ಸೋಮವಾರ, ಮೇ 23, 2022
30 °C

‘ಬಹುಸಂಖ್ಯಾತರ ಧರ್ಮದ ಅಂಶ ಪಠ್ಯದಲ್ಲಿ’: ಸಚಿವ ಬಿ.ಸಿ.ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಾಲೆಗಳಲ್ಲಿ ಶೇ 90 ರಷ್ಟು ವಿದ್ಯಾರ್ಥಿಗಳು ಯಾವ ಧರ್ಮಕ್ಕೆ ಸೇರಿರುತ್ತಾರೋ ಆ ಧರ್ಮದ ಅಂಶಗಳನ್ನು ಒಳಗೊಂಡ ನೈತಿಕ ಪಾಠವನ್ನು ಮುಂದಿನ ವರ್ಷದಿಂದ ಬೋಧಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ಶೈಕ್ಷಣಿಕ ವರ್ಷದಿಂದ ಪಂಚತಂತ್ರ, ರಾಮಾಯಣ, ಮಹಾಭಾರತ, ಭಗವದ್ಗೀತೆ ಅಲ್ಲದೆ, ಎಲ್ಲ ಧರ್ಮಗಳ ಉತ್ತಮ ಅಂಶಗಳನ್ನು ಒಳಗೊಂಡ ನೈತಿಕ ಶಿಕ್ಷಣವನ್ನು ಶಾಲೆಗಳಲ್ಲಿ ಪರಿಚಯಿಸಲಾಗುವುದು ಎಂದರು.

‘ಯಾವ ಧರ್ಮದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಶಾಲೆಗಳಿಗೆ ಬರುತ್ತಾರೋ ಆ ಮಕ್ಕಳು ಕೇಳುವ ವಿಚಾರಗಳನ್ನು ಅಳವಡಿಸುತ್ತೇವೆ. ಯಾವುದನ್ನೆಲ್ಲ ಸೇರಿಸಬೇಕು ಎಂಬುದನ್ನು ತಜ್ಞರ ಸಮಿತಿ ನಿರ್ಣಯಿಸುತ್ತದೆ’ ಎಂದರು.

ರಾಜ್ಯದ ಮದರಸಾಗಳಲ್ಲೂ ಆಧುನಿಕ ಶಿಕ್ಷಣವನ್ನು ನೀಡಬೇಕು ಎಂಬ ಬೇಡಿಕೆ ಪೋಷಕರಿಂದ ಬಂದಿದೆ. ಇಲ್ಲಿ ಓದಿದ ಮಕ್ಕಳಿಗೆ ಉದ್ಯೋಗ ಮತ್ತಿತರ ಕಡೆಗಳಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರು ಹೇಳಿದ್ದಾರೆ ಹೇಳಿದರು.

‘ಆಧುನಿಕ ಶಿಕ್ಷಣ ಆರಂಭಿಸಬೇಕು ಎಂಬ ಬಗ್ಗೆ ಮದರಸಾ ಅಥವಾ ಇತರ ಸಂಸ್ಥೆಗಳಿಂದಾಗಲೀ ಪ್ರಸ್ತಾವನೆ ಬಂದಿಲ್ಲ. ಪೋಷಕರೂ ಮನವಿ ಸಲ್ಲಿಸಿಲ್ಲ. ನಾನು ರಾಜ್ಯದ ವಿವಿಧಡೆ ಭೇಟಿ ನೀಡಿದಾಗ ಪೋಷಕರು ತಾವಾಗಿಯೇ ಆಧುನಿಕ ಶಿಕ್ಷಣದ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಅಧಿಕೃತ ಬೇಡಿಕೆ ಬಂದರೆ ಮಾತ್ರ ಪರಿಶೀಲನೆ ನಡೆಸುತ್ತೇವೆ’ ಎಂದು ನಾಗೇಶ್‌ ಸ್ಪಷ್ಟಪಡಿಸಿದರು.

1 ನೇ ತರಗತಿಗೆ ಎನ್‌ಇಪಿ

ಜೂನ್‌ನಿಂದ 1 ಮತ್ತು 2ನೇ ತರಗತಿ ಮಕ್ಕಳಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ತರಗತಿಗಳು ನಡೆಯಲಿವೆ. ಕಲಿಕಾ ವಿಧಾನಗಳು ಭಿನ್ನವಾಗಿರುತ್ತವೆ. ಹಾಡು ಮತ್ತು ಕಥೆಗಳ ಮೂಲಕ ಬೋಧನೆ ಮಾಡಲಾಗುತ್ತದೆ ಎಂದೂ ಹೇಳಿದರು.

 

‘ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ’ 

ಬೆಂಗಳೂರು: ‘ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಉನ್ನತ ಶಿಕ್ಷಣದಲ್ಲಿ ‘ಸಮಗ್ರ ಕಲಿಕಾ ನಿರ್ವಹಣಾ ವ್ಯವಸ್ಥೆ’ (ಎಲ್‌ಎಂಎಸ್‌) ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ’ ಎಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್‌ ತಿಳಿಸಿದರು.

ಎಲ್‌ಎಂಎಸ್‌ ಆಧಾರಿತ ಡಿಜಿಟಲ್‌ ಕಲಿಕೆಯ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಈ ವ್ಯವಸ್ಥೆ ಸರ್ಕಾರಿ– ಖಾಸಗಿ ಕಾಲೇಜುಗಳು, ನಗರ– ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಯಲ್ಲಿನ ತಾರತಮ್ಯ ಹಾಗೂ ಡಿಜಿಟಲ್‌ ಅಂತರ ಅಳಿಸಿ ಹಾಕುವ ವಿಶ್ವಾಸವಿದೆ’ ಎಂದರು.

‘ವಿಷಯ ಸಂವಹನ, ವಿಷಯ ಲಭ್ಯತೆ ಮತ್ತು ಮೌಲ್ಯಮಾಪನದಲ್ಲಿ ಗುರುತರ, ಮಹತ್ವದ ಬದಲಾವಣೆಗಳನ್ನು ಈ ಕಲಿಕಾ ಪದ್ಧತಿ ತರಲಿದೆ. ಆ ಮೂಲಕ, ಬೋಧನೆ- ಕಲಿಕೆಗಳಲ್ಲಿ ಕ್ರಾಂತಿಕಾರಕ ಮುನ್ನಡೆಯನ್ನು ಸಾಧಿಸಬಲ್ಲ ಪರಿಣಾಮಕಾರಿ ವೇದಿಕೆಯಾಗಿದೆ. ಇದರಿಂದ ಎಲ್ಲ ವಿದ್ಯಾರ್ಥಿಗಳು ಸುಲಭವಾಗಿ ಕಲಿಯಬಹುದು, ಸಮಯವನ್ನು ಉಳಿಸಬಹುದು. ಕಲಿಕೆಯ ವಿವಿಧ ಅಂಶಗಳ ವೈಜ್ಞಾನಿಕ ವಿಶ್ಲೇಷಣೆ, ವಿದ್ಯಾರ್ಥಿಗಳು, ಅಧ್ಯಾಪಕರ ಮತ್ತು ಕಾಲೇಜುಗಳ ಹಿಂದಿನ ಮಾಹಿತಿ, ಕಂಟೆಂಟ್‌ ರೇಟಿಂಗ್‌, ವಿದ್ಯಾರ್ಥಿಗಳಿಂದ ಮತ್ತು ತರಗತಿಗಳಲ್ಲಿ ಅಧ್ಯಾಪಕರಿಂದ ಇ-ಕಂಟೆಂಟ್‌ ಬಳಕೆಯ ಟ್ರ್ಯಾಕಿಂಗ್‌, ಸಂಪೂರ್ಣ ವಿವರಗಳಿರುವ ವರದಿ ತಯಾರಿಕೆ ಇತ್ಯಾದಿಗಳಿಗೆ ಈ ಪದ್ಧತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

‘ಈ ತಂತ್ರಾಂಶದ ಮೂಲಕ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ, ಕಾಲೇಜು ಅರ್ಜಿ ಶುಲ್ಕ, ಪರೀಕ್ಷಾ ಶುಲ್ಕ ಸೇರಿದಂತೆ ‌ಎಲ್ಲ ಶುಲ್ಕಗಳನ್ನು ಆನ್ ಲೈನ್‌ನಲ್ಲಿ ಪಾವತಿಸಲು ಅವಕಾಶ ನೀಡಿದೆ. ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಲು ಮಾಡುವ ವೆಚ್ಚವನ್ನೂ ಉಳಿಸಬಹುದಾಗಿದೆ’ ಎಂದೂ ಅವರು ವಿವರಿಸಿದರು.

ನವದೆಹಲಿ: ಶೈಕ್ಷಣಿಕ ಸಹಯೋಗದ ಮೂಲಕ ಭಾರತೀಯ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಿಂದ ಜಂಟಿ ಅಥವಾ ದ್ವಿ ಪದವಿಗಳನ್ನು ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳು ವಿದೇಶಿ ವಿ.ವಿಗಳ ಪದವಿ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ. ಜಗದೀಶ್‌ ಕುಮಾರ್‌ ತಿಳಿಸಿದರು.

ಮಂಗಳವಾರ ನಡೆದ ಸಭೆಯಲ್ಲಿ ಯುಜಿಸಿ ಈ ನಿರ್ಧಾರವನ್ನು ಕೈಗೊಂಡಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಸಂಸ್ಥೆಯಿಂದ (ನ್ಯಾಕ್‌) ಮಾನ್ಯತೆ ಪಡೆದು ಕನಿಷ್ಠ 3.01 ಅಂಕಗಳನ್ನು ಹೊಂದಿರಬೇಕು. ಇಲ್ಲವೇ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯ (ಎನ್ಐಆರ್‌ಎಫ್‌) ಅಗ್ರ 100 ಶ್ರೇಯಾಂಕದ ಒಳಗೆ ಕಾಲೇಜುಗಳು ಇರಬೇಕು.

ಟೈಮ್ಸ್‌ ಹೈಯರ್‌ ಎಜುಕೇಶನ್‌ ಅಥವಾ ಕ್ಯೂಎಸ್‌ ಜಾಗತಿಕ ವಿಶ್ವವಿದ್ಯಾಲಯದಿಂದ ಪ್ರಮಾಣೀಕರಿಸಲ್ಪಟ್ಟ 1000 ಅಗ್ರ ಶ್ರೇಯಾಂಕಿತ ಹೊಂದಿದ ಯಾವುದೇ ವಿದೇಶಿ ಕಾಲೇಜುಗಳೊಡನೆ ಸಹಯೋಗ ನಡೆಸಬಹುದಾಗಿದೆ. ಇದಕ್ಕೆ ಯುಜಿಸಿಯಿಂದ ಪೂರ್ವಾನುಮತಿಯ ಅಗತ್ಯವಿಲ್ಲ’ ಎಂದು ಹೇಳಿದರು.

‘ಈ ಕಾರ್ಯಕ್ರಮದಡಿ ವಿದೇಶಿ ವಿದ್ಯಾಸಂಸ್ಥೆಗಳಿಂದ ವಿದ್ಯಾರ್ಥಿಗಳು ಶೇಕಡ 30ಕ್ಕಿಂತ ಹೆಚ್ಚು ಕ್ರೆಡಿಟ್‌ಗಳನ್ನು ಪಡೆದಿರಬೇಕು. ಆದರೆ ಆನ್‌ಲೈನ್‌ ಅಥವಾ ದೂರ ಶಿಕ್ಷಣ ಹಾಗೂ ಮುಕ್ತ ವಿವಿಗಳಲ್ಲಿ ನೀಡಲಾಗುವ ಪದವಿ ಕಾರ್ಯ

ಕ್ರಮಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ’ ಎಂದು ಜಗದೀಶ್‌ ಹೇಳಿದರು.

 

ಪಿಯು ಪರೀಕ್ಷೆ: ಉಚಿತ ಪ್ರಯಾಣ

ಬೆಂಗಳೂರು: ಏ.22ರಿಂದ ಮೇ 18ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಉಚಿತ ವಾಗಿ ಪ್ರಯಾಣ ಮಾಡಲು ಬಿಎಂಟಿಸಿ ಅವಕಾಶ ಕಲ್ಪಿಸಿದೆ.

ವ್ಯಾಸಂಗ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷಾ ಕೇಂದ್ರ ಇಲ್ಲದಿದ್ದರೆ ನಿರ್ವಾಹಕ ರಿಗೆ ಪರೀಕ್ಷಾ ಪ್ರವೇಶ ಪತ್ರ ತೋರಿಸಿ ಪರೀಕ್ಷಾ ಕೇಂದ್ರಗಳಿಗೆ ಬಸ್‌ಗಳಲ್ಲಿ ಉಚಿತವಾಗಿ ಹೋಗಿ ಬರಬಹುದು ಎಂದು ಬಿಎಂಟಿಸಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು