ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಮುನ್ನವೇ ನಾನೇ ಸಿಎಂ ಎನ್ನುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

Last Updated 23 ಜುಲೈ 2022, 6:45 IST
ಅಕ್ಷರ ಗಾತ್ರ

ಮೈಸೂರು: 'ವಿಧಾನಸಭೆ ಚುನಾವಣೆಗೆ ಮುನ್ನವೇ ನಾನು ಮುಖ್ಯಮಂತ್ರಿ, ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡು ಓಡಾಡುವುದು ಸರಿಯಲ್ಲ' ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, 'ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಮೈಸೂರಿನಲ್ಲೋ, ಬೆಂಗಳೂರಿನಲ್ಲೋ ಅಥವಾ ಕಲಬುರಗಿಯಲ್ಲೋ ತೀರ್ಮಾನ ಆಗುವುದಿಲ್ಲ. ಪಕ್ಷದ ಹೈಕಮಾಂಡ್ ಅದನ್ನು ತೀರ್ಮಾನ ಮಾಡುತ್ತದೆ. ಅವತ್ತಿನ ರಾಜಕೀಯ ಪರಿಸ್ಥಿತಿಯ ಆಧಾರದ ಮೇಲೆ ಯಾರಿಗೆ ನಾಯಕತ್ವ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ' ಎಂದು ತಿಳಿಸಿದರು.

'ಕಾಂಗ್ರೆಸ್ ಯಾವಾಗಲೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಹೋಗುತ್ತದೆ. ಈ ಬಾರಿ, ಆ ಬಾರಿ ಅಂತೇನಿಲ್ಲ. ನಮ್ಮದು ಯಾವಾಗಲೂ ಸಾಮೂಹಿಕ‌ ನಾಯಕತ್ವದಲ್ಲಿಯೇ ನಡೆಯುತ್ತದೆ' ಎಂದರು.

'ಮೊದಲು ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಅದೇ ನಮ್ಮ ಉದ್ದೇಶ' ಎಂದು ತಿಳಿಸಿದರು.

'ರಾಜ್ಯ ರಾಜಕಾರಣಕ್ಕೆ ಮರಳುವಿರಾ' ಎಂಬ ಪ್ರಶ್ನೆಗೆ, 'ನೀವು (ಮಾಧ್ಯಮದವರು) ಅವಕಾಶ‌ ಕೊಟ್ಟರೆ
ಬರುತ್ತೇನೆ. ಎಲ್ಲ ಸೇರಿ ಅವಕಾಶ ಕೊಟ್ಟರೆ ನೋಡೋಣ' ಎಂದು ಪ್ರತಿಕ್ರಿಯಿಸಿದರು.

'ರಾಜಕಾರಣದಿಂದ ಬಿ.ಎಸ್. ಯಡಿಯೂರಪ್ಪ ನಿವೃತ್ತಿಯಾಗುವುದು ಅವರ ವೈಯಕ್ತಿಕ ನಿರ್ಧಾರ. ಅದರ ಬಗ್ಗೆ ನಾನೇನನ್ನೂ ಮಾತನಾಡುವುದಿಲ್ಲ. ವೈಯಕ್ತಿಕವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂ ಇರುತ್ತದೆ' ಎಂದರು.

'ನಾವು ಇರಲಿ, ಬಿಡಲಿ ದೇಶ ಇದ್ದೇ ಇರುತ್ತದೆ. ನಾನಿಲ್ಲ ಎಂದರೆ ಇನ್ನೊಬ್ಬರು ಬರುತ್ತಾರೆ' ಎಂದು ಹೇಳಿದರು.

ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದ ಬಗ್ಗೆ ಪ್ರತಿಕ್ರಿಯಿದ ಖರ್ಗೆ, 'ಈ ದೇಶಕ್ಕಾಗಿ ಮನೆಯನ್ನೇ ಕಳೆದುಕೊಂಡವರು ₹ 1 ಕೋಟಿ ಅವ್ಯವಹಾರ ಮಾಡುತ್ತಾರೇನ್ರಿ?' ಎಂದು ಕೇಳಿದರು.

'ಗಾಂಧಿ ಕುಟುಂಬವನ್ನು ವಿಚಾರಣೆಗೆ ಕರೆದ ಕೂಡಲೇ ನಾವು ಮಾನಸಿಕವಾಗಿ ಕುಗ್ಗುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ಚಳವಳಿಗಳನ್ನು ನಡೆಸಿದ ಹಾಗೂ ತ್ಯಾಗ-ಬಲಿದಾನ ಮಾಡಿರುವ ಪಕ್ಷ ಕಾಂಗ್ರೆಸ್. ನಮ್ಮನ್ನು ಬಿಜೆಪಿಯವರು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ‌. ಸತ್ಯಗ್ರಾಹವನ್ನೇ ಮಾಡದವರು, ತ್ಯಾಗ- ಬಲಿದಾನ ಗೊತ್ತಿಲ್ಲದ ಬಿಜೆಪಿಯವರಿಂದ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ' ಎಂದು ಗುಡುಗಿದರು.

'ಆಡಳಿತ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಗಿಮಿಕ್‌ಗಳನ್ನು ಬಿಜೆಪಿ ಮಾಡುತ್ತಿದೆ' ಎಂದು ಆರೋಪಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮುಖಂಡರಾದ ಡಾ.ಎಚ್.ಸಿ.‌ಮಹದೇವಪ್ಪ, ಕೋಟೆ ಶಿವಣ್ಣ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್, ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT