರ ಇಲಾಖೆಯ ಅನುಮತಿ ಮಾತ್ರ ಬಾಕಿ ಇವೆ. ಪ್ರಾಧಿಕಾರದ ಐದು ಸಭೆಗಳಲ್ಲಿ ಚರ್ಚೆಯೇ ಇಲ್ಲದೆ ವಿಷಯ ಮುಂದೂಡಲಾಗಿದೆ. ತ್ವರಿತವಾಗಿ ಅನುಮತಿ ಪಡೆಯುವಲ್ಲಿ ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು.

ಎರಡೂವರೆ ವರ್ಷಗಳಿಂದ ಬಿಜೆಪಿ ಸರ್ಕಾರ ನಿದ್ದೆಯಲ್ಲಿದೆ. ತಪ್ಪು ಮುಚ್ಚಿಕೊಳ್ಳಲು ಕಾರಜೋಳ ಅನಾಮಧೇಯ ಜಾಹೀರಾತು ನೀಡುತ್ತಿದ್ದಾರೆ. ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ ಹೇಳಲಿ ಎಂದು ಸವಾಲು ಹಾಕಿದರು.

ಯೋಜನೆ ವಿಳಂಬವಾಗುತ್ತಿದೆ ಎಂದು ಹಿಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಜಲ‌ ಸಂಪನ್ಮೂಲ ಸಚಿವರು ಹೇಳಿದ್ದಾರೆ. ಜಯಚಂದ್ರ ಅವರ ಸಭೆಗೂ ಮೊದಲೇ ನಾವು ಕೆಲಸ ಆರಂಭಿಸಿದ್ದೆವು ಎಂಬುದಕ್ಕೆ ದಾಖಲೆಗಳಿವೆ. ಕಾರಜೋಳ ಅರ್ಥ ಮಾಡಿಕೊಳ್ಳಬೇಕು ಎಂದರು.

ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಬಿ.ಎಲ್.‌ಶಂಕರ್ ಮತ್ತು ಕಾನೂನು ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು