ಬುಧವಾರ, ಏಪ್ರಿಲ್ 14, 2021
31 °C
ಕಲಬುರ್ಗಿ: ಬೀದರ್‌ನಲ್ಲಿ ಮುಂದುವರಿದ ಬಸ್‌ ಸಂಚಾರ

ಮಹಾರಾಷ್ಟ್ರಕ್ಕೆ ಬಸ್‌ ಸಂಚಾರ ಸ್ಥಗಿತ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕಲಬುರ್ಗಿಯಿಂದ ಸಾರಿಗೆ ಸೇವೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಶುಕ್ರವಾರದಿಂದ ಸ್ಥಗಿತಗೊಳಿಸಿದೆ. ಮಹಾರಾಷ್ಟ್ರದಿಂದಲೂ ಬಸ್‌ಗಳು ಬರುತ್ತಿಲ್ಲ.

‘ಕಲಬುರ್ಗಿಯಿಂದ ನಿತ್ಯ 60 ಬಸ್‌ಗಳು ಮಹಾರಾಷ್ಟ್ರದ ವಿವಿಧ ನಗರಗಳಿಗೆ ಸಂಚರಿಸುತ್ತಿದ್ದವು. ಅಲ್ಲಿಂದ 12 ಬಸ್‌ಗಳು ಬರುತ್ತಿದ್ದವು. ಕೋವಿಡ್ ಪ್ರಕರಣಗಳು ಹೆಚ್ಚಿರುವ ಕಾರಣ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ’ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ಡಿ. ಕೊಟ್ರಪ್ಪ ತಿಳಿಸಿದರು.

ಆದರೆ, ಬೀದರ್‌ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಹೆಚ್ಚಿದೆ. ಬೀದರ್ ಮತ್ತು ಮಹಾರಾಷ್ಟ್ರದ ನಡುವೆ ಬಸ್‌ಗಳ ಸಂಚಾರ ಮುಂದುವರೆದಿದೆ.

ಮಹಾರಾಷ್ಟ್ರದಿಂದ ಬೀದರ್‌ ಜಿಲ್ಲೆಗೆ ಬರಲು ಆರು ಮಾರ್ಗಗಳಿವೆ. ಬೀದರ್‌ ಜಿಲ್ಲಾಡಳಿತವು ಮೂರು ಸ್ಥಳಗಳಲ್ಲಿ ಮಾತ್ರ ಚೆಕ್‌ಪೋಸ್ಟ್‌ ತೆರೆದಿದೆ. ಇಲ್ಲಿ ತಪಾಸಣೆ ಬಿಗಿಗೊಳಿಸಿರುವ ಕಾರಣ ಮಹಾರಾಷ್ಟ್ರದಿಂದ ಬರುತ್ತಿರುವ ಜನ ಬೇರೆ ಮಾರ್ಗಗಳ ಮೂಲಕ ಜಿಲ್ಲೆ ಪ್ರವೇಶಿಸುತ್ತಿದ್ದಾರೆ.

‘ಪ್ರಸ್ತುತ 100 ಜನರನ್ನು ಪರೀಕ್ಷಿಸಿದರೆ ಇಬ್ಬರಲ್ಲಿ ಕೋವಿಡ್ ಕಂಡು ಬರುತ್ತಿದೆ. ಬೀದರ್ ಕೆಂಪು ವಲಯದಲ್ಲಿ ಗುರುತಿಸಿಕೊಂಡಿದೆ. ಗಡಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್‌ ತಿಳಿಸಿದ್ದಾರೆ.

ಕೇರಳ ಗಡಿಗಳಲ್ಲಿ ಮುನ್ನಚ್ಚರಿಕೆ (ಮೈಸೂರು): ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಮೈಸೂರು ಜಿಲ್ಲೆಯ ಬಾವಲಿ ಸಮೀಪ ಹಾಗೂ ಕೊಡಗಿನ ಕುಟ್ಟ ಹಾಗೂ ಮಾಕುಟ್ಟ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ಕೋವಿಡ್ ತಪಾಸಣೆ ನಡೆಸಲಾಗುತ್ತಿದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಇಲ್ಲದೇ ಬರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ. ಆದರೆ, ಚಾಮರಾಜನಗರದ ಮೂಲೆಹೊಳೆ ಚೆಕ್‌ಪೋಸ್ಟ್‌ನಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾತ್ರ ಮಾಡಲಾಗುತ್ತಿದೆ.

ಕೊಡಗಿನ ಕುಟ್ಟ ಹಾಗೂ ಮಾಕುಟ್ಟ, ಮೈಸೂರಿನ ಬಾವಲಿ ಚೆಕ್‌ಪೋಸ್ಟ್‌ಗಳಲ್ಲಿ ಬರುವವರಿಗೆ 72 ಗಂಟೆಗಳ ಮೊದಲು ಪಡೆದ ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಹಾಜರುಪಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್, ‘ಈಗ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿದೆ. ಶೇ 90ರಷ್ಟು ಮಂದಿ ಆರ್‌ಟಿಪಿಸಿಆರ್‌ ವರದಿಯೊಂದಿಗೆ ಬರುತ್ತಿದ್ದಾರೆ. ಸರಕುಸಾಗಣೆ ವಾಹನಗಳ ಚಾಲಕರಿಗೆ 15 ದಿನಗಳಿಗೆ ಒಮ್ಮೆ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ’
ಎಂದರು.

‘ಥರ್ಮಲ್‌ ಸ್ಕ್ರೀನಿಂಗ್‌ ಮಾಡಿದಾಗ ಕೋವಿಡ್‌ ಲಕ್ಷಣಗಳು ಕಂಡು ಬಂದಲ್ಲಿ, ವಾ‍ಪ‍ಸ್‌ ಕಳುಹಿಸುತ್ತಿದ್ದೇವೆ. ಲಕ್ಷಣಗಳೂ ಇಲ್ಲ; ಕೋವಿಡ್‌ ನೆಗೆಟಿವ್‌ ಪ್ರಮಾಣಪತ್ರ ಇಲ್ಲ ಎಂದಾದರೆ, ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ’ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಸಿ.ರವಿ ಹೇಳಿದರು.

*
ಬೆಳಗಾವಿ ಗಡಿಯಲ್ಲಿ ತಪಾಸಣೆ ಕಾಟಾಚಾರ
ಕಾರವಾರ/ ಬೆಳಗಾವಿ/ ವಿಜಯಪುರ: ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೂ ಅಂತರರಾಜ್ಯ ಬಸ್‌ಗಳ ಕಾರ್ಯಾಚರಣೆ ಮುಂದುವರಿದಿದೆ. ಪ್ರಯಾಣಿಕರು 72 ತಾಸಿನೊಳಗೆ ಪಡೆದಿರುವ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ.

ಬೆಳಗಾವಿ ಗಡಿಯಲ್ಲಿ ತಪಾಸಣೆಯು ಕಾಟಾಚಾರಕ್ಕೆ ಎನ್ನುವಂತೆ ನಡೆಯುತ್ತಿರುವುದು ಕಂಡುಬಂದಿದೆ. ರಾಜ್ಯದ ಗಡಿಯಲ್ಲಿ ಆ ರಾಜ್ಯದಿಂದ ಕಾರುಗಳಲ್ಲಿ ಬರುವವರಿಂದ ಮಾತ್ರವೇ ಕೋವಿಡ್–19 ನೆಗೆಟಿವ್ ವರದಿ ಕೇಳಲಾಗುತ್ತಿದೆ. ಉಳಿದ ವಾಹನಗಳಲ್ಲಿ ಬರುವವರನ್ನು ತಪಾಸಣೆ ಮಾಡುತ್ತಿಲ್ಲ.

ಮಹಾರಾಷ್ಟ್ರದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ ಶೇಕಡ 30ರಿಂದ 40ರಷ್ಟು ಕಡಿಮೆಯಾಗಿದೆ ಎಂದು ಬೆಳಗಾವಿಯ ಸಾರಿಗೆ ಅಧಿಕಾರಿಗಳು ತಿಳಿಸಿದರು.

ವಿಜಯಪುರದಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ಬಸ್‌ ಸಂಚಾರ ಮುಂದುವರಿದಿದೆ. ರಾಜ್ಯದಿಂದ ಮಹಾರಾಷ್ಟ್ರಕ್ಕೆ ಹೋಗುವವರಿಗೆ ಕೋವಿಡ್ ಪರೀಕ್ಷೆ ಮಾಡಿಸಿರಬೇಕು ಎಂಬ ನಿಯಮ ಕಡ್ಡಾಯವಿಲ್ಲ.

‘ವಿಜಯಪುರ ಜಿಲ್ಲೆಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ನವೆಂಬರ್‌, ಡಿಸೆಂಬರ್‌, ಜನವರಿ ತಿಂಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಹೋಲಿಸಿದರೆ ಫೆಬ್ರುವರಿ, ಮಾರ್ಚ್‌ನಲ್ಲಿ ಗಣನೀಯವಾಗಿ ಕಡಿಮೆಯಾಗಿದೆ’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಪ್ರತಿಕ್ರಿಯಿಸಿದರು.

ಕಾರವಾರದಿಂದ ಮಹಾರಾಷ್ಟ್ರಕ್ಕೆ ಬಸ್‌ಗೆ ನೇರ ಸಂಪರ್ಕವಿಲ್ಲ. ಆದರೆ, ಖಾಸಗಿ ವಾಹನಗಳ ಸಂಚಾರ ಸಾಕಷ್ಟಿದೆ. ಸಮೀಪದ ಮಾಜಾಳಿಯ ಗೋವಾ ಗಡಿಯಲ್ಲಿ ಯಾವುದೇ ಪರಿಶೀಲನೆ ನಡೆಯುತ್ತಿಲ್ಲ. ಮಹಾರಾಷ್ಟ್ರದಿಂದ ಬಂದವರನ್ನು ಗೋವಾದವರೆಂದು ಪರಿಗಣಿಸಿ ಕೋವಿಡ್ ವರದಿ ಇಲ್ಲದೇ ಕಳುಹಿಸಲಾಗುತ್ತಿದೆ. ಗೋವಾ ಕೂಡ ಮಹಾರಾಷ್ಟ್ರದಿಂದ ಬರುವವರಿಗೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿದೆ. ಹಾಗಾಗಿ ಮಹಾರಾಷ್ಟ್ರದಿಂದ ಬಂದವರನ್ನು ತಕ್ಷಣವೇ ಪತ್ತೆ ಹಚ್ಚುವುದು ಸವಾಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು